ತುಮಕೂರು: ಮಹಾದಾಸೋಹಿ ಸಿದ್ದಗಂಗೆಯ ಶಿವಕುಮಾರ ಶ್ರೀಗಳ ಪುಣ್ಯ ಸ್ಮರಣೆ ಇಂದು ನೆರವೇರಲಿದೆ.
ಕಾಯಕ ಮತ್ತು ದಾಸೋಹಕ್ಕೇ ಮೀಸಲಾಗಿತ್ತು. ‘ಸಂನ್ಯಾಸಿ’ ಎಂದರೆ, ‘ತನ್ನ ಜೀವನವನ್ನು ಸಮಾಜಕ್ಕಾಗಿ ತ್ಯಾಗ ಮಾಡಿದವರು’ ಎಂದರ್ಥ. ಶ್ರೀಗಳು ಅದಕ್ಕೆ ಅನ್ವರ್ಥರೆಂಬಂತೆ ಜೀವಿಸಿದರು. ‘ದಾಸೋಹ’ವೆಂದರೆ ಕೇವಲ ‘ದಾನಮಾಡುವುದು’ ಎಂಬ ಪರಿಕಲ್ಪನೆಯನ್ನು ಹೊಂದಿದ್ದ ಜಗತ್ತಿಗೆ, ‘ದಾಸೋಹ’ವೆಂಬ ಪವಿತ್ರ ಪದಕ್ಕೆ ಒಂದು ಹೊಸ ಸ್ವರೂಪವನ್ನೇ ನೀಡಿದರು. ತನುಮನಧನಗಳನ್ನು ಗುರುಲಿಂಗಜಂಗಮಕ್ಕರ್ಪಿಸುವುದೇ ತ್ರಿವಿಧ ದಾಸೋಹವೆಂದರು. ಅನ್ನ ದಾಸೋಹದ ಜತೆಗೆ ಅಕ್ಷರ ದಾಸೋಹ, ಆಶ್ರಯ ದಾಸೋಹ, ಅಭಯ ದಾಸೋಹ, ಭಕ್ತಿ ದಾಸೋಹ, ಯುಕ್ತಿ ದಾಸೋಹ ಹಾಗೂ ಮಮಕಾರ ದಾಸೋಹಗಳೂ ಇವೆ ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟರು.
ಜನವರಿ 21 ದಾಸೋಹ ದಿನ.
ಡಾ. ಶಿವಕುಮಾರ ಶ್ರೀಗಳು ಲಿಂಗೈಕ್ಯರಾದ ದಿನವಾದ ಜನವರಿ 21ನ್ನು ‘ದಾಸೋಹ ದಿನ’ವೆಂದು ಘೋಷಿಸಲಾಗಿದೆ. ಇದು ನಿಜವಾಗಿಯೂ ಸಾರ್ಥಕತೆಯನ್ನು ಪಡೆಯಬೇಕಾದರೆ, ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನದಾನ ಮಾಡಬೇಕು. ಕಷ್ಟದಲ್ಲಿ ಇರುವವರಿಗೆ ನಿಷ್ಕಲ್ಮಶ ಮನಸ್ಸಿನಿಂದ ಕೈಲಾದ ಸಹಾಯ ಮಾಡಬೇಕು. ಆಗ ಮಾತ್ರ ಈ ದಾಸೋಹ ದಿನಕ್ಕೊಂದು ಅರ್ಥ ಸಿಗುತ್ತದೆ. ಅದೇ ಶಿವಕುಮಾರ ಶ್ರೀಗಳಿಗೆ ನೀಡುವಂತಹ ನಿಜವಾದ ಗೌರವ.
ಶಿವಕುಮಾರ ಸ್ವಾಮೀಜಿ ಸ್ಮರಣೋತ್ಸವ
ಸಿದ್ಧಗಂಗಾ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ:
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ 6ನೇ ವರ್ಷದ ಸಂಸ್ಮರಣೋತ್ಸವ ಕಾರ್ಯಕ್ರಮ ಜ.21ರಂದು ಮಠದಲ್ಲಿ ನಡೆಯಲಿದೆ.
ಬೆಳಿಗ್ಗೆ 5 ಗಂಟೆಯಿಂದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ನಂತರ ರುದ್ರಾಕ್ಷಿ ಮಂಟಪದಲ್ಲಿ ಶಿವಕುಮಾರ ಸ್ವಾಮೀಜಿ ಮೂರ್ತಿಯ ಮೆರವಣಿಗೆ ಏರ್ಪಡಿಸಲಾಗಿದೆ.
ಬೆಳಿಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಾಹಿತಿ ಗೊ.ರು.ಚನ್ನಬಸಪ್ಪ ಅವರಿಗೆ ‘ಸಿದ್ಧಗಂಗಾಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್, ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸುತ್ತೂರು ಸಂಸ್ಥಾನ ಮಠದ ಶಿವರಾತ್ರಿ ದೇಶೀಕೆಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಜರಾಗಲಿದ್ದಾರೆ.
ಕೇಂದ್ರ ಸಚಿವ ವಿ.ಸೋಮಣ್ಣ, ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಶಾಸಕರಾದ ಬಿ.ಸುರೇಶ್ಗೌಡ, ಬಿ.ಜಿ.ಜ್ಯೋತಿಗಣೇಶ್ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿ ಸಂಘದ 68ನೇ ಸರ್ವ ಸದಸ್ಯರ ಮಹಾಧಿವೇಶನ ಹಮ್ಮಿಕೊಳ್ಳಲಾಗಿದೆ. ಸಾಹಿತಿ ಟಿ.ಎಚ್.ಶೈಲಜಾ, ಜಿ.ಎನ್.ಬಸವರಾಜಪ್ಪ ಅವರಿಗೆ ‘ಸಿದ್ಧಗಂಗಾ ಶಿವಕುಮಾರಶ್ರೀ’ ಪ್ರಶಸ್ತಿ, ಎಸ್.ಶಿವಾನಂದ ಶರ್ಮಾ, ಎಸ್.ಆರ್.ರೇಣುಕಾರಾಧ್ಯ, ಶಿವಕುಮಾರ ಮೂರ್ತಿ, ವೆಂಕಟೇಗೌಡ, ಬಿ.ಎಂ.ಪರಮೇಶ್ವರಪ್ಪ (ಮರಣೋತ್ತರ) ಅವರಿಗೆ ‘ಸಂಘಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
‘ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಹಾಜರಾಗುವವರಿಗೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಆವರಣ, ಸಾದರ ಕೊಪ್ಪಲು ಪ್ರಸಾದ ನಿಲಯ ಮತ್ತು ಮಠದ ಹೊಸ ಪ್ರಸಾದ ನಿಲಯಗಳಲ್ಲಿ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ತಿಳಿಸಿದ್ದಾರೆ.