ಕನಕಗಿರಿ : ಇಲ್ಲಿಗೆ ಸಮೀಪದ ಬಂಕಾಪುರ ಗ್ರಾಮದ ಪರಿಸರದ ನಿಯೋಜಿತ ತೋಳಧಾಮದಲ್ಲಿ ತೋಳವೊಂದು ಎಂಟು ಮರಿಗಳಿಗೆ ಜನ್ಮ ನೀಡಿದೆ. ಎಂಟು ಮರಿಗಳು ಓಡಾಡುತ್ತಿರುವುದು ಅರಣ್ಯ ಇಲಾಖೆ ಇರಿಸಿರುವ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಗಂಗಾವತಿ ಪ್ರಾದೇಶಿಕ ವಲಯ ವ್ಯಾಪ್ತಿಯಲ್ಲಿ ಸುಮಾರು 332 ಹೆಕ್ಟೇರ್ ಪ್ರದೇಶದಲ್ಲಿರುವ ಬಂಕಾಪುರ ತೋಳಧಾಮವು ಕುರುಚಲು ಅರಣ್ಯ ಪ್ರದೇಶ ಹೊಂದಿದೆ. ಗುಡ್ಡಗಳು ಸ್ವಾಭಾವಿಕ ಗುಹೆಗಳನ್ನೂ ಹೊಂದಿದ್ದು ತೋಳ, ಚಿರತೆ, ನವಿಲು, ಕತ್ತೆಕಿರುಬ, ನರಿ, ಮೊಲ, ಮುಳ್ಳುಹಂದಿ ಮೊದಲಾದ ಹಲವು ವನ್ಯಜೀವಿಗಳ ತಾಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಡಿಯನ್ ಗ್ರೇ ಊಲ್ಸ್ ಎಂಬ ಪ್ರಭೇದದ ತೋಳಗಳು ಈ ಸಂರಕ್ಷಿತ ಪ್ರದೇಶದಲ್ಲಿವೆ. ಎಲ್ಲಾ ಮರಿಗಳನ್ನೂ ಉಳಿಸಲು ಅರಣ್ಯಾಧಿಕಾರಿಗಳು ಕ್ರಮವಹಿಸಿದ್ದಾರೆ. ಈ ಪ್ರದೇಶವನ್ನು ತೋಳ ವನ್ಯಧಾಮ ಎಂದು 15ನೇ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಘೋಷಿಸಲಾಗಿದ್ದು, ಸಂಪುಟ ಉಪಸಮಿತಿ ಸಭೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೂ ನಿರ್ಣಯಿಸಲಾಗಿದೆ. ಮರಿಗಳು ಸೇರಿ ಸುಮಾರು 35-40 ತೋಳಗಳಿವೆ. ಇವುಗಳ ಸುರಕ್ಷತೆಗೆ ಕ್ರಮ ವಹಿಸಲಾಗಿದೆ ಎಂದು ಜೀವಿಶಾಸ್ತ್ರ ಇಲಾಖೆ ತಿಳಿಸಿದೆ.
ಪ್ರವಾಸಿ ತಾಣವಾಗಿ ಅಭಿವೃದ್ಧಿ: ಗಂಗಾವತಿ ನಗರದಿಂದ 15 ಕಿ.ಮೀ ದೂರದಲ್ಲಿರುವ ಈ ವನ್ಯಜೀವಿ ಧಾಮದಲ್ಲಿ ಸಫಾರಿ ವ್ಯವಸ್ಥೆ ಕಲ್ಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಅರಣ್ಯ ಇಲಾಖೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಫಲವಾಗಿ ಬಂಕಾಪೂರ ತೋಳಧಾಮದಲ್ಲಿ ಅಳಿವಿನಂಚಿನಲ್ಲಿರುವ ತೋಳಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಅಲ್ಲಿ ತೋಳ ವನ್ಯಧಾಮದಲ್ಲಿ ಸಫಾರಿ ಆರಂಭಿಸುವ ಚಿಂತನೆಯಿದೆ.