ಬೆಳಗಾವಿ : ಇಲ್ಲಿಯ ಹನುಮಾನ್ ನಗರದಲ್ಲಿರುವ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಫಿರೋಜ್ ಸೇಠ್ ಅವರ ನಿವಾಸಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಾನುವಾರ ತೆರಳಿ ಉಪಾಹಾರ ಸೇವಿಸಿದರು. ಸಚಿವ ಡಾ ಎಂ ಸಿ ಸುಧಾಕರ್, ಶಾಸಕ ಅಸೀಫ್ ಸೇಠ್, ಎಂಎಲ್ಸಿಗಳಾದ ಎಸ್ ರವಿ, ಚನ್ನರಾಜ ಹಟ್ಟಿಹೊಳಿ ಹಾಗೂ ದುಂತೂರು ವಿಶ್ವನಾಥ್, ಮೃಣಾಳ್ ಹೆಬ್ಬಾಳ್ಕರ್ ಜತೆಗಿದ್ದರು.
ಈ ಬೆಳವಣಿಗೆ ಕರ್ನಾಟಕ ಕಾಂಗ್ರೆಸ್ ಸರಕಾರದ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ. ಇಷ್ಟರಲ್ಲೇ 15 ಕಾಂಗ್ರೆಸ್ ಶಾಸಕರ ಜೊತೆ ದುಬೈ ಪ್ರವಾಸ ತೆರಳುತ್ತಿರುವುದಾಗಿ ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಸಚಿವ ಸತೀಶ ಜಾರಕಿಹೊಳಿ ಬೆಂಬಲಿಗ ರಾಜು ಸೇಠ್ ಹೇಳಿದ್ದರು. ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ಸೇಠ್ ಅವರ ಮನೆಗೆ ತೆರಳಿ ಉಪಹಾರ ಸೇವನೆ ಮಾಡಿದ್ದು ಚರ್ಚೆಗೆ ಗ್ರಾಸವಾಯಿತು. ಈ ಸಂದರ್ಭದಲ್ಲಿ ಅವರು ಸೇಠ್ ಗೆ ಪಾಠ ಮಾಡಿದ್ದಾರೆ ಎನ್ನಲಾಗಿದೆ. ಸಿಪಿಎಡ್ ಮೈದಾನದಲ್ಲಿ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಅವರ ಜೊತೆ ಮಾತನಾಡಿದರು. ಪಿಎಗಳು, ಗನ್ ಮ್ಯಾನ್ ಗಳನ್ನು ವಾಹನದಿಂದ ಕೆಳಗಿಳಿಸಿ ಶೇಠ್ ಜೊತೆಗೆ 15 ನಿಮಿಷಗಳ ಕಾಲ ಇಬ್ಬರು ಕಾರಿನಲ್ಲಿ ಕುಳಿತು ಮಾತುಕತೆ ನಡೆಸಿದರು.