ಹೊನ್ನಾವರ: ಹೊನ್ನಾವರದಲ್ಲಿ ಶುಕ್ರವಾರ ರಾತ್ರಿ ನಡೆದ ಯಕ್ಷಗಾನ ಆಖ್ಯಾನ ಶ್ರೀರಾಮ ಪಟ್ಟಾಭಿಷೇಕದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿ, ಮಾಜಿ ಸಚಿವೆ ಉಮಾಶ್ರೀ ಮಂಥರೆ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದರು.
ಹೊನ್ನಾವರದ ಸೇಂಟ್ ಅಂಥೋನಿ ಮೈದಾನದಲ್ಲಿ ಪೆರ್ಡೂರು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಆಯೋಜಿಸಿರುವ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಮಂಥರೆಯ ಪಾತ್ರ ನಿರ್ವಹಿಸುವ ಮೂಲಕ ಉಮಾಶ್ರೀ ಇದೇ ಮೊದಲ ಬಾರಿಗೆ ಯಕ್ಷಗಾನಕ್ಕೆ ಪದಾರ್ಪಣೆ ಮಾಡಿದ್ದಾರೆ.
ಪೆರ್ಡೂರು ಮೇಳದ ಪ್ರಧಾನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಪದ್ಯಕ್ಕೆ ಹೆಜ್ಜೆ ಹಾಕುತ್ತಾ ರಂಗಸ್ಥಳಕ್ಕೆ ಬಂದ ನಟಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಕೈಕೇಯಿ ಪಾತ್ರದಲ್ಲಿ ಖ್ಯಾತ ಸ್ತ್ರೀ ಪಾತ್ರಧಾರಿ ಯಲಗುಪ್ಪ ಸುಬ್ರಮಣ್ಯ ಹೆಗಡೆ ಉಮಾಶ್ರೀ ಜೊತೆ ಗಮನ ಸೆಳೆದರು.
ಈ ಕಾರ್ಯಕ್ರಮವನ್ನು ಅಪ್ಪಿ ಹೆಗಡೆ ಸಣ್ಮನೆಯವರು ಆಯೋಜಿಸಿದ್ದಾರೆ. ಅವರು ಉಮಾಶ್ರೀ ಅವರನ್ನು ಸುಮಾರು ಒಂದು ತಿಂಗಳ ಹಿಂದೆ ಸಂಪರ್ಕಿಸಿ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಲು ಕೇಳಿಕೊಂಡಿದ್ದು, ಇದಕ್ಕೆ ಉಮಾಶ್ರೀ ಒಪ್ಪಿಗೆ ನೀಡಿದ ನಂತರ ಕಾರ್ಯಕ್ರಮ ಆಯೋಜಿಸಲಾಗಿತ್ತು ಎನ್ನಲಾಗಿದೆ. ಉಮಾಶ್ರೀಯವರು ಜನವರಿ 12 ಮತ್ತು 13ರಂದು ಯಕ್ಷಗಾನ ನಡೆ ಹಾಗೂ ವೇಷಾಭರಣಗಳ ತರಬೇತಿ ಪಡೆದುಕೊಂಡಿದ್ದರಂತೆ.