ಬೆಳಗಾವಿ : ನಬಾರ್ಡ್ ಗ್ರಾಮೀಣ ಮೂಲಭೂತ ಅಭಿವೃದ್ಧಿ ಅನುದಾನ 2024 – 25 ( RIDF 2024-25 ) ಯೋಜನೆಯಡಿ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ರೂ. 9.025 ಕೋಟಿ ಮೌಲ್ಯದ 2240 ಎಮ್.ಟಿ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪನೆಗೆ ನಬಾರ್ಡ್ ಅನುಮತಿ ದೊರೆತಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದ್ದಾರೆ.
ರೈತರು ಬೆಳೆದ ಉತ್ಪನ್ನದ ಸುಮಾರು ಶೇಕಡಾ 25-30 ರಷ್ಟು ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳು ಯಾವತ್ತೂ ಕೋಲ್ಡ್ ಸ್ಟೋರೇಜ್ ಸೌಲಭ್ಯವಿಲ್ಲದ ಕಾರಣ ಅನಾವಶ್ಯಕವಾಗಿ ನಷ್ಟವಾಗುತ್ತಿದ್ದು, ಇದು ಹೆಚ್ಚಾಗಿ ಕೊಳೆತು ಹೋಗುವಂತಹ ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಹೀಗಾಗಿ ರೈತರು ಅಧಿಕಕರವಾಗಿ ಬರುವಂತಹ ಲಾಭವನ್ನು ಕಳೆದುಕೊಳ್ಳಬೇಕಾಗಿದೆ. ಇದನ್ನು ತಡೆಯಲು ರೈತರು ಬೇಕಾಬಿಟ್ಟಿಯಾದ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಪ್ರಸಂಗ ಎದುರಾಗುತ್ತಿತ್ತು.
ನೂತನ ಕೋಲ್ಡ್ ಸ್ಟೋರೇಜ್ ಸ್ಥಾಪನೆಯಿಂದ ಜಿಲ್ಲೆಯ ಮತ್ತು ಸುತ್ತಮುತ್ತಲಿನ ರೈತರಿಗೆ ತುಂಬಾ ಸಹಾಯಕವಾಗಲಿದ್ದು ಇಲ್ಲಿ ಹೇರಳವಾಗಿ ಬೆಳೆಯಲಾಗುವ ಆಲೂಗಡ್ಡೆ, ಮೆಣಸಿನಕಾಯಿ, ಕಾಯಿಪಲ್ಯ, ದ್ವಿದಳ ಧಾನ್ಯ, ಹಣ್ಣು ಮತ್ತು ಇತ್ಯಾದಿ ಬೆಳೆಗಳನ್ನು ಅನೇಕ ದಿನಗಳವರೆಗೆ ಜಿಲ್ಲೆಯ ರೈತ ಸಮುದಾಯ ಶೇಖರಿಸಿ ಇಡಬಹುದಾಗಿದೆ ಮತ್ತು ಹೀಗೆ ಇಡುವುದರಿಂದ ಇದರ ಗುಣಮಟ್ಟ, ತಾಜಾತನ ಹಾಗೂ ಪೌಷ್ಟಿಕಾಂಶ ಮೌಲ್ಯವನ್ನು ಹೆಚ್ಚಿನ ಕಾಲದವರೆಗೆ ಕಾಪಾಡುವ ನಿಟ್ಟಿನಲ್ಲಿ ಖಂಡಿತವಾಗಿಯೂ ಇಲ್ಲಿನ ರೈತರಿಗೆ ಅನುಕೂಲಕರವಾಗಲಿದೆ ಎಂದು ಜಗದೀಶ ಶೆಟ್ಟರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆ ನಡೆದ ಬ್ಯಾಂಕರ್ಸ್ DLCC ಸಭೆಯಲ್ಲಿ ಜಿಲ್ಲಾ ನಬಾರ್ಡ್ ಅಧಿಕಾರಿಗಳಿಗೆ ಬೆಳಗಾವಿಯಲ್ಲಿ ರೈತರಿಗೆ ಅನುಕೂಲವಾಗಲು ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪನೆಯ ಬಗ್ಗೆ ವಿಷಯ ಅವಲೋಕಿಸಲು ಸಂಸದರು ಸೂಚಿಸಿದ್ದು ಇಲ್ಲಿ ಸ್ಮರಣೀಯ.