ಬೆಳಗಾವಿ: ಬೆಳಗಾವಿಯ ಅನಗೋಳದಲ್ಲಿ ಯುವಕನೊಬ್ಬ ಸಾಲ ಮರುಪಾವತಿ ಮಾಡದೇ ಇರುವುದಕ್ಕೆ ಬಲತ್ಕಾರವಾಗಿ ಅಪ್ರಾಪ್ತೆಯನ್ನೇ ಕರೆದುಕೊಂಡು ಹೋಗಿ ಮದುವೆಯಾದ ಘಟನೆ ಬೆಳಕಿಗೆ ಬಂದಿದೆ.
ವಿಶಾಲ ಢವಳಿ ಎಂಬಾತ ಈ ಕೃತ್ಯ ಎಸಗಿದ್ದಾನೆ. ಬಾಲಕಿಯ ಚಿಕ್ಕಪ್ಪ ಮತ್ತು ತಾಯಿ ಅನಗೋಳದಲ್ಲಿ ವಾಚ್ ಮನ್ ಕೆಲಸ ಮಾಡುತ್ತಿದ್ದಾರೆ. ಅಪ್ರಾಪ್ತೆಯ ಅನಾರೋಗ್ಯ ಹಾಗೂ ಅಕೆಯ ಅತ್ತಿಗೆಯ ಹೆರಿಗೆ ಚಿಕಿತ್ಸೆಗೆ ಅಪ್ರಾಪ್ತೆಯ ತಾಯಿ, ವಿಶಾಲ್ ಬಳಿ 50,000 ರೂ. ಸಾಲ ತೆಗೆದುಕೊಂಡಿದ್ದರು. ಸಾಲ ಮರುಪಾವತಿ ಮಾಡದೇ ಇರುವುದಕ್ಕೆ ಪ್ರತಿಯಾಗಿ ಮಗಳ ಮದುವೆ ಮಾಡಿಕೊಡುವಂತೆ ವಿಶಾಲ ಬೇಡಿಕೆ ಮುಂದಿಟ್ಟಿದ್ದಾನೆ.
ಸೆಪ್ಟಂಬರ್ 18 ರಂದು ಬಾಲಕಿ ಮತ್ತು ತಾಯಿಯನ್ನು ಆಟೋದಲ್ಲಿ ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿ ಆಕೆಯ ಜೊತೆ ವಿಶಾಲ ಮದುವೆ ಮಾಡಿಕೊಂಡಿದ್ದಾನೆ. ಆಕೆ ಇನ್ನೂ ಅಪ್ರಾಪ್ತ ವಯಸ್ಕೆಯಾದರೂ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಲ್ಲದೆ ವಿವಾಹವಾಗಿರುವ ಬಗ್ಗೆ ಈಗ ಅಪ್ರಾಪ್ತೆಯೇ ಪೊಲೀಸರಿಗೆ ದೂರು ನೀಡಿದ್ದಾಳೆ.
ಸದ್ಯ ವಿಷಯ ವಿಶಾಲ ಢವಳಿ, ತಂದೆ ಪುಂಡಲೀಕ ಢವಳಿ, ತಾಯಿ ರೇಖಾ ಢವಳಿ, ಸಹೋದರ ಶ್ಯಾಮ ಢವಳಿ ವಿರುದ್ಧ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಎಫ್ ಐಅರ್ ದಾಖಲಾಗಿದೆ.