ಅತ್ಯಂತ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸುವಲ್ಲಿ ಯಮಕನಮರಡಿ ಸಿಪಿಐ ಜಾವೇದ ಮುಶಾಪುರಿ ಅವರು ಎತ್ತಿದ ಕೈ. ವರ್ಷಗಳ ಹಿಂದೆ ನಡೆದ ಈ ಘೋರ ಘಟನೆಗಳನ್ನು ಹೊರ ಜಗತ್ತಿಗೆ ತರುವ ಮೂಲಕ ಇಡೀ ಪ್ರಕರಣಕ್ಕೆ ಇದೀಗ ತೆರೆ ಎಳೆದಿದ್ದಾರೆ. ಈ ಮೂಲಕ ಸಮಾಜ ವಿದ್ರೋಹಿಗಳು ಎಂದಿಗೂ ತಪ್ಪಿಸಿಕೊಳ್ಳಲು ಅಸಾಧ್ಯ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಜಾವೇದ ಮುಶಾಪುರಿ ಅವರು ಇದೀಗ ಇಡೀ ಬೆಳಗಾವಿ ಜಿಲ್ಲೆಯ ಪೊಲೀಸ್ ವಲಯದಲ್ಲಿ ಜನಪ್ರಿಯ ಅಧಿಕಾರಿಯಾಗಿ ಹೊರಹೊಮ್ಮಿದ್ದು ಯಾವುದೇ ಕ್ಲಿಷ್ಟಕರ ಹಾಗೂ ಸವಾಲು ಎನ್ನಿಸುವಂತಹ ಪ್ರಕರಣಗಳನ್ನು ತಾವು ಬೆಳಕಿಗೆ ತರಬಲ್ಲೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದರಿಂದ ಅವರು ನಾಗರಿಕರ ಮೆಚ್ಚುಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ: ಯಮಕನಮರಡಿ ಸಿಪಿಐ ಜಾವೇದ ಮುಶಾಪುರಿ ಅವರು ಮತ್ತೊಮ್ಮೆ ತಮ್ಮ ತ್ರಿವಿಕ್ರಮ ನಡೆಯನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ತಾವು ಸಮಾಜ ವಿದ್ರೋಹಿಗಳಿಗೆ ಸಿಂಹಸ್ವಪ್ನ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಕೆಲ ಕಂಟಕರಿಂದ ಪಡೆದು ಸರಣಿ ಹತ್ಯೆ ಮಾಡಿ, ಸಹಜ ಸಾವು ಎಂಬಂತೆ ಬಿಂಬಿಸಿಸುತ್ತಿದ್ದ ಮೂವರು ಹಂತಕರು ಸೇರಿ 6 ಮಂದಿಯನ್ನು ಯಮಕನಮರಡಿ ಠಾಣೆಯ ಸಿಪಿಐ ಜಾವೇದ ಮುಶಾಪುರಿ ನೇತೃತ್ವದಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಕ್ಕೇರಿ ತಾಲೂಕಿನ ಹಟ್ಟಿ ಅಲೂರಿನ ಆಕಾಶ ಗೋಕಾವಿ, ರಮೇಶ ಮಾಳಗಿ, ಪಾಶ್ಚಾಪುರದ ಅಪ್ಪಣ್ಣನಾಯಕ, ಕೊಲೆಗೆ ಸುಪಾರಿ ಕೊಟ್ಟ ಮಾಲಾ ಸುಟಕಣ್ಣವರ, ಯಲ್ಲವ್ವ ಮರೆಪ್ಪಗೋಳ, ನಾಗಪ್ಪ ಮಾಳಗಿ ಬಂಧಿತರಾಗಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಎರಡು ಪ್ರಕರಣಗಳಲ್ಲಿ ವ್ಯಕ್ತಿಗಳ ಕೊಲೆಗೆ ಪತ್ನಿಯರೇ ಸುಪಾರಿ ಕೊಟ್ಟಿದ್ದರೆ, ಒಂದು ಪ್ರಕರಣದಲ್ಲಿ ಆರೋಪಿಯೇ ತನ್ನ ಸಹೋದರನನ್ನು ಕೊಲೆ ಮಾಡಿದ್ದಾನೆ ಎಂಬ ಘನಘೋರ ಸಂಗತಿ ಬೆಚ್ಚಿ ಬೀಳಿಸಿದೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದವರು ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.
2024ರ ಏಪ್ರಿಲ್ನಲ್ಲಿ ಮಹಾಂತೇಶ ಸುಟಕಣ್ಣವರ(38) ಮೃತಪಟ್ಟಿದ್ದಾರೆ. ಈ ಸಾವಿನಲ್ಲಿ ಪತ್ನಿ ಮಾಲಾ ಮತ್ತು ಅವರ ಕುಟುಂಬ ಸದಸ್ಯರು ಭಾಗಿಯಾದ ಅನುಮಾನವಿದೆ ಎಂದು ಹುಕ್ಕೇರಿ ತಾಲೂಕಿನ ಹಳ್ಳದಕೇರಿಯ ಕಲ್ಲಪ್ಪ ಸುಟಕಣ್ಣವರ ಯಮಕನಮರಡಿ ಪೊಲೀಸರಿಗೆ 2025ರ ಜ.10ರಂದು ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸ್ ಇನ್ಸ್ಪೆಕ್ಟರ್ ಜಾವೇದ ಮುಶಾಪುರಿ ನೇತೃತ್ವದ ತಂಡ ವಿಚಾರಣೆ ನಡೆಸಲು ಮುಂದಾಯಿತು. ಆಗ ಕೆಲ ವಿಷಯಗಳು ಬೆಳಕಿಗೆ ಬರಲು ಆರಂಭಿಸಿದವು.
ಪೊಲೀಸರು ಮಾಲಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಪ್ರಕರಣಗಳು ಬೆಳಕಿಗೆ ಬಂದಿವೆ.
ಮಹಾಂತೇಶ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತಿದ್ದ ನಾನು, ಪತಿಯ ಕೊಲೆ ಮಾಡುವಂತೆ ಆಕಾಶ ಗೋಕಾವಿ ಎಂಬಾತನಿಗೆ ರೂ.70 ಸಾವಿರ ನೀಡಿದ್ದೆ. ಅಕಾಶ ಮತ್ತು ಆತನ ಸಹಚರರಾದ ರಮೇಶ ಮಾಳಗಿ, ಅಪ್ಪಣ್ಣ ನಾಯಕ ಅವರು, ಕುಂದರಗಿ ಗುಡ್ಡಕ್ಕೆ ಮಹಾಂತೇಶನ ಕರೆದೊಯ್ದು ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಶವವನ್ನು ಗ್ರಾಮಕ್ಕೆ ತಂದಿದ್ದರು. ಮದ್ಯ ಸೇವಿಸಿ ಆತ ಮೃತಪಟ್ಟಿದ್ದಾಗಿ ನಂಬಿಸಿದ್ದೆ ಎಂದು ಮಾಲಾ ತಪ್ಪೊಪ್ಪಿಕೊಂಡಿದ್ದಾಳೆ ಎಂದರು.
ಈ ಪ್ರಕರಣದ ಆರೋಪಿ ಗೋಕಾವಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಇನ್ನೂ ಎರಡು ಕೊಲೆಗಳಲ್ಲಿ ಭಾಗಿಯಾಗಿದ್ದಾಗಿ ತಿಳಿಸಿದ್ದಾನೆ. ಪತ್ನಿ ಯಲ್ಲವ್ವ ಮತ್ತು ಆಕೆಯ ಪ್ರಿಯಕರ
ನಾಗಪ್ಪ ಮಾಳಗಿಯಿಂದ ಸುಪಾರಿ ಪಡೆದ ನಾವು, 2022ರಲ್ಲಿ ಕುಂದರಗಿ ಗುಡ್ಡದ ಮೇಲೆ ಹಟ್ಟಿ ಅಲೂರಿನ ನಾಗಪ್ಪ ಮರೆಪ್ಪಗೋಳ(34)ನನ್ನು ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದೆವು. ನಂತರ ಶವವನ್ನು ಪರಕನಟ್ಟಿ ಬಳಿ ರೈಲ್ವೆ ಹಳಿಯಲ್ಲಿ ಎಸೆದು, ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಿದ್ದೆವು ಎಂದಿದ್ದಾರೆ. ರೈಲ್ವೆ ಪೊಲೀಸರು ದಾಖಲಿಸಿಕೊಂಡಿದ್ದ ಈ ಪ್ರಕರಣವನ್ನು ಈಗ ಕೊಲೆಯಾಗಿ ಪರಿವರ್ತಿಸಲಾಗಿದೆ ಹೇಳಿದರು. ಎಂದು ವಿವರಿಸಿದರು.
ಆರೋಪಿ ರಮೇಶ ಮಾಳಗಿ ಅವರ ಸಹೋದರ ವಿಠಲ ಮಾಳಗಿ ಮದ್ಯದ ಚಟದಿಂದಾಗಿ ಕೃಷಿ ಜಮೀನು ಒತ್ತೆ ಇಟ್ಟು, ರೂ.22 ಲಕ್ಷಕ್ಕಿಂತ ಅಧಿಕ ಸಾಲ ಮಾಡಿಕೊಂಡಿದ್ದರು. ಆತನನ್ನು ಕತ್ತು ಹಿಸುಕಿ ಕೊಲೆಗೈದು, ಹಟ್ಟಿಆಲೂರ ಎಸೆಯಲಾಗಿತ್ತು. ಈ ಪ್ರಕರಣವನ್ನು ಹೊರಗೆ ತರುವಲ್ಲಿ ಯಮಕನಮರಡಿ ಪೊಲೀಸರು ಜಾವೇದ ಮುಶಾಪುರಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿದೆ ಎಂದು ಅವರು ವಿವರಿಸಿದರು.