ಬೆಂಗಳೂರು :
ಸಾರ್ವಜನಿಕ ಶಿಕ್ಷಣ ಇಲಾಖೆಯ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 1:1 ಅನುಪಾತದಲ್ಲಿ ‘ತಾತ್ಕಾಲಿಕ ಆಯ್ಕೆ’ ಪಟ್ಟಿ ಬಿಡುಗಡೆ ಮಾಡಿದೆ.
13,363 ಪರೀಕ್ಷಾರ್ಥಿಗಳು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದು, 3 ತೃತೀಯ ಲಿಂಗಿಗಳು ಆಯ್ಕೆಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ ಅವರು, ಒಟ್ಟು 15000 ಪಧವೀಧರ ಹುದ್ದೆಗಳ ಪೈಕಿ 13363 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 34 ಇಂಜಿನಿಯರಿಂಗ್ ಅಭ್ಯರ್ಥಿಗಳ ಪೈಕಿ 19 ಜನರು ಆಯ್ಕೆಯಾಗಿದ್ದಾರೆ ಎಂದರು.
15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಅದರಂತೆ ಅಧಿಸೂಚನೆ ಹೊರಡಿಸಿದ ದಿನದಿಂದ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಆಗುವ ವರೆಗಿನ ಪ್ರಕ್ರಿಯೆಯನ್ನು 9 ತಿಂಗಳ ಒಳಗೆ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಲಿಂಗತ್ವ ಅಲ್ಪಸಂಖ್ಯಾತರಿಗೆ ಶಿಕ್ಷಕರ ನೇಮಕಾತಿಯಲ್ಲಿ ಶೇ.1ರಷ್ಟು ಮೀಸಲಾತಿ ನೀಡಲಾಗಿದ್ದು, ಪ್ರಪ್ರಥಮ ಬಾರಿಗೆ ಮೂವರು ಲಿಂಗತ್ವ ಅಲ್ಪಸಂಖ್ಯಾತರು 1:1 ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಅರ್ಹ ಎಂಜಿನಿಯರಿಂಗ್ ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. 19 ಜನರು 1:1 ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು.
https://schooleducation.kar.nic.in ವೆಬ್ಸೈಟ್ಗೆ ಭೇಟಿ ನೀಡಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ನೋಡಬಹುದು.
ಹೈ-ಕ ಭಾಗದಲ್ಲಿ ಮೀಸಲಾಗಿಟ್ಟ 5000 ಹುದ್ದೆ ಮೀಸಲು ಪೈಕಿ 4187 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಇಂಗ್ಲಿಷ್ ಭಾಷೆಯಲ್ಲಿ 1807 ಹುದ್ದೆ ಪೈಕಿ 1768 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ 6500 ಪೈಕಿ 5450 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಮಾಜ ವಿಜ್ಞಾನ ವಿಷಯದಲ್ಲಿ 4693 ಪೈಕಿ 4521 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಹಾಗೂ
ಜೀವವಿಜ್ಞಾನ ವಿಷಯದಲ್ಲಿ 2000 ಹುದ್ದೆ ಪೈಕಿ 1694 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.