ಮಂಗಳೂರು : ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದು, ನಂತರ ತಾನೂ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಕೊಲೆಯಾದ ಮಹಿಳೆಯನ್ನು ವಿನೋದಾ ಕುಮಾರಿ ಎಂದು ಗುರುತಿಸಲಾಗಿದೆ. ಗುಂಡು ಹಾರಿಸಿ ನಂತರ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವನನ್ನು ರಾಮಚಂದ್ರಗೌಡ ಎಂದು ಗುರುತಿಸಲಾಗಿದೆ.
ರಾಮಚಂದ್ರ, ನಿತ್ಯ ಕುಡಿಕೊಂಡು ಬಂದು ಪತ್ನಿ ವಿನೋದಾ ಜೊತೆ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ. ಪ್ರತಿಬಾರಿ ಗಲಾಟೆ ಮಾಡುವ ಸಂದರ್ಭದಲ್ಲಿ ತನ್ನ ಬಳಿಯಿದ್ದ ಕೋವಿ ತೋರಿಸಿ ಗುಂಡು ಹಾರಿಸುವ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಶುಕ್ರವಾರ ರಾತ್ರಿ ಪತಿ-ಪತ್ನಿ ನಡುವೆ ಮತ್ತೊಮ್ಮೆ ಜಗಳ ನಡೆದಾಗ ಅದೇ ರೀತಿ ಕೋವಿ ಗುರಿ ಹಿಡಿದಿದ್ದಾಗ ಮಗ ಪ್ರಶಾಂತ ಅದನ್ನು ತಡೆಯಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪ್ರಶಾಂತನತ್ತ ಕೋವಿಯನ್ನು ಗುರಿಯಾಗಿಟ್ಟು ಗುಂಡು ಹೊಡೆದಿದ್ದು ಆಗ ವಿನೋದಾ ಅಡ್ಡ ಬಂದಾಗ ಗುಂಡು ಅವಳಿಗೆ ತಗುಲಿದೆ ಎನ್ನಲಾಗಿದೆ.
ನಂತರ ಪತ್ನಿಯ ಸಾವಿನಿಂದ ಆಘಾತಗೊಂಡ ರಾಮಚಂದ್ರ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.