ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಅತೀ ವೇಗದ ರೈಲು ಬೆಂಗಳೂರಿನಿಂದ ಸಂಚಾರ ಆರಂಭಿಸಿ ಹುಬ್ಬಳ್ಳಿವರೆಗೆ ಸಂಚಾರಕ್ಕೆ ಅನುವು ಮಾಡಲಾಗುತ್ತಿದೆ. ಈ ಮೂಲಕ ಕರ್ನಾಟಕ-ಗೋವಾ-ಮಹಾರಾಷ್ಟ್ರಕ್ಕೆ ಕೇಂದ್ರ ಸ್ಥಾನದಲ್ಲಿರುವ ಮಹತ್ವದ ಮಹಾನಗರವಾದ ಬೆಳಗಾವಿಗೆ ಅನ್ಯಾಯ ಮಾಡಲಾಗಿದೆ.
ಬೆಳಗಾವಿ :
ಬೆಂಗಳೂರಿನಿಂದ ಹುಬ್ಬಳ್ಳಿಗೆ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗಲಿದ್ದು, ಕೆಲವೇ ತಿಂಗಳುಗಳಲ್ಲಿ ಈ ರೈಲು ಸಂಚಾರ ಆರಂಭವಾಗಲಿದೆ. ಈ ಮೂಲಕ ಮತ್ತೆ ಬೆಳಗಾವಿಗೆ ಘೋರ ಅನ್ಯಾಯ ಎಸಗಲಾಗುತ್ತಿದೆ.
ಕೇಂದ್ರ ರೈಲ್ವೆ ಮಂಡಳಿ ಇದೀಗ ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ ಎಕ್ಸ್ಪ್ರೆಸ್ ಆರಂಭಕ್ಕೆ ಸಂಬಂಧಿಸಿದಂತೆ ನೈರುತ್ಯ ರೈಲ್ವೆಗೆ ಪತ್ರ ಬರೆದು ಮಾಹಿತಿ ಕಲೆ ಹಾಕುತ್ತಿದೆ. ತಾತ್ಕಾಲಿಕವಾಗಿ ಬೆಂಗಳೂರು-ಹುಬ್ಬಳ್ಳಿ ವಂದೇ ಭಾರತ ಎಕ್ಸ್ಪ್ರೆಸ್ ವೇಳಾಪಟ್ಟಿಯನ್ನು ಸಹಾ ಕಳಿಸಿದೆ ಎಂಬ ಮಾಹಿತಿ ಇದೆ.
ಆದರೆ, ಕರ್ನಾಟಕದ ಎರಡನೇ ರಾಜಧಾನಿ ಸುವರ್ಣ ವಿಧಾನ ಸೌಧ ಹೊಂದಿರುವ ಬೆಳಗಾವಿ ಮಹಾನಗರಕ್ಕೆ ಈ ವೇಗದ ರೈಲ್ವೆ ಸೌಲಭ್ಯದಿಂದ ಮತ್ತೆ ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿಂದೆ ಬೆಳಗಾವಿ ಸಂಸದರು ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿಯವರ ಅವಧಿಯಲ್ಲಿ ರೈಲ್ವೆ ಯೋಜನೆಗಳು ಬೆಳಗಾವಿ ಕಡೆ ಮುಖ ಮಾಡಿದ್ದವು. ಆದರೆ, ಅವರ ನಿಧನರಾದ ನಂತರ ಬೆಳಗಾವಿ ಮಹಾನಗರಕ್ಕೆ ನ್ಯಾಯಯುತವಾಗಿ ಬರಬೇಕಿದ್ದ ಯೋಜನೆಗಳು ಬಹುತೇಕ ನಿಂತೇ ಹೋಗಿರುವುದು ಗಡಿ ಜಿಲ್ಲೆಯ ಜನತೆಯ ದುರ್ದೈವ ಎನ್ನಬಹುದು.