ಬೆಂಗಳೂರು: “ಜಾತಿ ಗಣತಿ ವಿಚಾರವಾಗಿ ಈಗಲೇ ಸಭೆ ಮಾಡಿ ಗೊಂದಲ ಸೃಷ್ಟಿಸುವುದು ಬೇಡ, ಸಭೆಯನ್ನು ಮುಂದೂಡಿ. ಈ ವಿಚಾರವಾಗಿ ಶ್ರೀಗಳ ಜೊತೆ ನಾನು ಮಾತನಾಡುತ್ತೇನೆ” ಎಂದು ಒಕ್ಕಲಿಗರ ಸಂಘದ ಪದಾಧಿಕಾರಿಗಳಿಗೆ ಸೂಚಿಸಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.
ಒಕ್ಕಲಿಗರ ಸಂಘದ ಪದಾಧಿಕಾರಿಗಳ ಜೊತೆ ಸಭೆ ಮಾಡಿದ್ದೀರಿ ಎಂದು ಕೇಳಿದಾಗ, “ನಾನು ಯಾವುದೇ ಸಭೆ ಮಾಡಿಲ್ಲ. ಅದರ ಅವಶ್ಯಕತೆ ನನಗಿಲ್ಲ. ಇಂದು ಜಾತಿ ಗಣತಿ ವಿಚಾರವಾಗಿ ಪ್ರತ್ಯೇಕವಾಗಿ ಸಭೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದರು. ಆ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದೇನೆ.
ಈ ಸಭೆಯನ್ನು ಮುಂದಕ್ಕೆ ಹಾಕಿ, ಯಾರಿಗೂ ಅನ್ಯಾಯವಾಗದಂತೆ ನಾವು ನೋಡಿಕೊಳ್ಳುತ್ತೇವೆ” ಎಂದು ಭರವಸೆ ನೀಡಿರುವುದಾಗಿ ತಿಳಿಸಿದರುಲ್.
“ಒಕ್ಕಲಿಗರ ಸಂಘದ ಹೊಸ ಪದಾಧಿಕಾರಿಗಳ ತಂಡ ರಾಜಿ ಮಾಡಿಕೊಂಡು ನನ್ನನ್ನು ಭೇಟಿ ಮಾಡಲು ಬಂದಿದ್ದರು. ಮತ್ತೇ ಪದಾಧಿಕಾರಿಗಳ ಮಧ್ಯೆ ಕಿತ್ತಾಟ ನಡೆದರೆ ಆಡಳಿತಾಧಿಕಾರಿ ನೇಮಿಸುವುದಾಗಿ ಎಚ್ಚರಿಕೆ ನೀಡಿದ್ದೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ” ಎಂದರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಿ ಟಿ ರವಿ ನಿಂದಿಸಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೃಹ ಸಚಿವರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಗೃಹಮಂತ್ರಿಗಳೇ ಉತ್ತರ ನೀಡುತ್ತಾರೆ”ಎಂದು ತಿಳಿಸಿದರು.
ಮರು ಭೂಮಾಪನ ಯೋಜನೆ ಇಡೀ ಕನಕಪುರ ತಾಲೂಕಿಗೆ ವಿಸ್ತರಣೆ: ಡಿಸಿಎಂ ಡಿ.ಕೆ. ಶಿವಕುಮಾರ್
ಶೀಘ್ರ ಬೆಂಗಳೂರು ದಕ್ಷಿಣ ಜಿಲ್ಲೆ ಅಸ್ತಿತ್ವಕ್ಕೆ, ನಿಮ್ಮ ಜಮೀನು ಮಾರಿಕೊಳ್ಳಬೇಡಿ:
ಕುಮಾರಸ್ವಾಮಿ, ಮಂಜುನಾಥ್ ಒಂದು ಎಕರೆ ದಾನ ಮಾಡಿದ್ದಾರಾ?: ಡಿಸಿಎಂ ಪ್ರಶ್ನೆ
ಕನಕಪುರ :
“ಭೂ ವ್ಯಾಜ್ಯಗಳಿಂದಾಗಿ ಜನ ಪೊಲೀಸ್ ಠಾಣೆಗೆ ಹೋಗಬಾರದು, ಬಡವರು ಲಂಚ ನೀಡುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಮರು ಭೂ ಮಾಪನ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಮಾಡಿದ್ದು, ಮುಂದೆ ಇಡೀ ತಾಲೂಕಿಗೆ ಕಾರ್ಯಕ್ರಮ ವಿಸ್ತರಣೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕನಕಪುರದ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ಭಾನುವಾರ ನಡೆದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಹಾಗೂ ಮರು ಭೂ ಮಾಪನ ಯೋಜನೆಯಡಿ ರೈತರಿಗೆ ಜಮೀನಿನ ಆರ್ ಟಿಸಿ ದಾಖಲೆ ನೀಡುವ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.
“ನೂರಾರು ವರ್ಷಗಳ ಹಿಂದೆ ಬ್ರಿಟೀಷರು ಈ ಭಾಗದಲ್ಲಿ ಭೂ ಮಾಪನ ಮಾಡಿದ್ದರು. ಆನಂತರ ಮಾಡಿರಲಿಲ್ಲ. ಈಗ ಹೊಸ ಮಾದರಿಯಲ್ಲಿ ಭೂ ಮಾಪನ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಈ ಕಾರ್ಯಕ್ರಮ ರೂಪಿಸಿದೆ. ಇದು ಮುಂದಿನ ತಲೆಮಾರಿಗೂ ಬಹಳ ಉಪಯೋಗವಾಗಲಿದೆ” ಎಂದು ತಿಳಿಸಿದರು.
“ಡಿ.ಕೆ. ಸುರೇಶ್ ಹಾಗೂ ಕೃಷ್ಣ ಭೈರೇಗೌಡರು ಚರ್ಚಿಸಿ ನನ್ನ ಗ್ರಾಮದಿಂದಲೇ ಈ ಯೋಜನೆ ಆರಂಭಿಸಿದ್ದಾರೆ. ಇದು ರಾಜ್ಯಕ್ಕೆ ಮಾದರಿಯಾಗಲಿದೆ” ಎಂದರು.
“ನಮ್ಮ ಹೋಬಳಿಯಲ್ಲಿ 35 ಕಂದಾಯ ಗ್ರಾಮಗಳಿವೆ. ಅದರಲ್ಲಿ 2 ಗ್ರಾಮ ಅರಣ್ಯ ಭಾಗದಲ್ಲಿದೆ. ಉಳಿದ 33 ಗ್ರಾಮಗಳಲ್ಲಿ 5,804 ಸರ್ವೆ ನಂಬರ್ ಗಳಿದ್ದವು. ಈಗ 23,469 ಸಾವಿರ ಸರ್ವೆ ನಂಬರ್ ಗಳಾಗಿವೆ. ಈಗ ಈ ಪಂಚಾಯ್ತಿಯಲ್ಲಿ ಮರು ಭೂ ಮಾಪನ ಮಾಡಲಾಗಿದ್ದು, ಮುಂದೆ ಇಡೀ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯಕ್ಕೆ ಈ ಕಾರ್ಯಕ್ರಮ ವಿಸ್ತರಣೆಯಾಗಲಿದೆ” ಎಂದು ತಿಳಿಸಿದರು.
“ನಾನು ಡಿಸಿಎಂ ಆದ ನಂತರ ನನ್ನ ಕ್ಷೇತ್ರದ ಜನರನ್ನು ಭೇಟಿ ಮಾಡುವುದು ಕಷ್ಟವಾಗಿದೆ. ಬಹಳ ಜನ ಬೆಂಗಳೂರಿಗೆ ಬಂದು ವಾಪಸ್ ಹೋಗುತ್ತಿದ್ದೀರಿ. ಸುರೇಶ್ ಅವರು ಎಂಟು ಕ್ಷೇತ್ರಗಳ ಜವಾಬ್ದಾರಿ ನೋಡಿಕೊಳ್ಳಬೇಕು. ಹೀಗಾಗಿ ತಿಂಗಳಿಗೆ ಒಂದು ದಿನ ಹೋಬಳಿ ಮಟ್ಟದಲ್ಲಿ ನಾನೇ ಬಂದು ಜನರ ಸಮಸ್ಯೆ ಆಲಿಸಲು ತೀರ್ಮಾನಿಸಿದ್ದೇನೆ. ಸಾತನೂರು ಹೋಬಳಿ ನಂತರ ಉಯ್ಯಂಬಳ್ಳಿ ಹೋಬಳಿಗೆ ಬಂದಿದ್ದು, ಮುಂದೆ ಕಸಬಾ, ಕೋಡಂಬಳ್ಳಿ ಹೋಬಳಿಗೆ ಭೇಟಿ ನೀಡಲಿದ್ದೇನೆ” ಎಂದು ತಿಳಿಸಿದರು.
“ನಾನು ಶಾಸಕನಾದ ನಂತರ 8 ಸಾವಿರ ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಮಾಡಿ ಜಮೀನು ಹಂಚಿದ್ದೇನೆ. ಈ ಕಾರ್ಯಕ್ರಮದ ಮಹತ್ವ ನಿಮಗೆ ಅರ್ಥವಾಗುವುದಿಲ್ಲ. ನೀವು ಬೆಂಗಳೂರು ಭಾಗದಲ್ಲಿ ಒಂದು ಎಕರೆ ಭೂಮಿಯ ಪೋಡಿ ಮಾಡಿಸಲು 3-5 ಲಕ್ಷ ಖರ್ಚು ಮಾಡಬೇಕಾಗಿದೆ. ಲಂಚ ನೀಡುವುದನ್ನು ತಪ್ಪಿಸಲು ಈ ಕಾರ್ಯಕ್ರಮ ರೂಪಿಸುತ್ತಿದ್ದೇವೆ” ಎಂದರು.
“ನಿಮ್ಮ ಜಮೀನಿನ ದಾಖಲೆಯಲ್ಲಿ ತಪ್ಪುಗಳಾಗಿದ್ದರೆ ಅದನ್ನು ತಿದ್ದುಕೊಳ್ಳಲು ಒಂದು ತಿಂಗಳು ಕಾಲಾವಕಾಶವಿದೆ. ಪಹಣಿ ಹಾಗೂ ಭೂ ನಕ್ಷೆ ಒಂದೇ ದಾಖಲೆಯಲ್ಲಿ ಬರುತ್ತಿದೆ. ಕೃಷ್ಣ ಅವರ ಕಾಲದಲ್ಲಿ ಭೂಮಿ ಯೋಜನೆ ಮೂಲಕ 5 ರೂಪಾಯಿಗೆ ಗಣಕೀಕೃತ ಪಹಣಿ ನೀಡುವ ಭೂಮಿ ಯೋಜನೆ ಮಾಡಲಾಗಿತ್ತು. ಈಗ ಬೆಂಗಳೂರಿನಲ್ಲಿ ಎಲ್ಲಾ ಆಸ್ತಿಗಳ ಸರ್ವೆ ಮಾಡಿಸಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಆಮೂಲಕ ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದೇನೆ” ಎಂದು ಹೇಳಿದರು.
“15-20 ವರ್ಷಗಳ ಹಿಂದೆ ಈ ಭಾಗದಲ್ಲಿ ಜಮೀನಿನ ಬೆಲೆ ಎಷ್ಟಿತ್ತು? ಈಗ ಎಷ್ಟು ಆಗಿದೆ? ನಿಮಗೆ ನೇರವಾಗಿ ಹಣ ನೀಡಲಾಗದಿದ್ದರೂ ನಿಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿ ನಿಮಗೆ ನೆರವಾಗಿದ್ದೇನೆ. ಆಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದೇನೆ” ಎಂದು ತಿಳಿಸಿದರು.
“ಇದು ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ದೆಹಲಿಗೆ ಕಳುಹಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದಿಂದ ಇಂಟೆಲಿಜೆನ್ಸ್ ನವರು ವರದಿ ಕಳುಹಿಸುವುದು ಬಾಕಿ ಇದೆ. ಈ ವಿಚಾರವಾಗಿ ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಗಳಿಗೆ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದೇನೆ. ನಂತರ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಅಧಿಕೃತವಾಗಿ ಘೋಷಣೆಯಾಗಲಿದೆ. ರಾಮನಗರವನ್ನು ಜಿಲ್ಲಾ ಕೇಂದ್ರವಾಗಿಯೇ ಉಳಿಯಲಿದೆ. ಹೀಗಾಗಿ ನೀವು ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ” ಎಂದು ಮನವಿ ಮಾಡಿದರು.
“ನಾವು ಬೆಂಗಳೂರಿನವರು, ನಮ್ಮ ಈ ಗುರುತನ್ನು ನಾವು ಯಾಕೆ ಬಿಟ್ಟುಕೊಡಬೇಕು? ಭವಿಷ್ಯದಲ್ಲಿ ನಿಮ್ಮ ಜಮೀನಿನ ಬೆಲೆ ಏನಾಗುತ್ತದೆ ಎಂದು ನೀವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಹಳ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಹಾಗಿದ್ದರೆ ಇವರುಗಳು ತಮ್ಮ ಊರು ಬಿಟ್ಟು ಇಲ್ಲಿಗೆ ಬಂದು ಯಾಕೆ ನೂರಾರು ಎಕರೆ ಜಮೀನು ಖರೀದಿ ಮಾಡಿದ್ದಾರೆ?” ಎಂದು ಪ್ರಶ್ನಿಸಿದರು.
“ಬೆಂಗಳೂರು ಕನಕಪುರ ರಸ್ತೆ ಹಿಂದೆ ಹೇಗಿತ್ತು, ಈಗ ಹೇಗಿದೆ? ರಸ್ತೆ, ನೀರಾವರಿ, ಒಳಚರಂಡಿ, ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಿಸಿದ್ದೇನೆ. ನೀವು ಪಕ್ಕದ ಮದ್ದೂರು, ಮಳವಳ್ಳಿ, ಚನ್ನಪಟ್ಟಣಕ್ಕೆ ಹೋಗಿ ನೋಡಿ, ಪರಿಸ್ಥಿತಿ ಗೊತ್ತಾಗುತ್ತದೆ. ಕುಮಾರಸ್ವಾಮಿ ಚನ್ನಪಟ್ಟಣದಿಂದ ಎರಡು ಬಾರಿ ಸಿಎಂ, ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದರು. ನಾನು ಅಲ್ಲಿಗೆ ಹೋದಾಗ ಮೂಗು ಮುಚ್ಚಿಕೊಂಡು ಹೋಗಬೇಕಾಯಿತು. ಈಗ ಸಿದ್ದರಾಮಯ್ಯ ಅವರಿಗೆ ಹೇಳಿ, ಸುಮಾರು 700-800 ಕೋಟಿ ಅನುದಾನವನ್ನು ಆ ಕ್ಷೇತ್ರಕ್ಕೆ ನೀಡಲಾಗಿದೆ. ಅಲ್ಲಿಗೆ ಹೋಗಿ ನೋಡಿದಾಗ ನಾಚಿಕೆಯಾಯಿತು. ಅಲ್ಲಿನ ಜನರಿಗೆ ಒಂದು ಮನೆ, ನಿವೇಶನ ನೀಡಿಲ್ಲ. ನಾನು ಸುಮಾರು 200 ಎಕರೆ ಜಮೀನು ಗುರುತಿಸಿ ನಿವೇಶನ ಹಂಚಿಕೆ ಮಾಡಲು ಸೂಚಿಸಿದ್ದೇನೆ. ಇದೆಲ್ಲವನ್ನು ಅರಿತ ಜನ ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿ 25 ಸಾವಿರ ಮತಗಳಿಂದ ಗೆಲ್ಲಿಸಿದ್ದಾರೆ” ಎಂದರು.
“ಈ ಕ್ಷೇತ್ರದಲ್ಲಿ ಸೋಲಾರ್ ಪ್ಲಾಂಟ್ ತಂದಿದ್ದೇನೆ. ಅದರ ಪಕ್ಕದಲ್ಲಿ ವಿದ್ಯಾರ್ಥಿ ವಸತಿ ನಿಲಯಕ್ಕೆ ಜಮೀನು ನೀಡಿದ್ದೇನೆ, ನಮ್ಮ ಅಜ್ಜಿ ಹೆಸರಿನಲ್ಲಿ ಖರೀದಿ ಮಾಡಿದ್ದ ಜಮೀನನ್ನು ಶಾಲೆಗೆ ಬರೆದುಕೊಟ್ಟಿದ್ದೇನೆ. ಕುಮಾರಸ್ವಾಮಿ ಅಥವಾ ಸಂಸದ ಮಂಜುನಾಥ್ ಅವರು ರಾಜ್ಯದಲ್ಲಿ ಯಾರಿಗಾದರೂ ಒಂದು ಎಕರೆ ದಾನ ಮಾಡಿದ್ದಾರಾ?” ಎಂದು ಪ್ರಶ್ನಿಸಿದರು.
“ನೀವು ನನ್ನನ್ನು ಬೆಳೆಸಿದ್ದೀರಿ, ಜಿಲ್ಲಾ ಪಂಚಾಯಿತಿ ಸದಸ್ಯ, ಶಾಸಕ, ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮಾಡಿದ್ದೀರಿ, ಸುರೇಶ್ ಅವರನ್ನು ಸಂಸದರನ್ನಾಗಿ ಮಾಡಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಋಣ ತೀರಿಸಲು ನಾನು ಈ ಕೆಲಸ ಮಾಡಿದ್ದೇನೆ. ನಮ್ಮ ಜತೆಯಲ್ಲಿದ್ದುಕೊಂಡು ತಟ್ಟೆಮರೆ ಏಟು ಕೊಟ್ಟವರಿಗೆ ನೀವು ಈ ವಿಚಾರ ತಿಳಿಸಿ, ಮುಂದೆ ನೀವು ಆತ್ಮಸಾಕ್ಷಿಗೆ ಮತ ಹಾಕುವಂತೆ ಹೇಳಬೇಕು” ಎಂದು ತಿಳಿಸಿದರು.
“ಡಿ.ಕೆ. ಸುರೇಶ್ ಸಂಸದರಾದ ನಂತರ ಇಡೀ ದೇಶದಲ್ಲಿ ನರೇಗಾ ಯೋಜನೆ ಅತಿಹೆಚ್ಚು ಅನುದಾನವನ್ನು ಬಳಸಿಕೊಂಡಿದ್ದೆವು. ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ 3-5 ಕೋಟಿಯಂತೆ ಸುಮಾರು 200-300 ಕೋಟಿ ಅನುದಾನ ಬಳಸಿಕೊಳ್ಳಲಾಗಿತ್ತು. ಈ ಯಶಸ್ಸಿಗೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಬೇಕಿತ್ತು. ಕ್ಷೇತ್ರದ ಶಾಸಕನಾದ ನನಗೆ ಪ್ರಶಸ್ತಿ ನೀಡಬೇಕು ಎಂಬ ಕಾರಣಕ್ಕೆ ಹಿಂದೆ ಮುಂದೆ ನೋಡಿದರು. ಇಷ್ಟು ಅನುದಾನ ಬಳಕೆ ನೋಡಿ ನಮ್ಮ ಮೇಲೆ ಅನುಮಾನ ಪಟ್ಟು ಕೇಂದ್ರದಿಂದ ಅಧಿಕಾರಿಗಳನ್ನು ಕಳುಹಿಸಿ ತನಿಖೆ ಮಾಡಿಸಿದರು. ನಂತರ ಪಂಚಾಯ್ತಿ ಅಧ್ಯಕ್ಷರಾದ ವೈ.ಡಿ ಭೈರೇಗೌಡರನ್ನು ಕಳುಹಿಸಿ ಪ್ರಶಸ್ತಿ ಪಡೆಯುವಂತೆ ಹೇಳಿದೆ. ಇದು ಕನಕಪುರದ ಸಾಧನೆ” ಎಂದು ತಿಳಿಸಿದರು.
“ಸುರೇಶ್ ಅವರು ಸಂಸದರಾಗಿದ್ದಾಗ ಅವರ ಕ್ಷೇತ್ರದಲ್ಲಿ ಹೆಚ್ಚು ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ನಮ್ಮ ತಾಲೂಕಿನಲ್ಲಿ 120ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಈ ಭಾಗದ ಜನರಲ್ಲಿ ಹೆಚ್ಚು ಕ್ಯಾನ್ಸರ್ ರೋಗ ಪತ್ತೆಯಾಗುತ್ತಿದೆ ಎಂದು ವೈದ್ಯರು ಹೇಳಿದಾಗ ಇದನ್ನು ತಪ್ಪಿಸಲು ಈ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆವು” ಎಂದರು.
“ನಾನು ಇಂಧನ ಸಚಿವನಾಗಿದ್ದಾಗ ಸುರೇಶ್ ಸಂಸದರಾಗಿದ್ದಾಗ ಈ ಭಾಗದ ಪ್ರತಿ ಇಬ್ಬರು ರೈತರಿಗೆ ಪ್ರತ್ಯೇಕವಾಗಿ ಟ್ರಾನ್ಸ್ ಫಾರ್ಮ್ ಅಳವಡಿಸಿದ್ದೆವು. ಈ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಇಂತಹ ಯೋಜನೆ ಮಾಡಲಾಗಿದ್ದು, ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಶದಲ್ಲಿ ಎಲ್ಲಿಯೂ ಇಂತಹ ಯೋಜನೆ ಮಾಡಿಲ್ಲ” ಎಂದು ಹೇಳಿದರು.
ರಾಮನಗರ ಆಸ್ಪತ್ರೆಯಲ್ಲಿ ಮೆಡಿಕಲ್ ಕಾಲೇಜು ನಡೆಯುತ್ತಿದೆ. ಕನಕಪುರಕ್ಕೆ ಮೆಡಿಕಲ್ ಕಾಲೇಜು ತರುವಾಗ ನಮ್ಮ ಕಾಲೇಜು ಕಿತ್ತುಕೊಳ್ಳುತ್ತಿದ್ದಾರೆ ಎಂದು ಗಲಾಟೆ ಮಾಡಿದರು. ಹೀಗಾಗಿ ನಿಮ್ಮ ಕಾಲೇಜು ಅಲ್ಲೇ ನಡೆಯಲಿ ಎಂದು ಬಿಟ್ಟೆ. ಕನಕಪುರದಲ್ಲಿ ಯಾವಾಗ ಮೆಡಿಕಲ್ ಕಾಲೇಜು ಆರಂಭಿಸಬೇಕು ಎಂದು ನನಗೆ ಗೊತ್ತಿದೆ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಕಾಲದಲ್ಲಿ ಘೋಷಣೆಯಾಗಿದ್ದ ಕಾಲೇಜನ್ನು ತಪ್ಪಿಸಿದರು. ಇದೊಂದು ಕೆಲಸ ಬಾಕಿ ಇದೆ. ಮುಂದಿನ ದಿನಗಳಲ್ಲಿ ಇನ್ನು ಅನೇಕ ಯೋಜನೆ ಹಾಕಿಕೊಳ್ಳುತ್ತೇವೆ.
“ಸಂಸತ್ ಚುನಾವಣೆ ಫಲಿತಾಂಶ ಈ ರೀತಿ ಯಾಕೆ ಆಯಿತು ಎಂದು ನಾನು ನಿಮ್ಮ ಆತ್ಮಸಾಕ್ಷಿಗೆ ಬಿಡುತ್ತೇನೆ. ಬೇರೆಯವರಿಗೆ ಮತ ಹಾಕಿ ಗೆಲ್ಲಿಸಿದ್ದೀರಿ. ನನ್ನ ಕ್ಷೇತ್ರದಲ್ಲೂ ತಟ್ಟೆಮರೆ ಏಟು ಬಿದ್ದಿದೆ. ಹೊಸದಾಗಿ ಬಂದಿರುವ ಸಂಸದರು ದಿನಬೆಳಗಾದರೆ ನಿಮಗೆ ಸೇವೆ ಮಾಡುತ್ತಿರಬೇಕಲ್ಲವೇ. ಬಹಳ ಸಂತೋಷ, ಅವರಿಗೆ ಮತ ಹಾಕಿರುವವರು ಸಂತೋಷವಾಗಿರಲಿ” ಎಂದರು.
“ನೀವು ದಳಕ್ಕೆ ಮತ ಹಾಕಿದರೂ, ಬಿಜೆಪಿಗೆ ಮತ ಹಾಕಿದರೂ ಎಲ್ಲರಿಗೂ ಅನುಕೂಲವಾಗುವಂತೆ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ. ಇದು ನಿಮ್ಮ ಆತ್ಮಸಾಕ್ಷಿಗೆ ಅರ್ಥವಾದರೆ ಸಾಕು” ಎಂದರು.
“ಸಂಸತ್ ಚುನಾವಣೆ ಬಳಿಕ ವಿಧಾನಸಭೆ ಚುನಾವಣೆಗೆ ಸಿದ್ಧವಾಗಲು ಅನೇಕ ಗಂಡುಗಳು ಸಿದ್ಧರಾಗಿದ್ದರು. ನಂತರ ಚನ್ನಪಟ್ಟಣ ಚುನಾವಣೆ ಬಂತು. ನಾನು ಸಂಸತ್ ಚುನಾವಣೆ ಮುಗಿದ ಬಳಿಕ ಇಡೀ ಸರ್ಕಾರವನ್ನು ಆ ಕ್ಷೇತ್ರ ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋದೆ. ಅವರ ಮನೆಗೆ ಅರ್ಜಿ ತಲುಪಿಸಿ ಅವರ ಅಹವಾಲು ಕೇಳಿದೆ. ಸುಮಾರು 26 ಸಾವಿರ ಜನ ನಮಗೆ ಅರ್ಜಿ ಹಾಕಿದರು” ಎಂದರು.
“ಇನ್ನು ಈ ಭಾಗದಲ್ಲಿ 2500 ಎಕರೆಗೆ ಹನಿ ನೀರಾವರಿ ಯೋಜನೆ ಮಂಜೂರಾಗಿದೆ. ನಮ್ಮ ತಾಲೂಕು ರೇಷ್ಮೆಗೆ ಹೆಸರಾಗಿದ್ದು, ರೇಷ್ಮೆಗೆ ಅತ್ಯುತ್ತಮ ಬೆಲೆ ಇದೆ. ನಮ್ಮನ್ನು ನೋಡಿ ಬೇರೆ ಜಿಲ್ಲೆಗಳಲ್ಲೂ ರೇಷ್ಮೆ ಬೆಳೆಯಲಾಗುತ್ತಿದೆ. ನೀವೆಲ್ಲರೂ ಇದನ್ನು ಮುಂದುವರೆಸಿಕೊಂಡು ಹೋಗಬೇಕು. ಈಗ ಇಲ್ಲಿ ದೊಡ್ಡ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡುತ್ತಿದ್ದೇವೆ. ನೀವುಗಳು ರೇಷ್ಮೆ ಬೆಳೆಯುವುದನ್ನು ನಿಲ್ಲಿಸಬೇಡಿ. ಇದೇ ರೀತಿ ತೋಟಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ಉತ್ತಮ ಅವಕಾಶವಿದೆ. ದೇಶದಲ್ಲಿ ಅಮೂಲ್ ಡೈರಿ ನಂತರ ಅತ್ಯುತ್ತಮ ತಂತ್ರಜ್ಞಾನ ಇರುವ ಡೈರಿ ನಮ್ಮ ಕನಕಪುರದಲ್ಲಿದೆ ಎಂಬುದನ್ನು ನೀವು ಮರೆಯುವಂತಿಲ್ಲ” ಎಂದರು.
“ಈಗ ಕನಕಪುರದ ಕರಿಯಪ್ಪ ಕಾಲೇಜಿನಲ್ಲಿ ಕೃಷಿ ಕಾಲೇಜು ಆರಂಭಿಸಿದ್ದೇನೆ. ಹಾರೋಹಳ್ಳಿ ಬಳಿ 50 ಏಕರೆಯಷ್ಟು ಗಾಂಧಿ ಫಾರಂ ಎಂದು ಮಾಡಿದ್ದರು. ಈಗ ಅದನ್ನು ಕೃಷಿ ಕಾಲೇಜು ಮಾಡಿಸಿದ್ದೇನೆ. ಕಾವೇರಿ ನದಿಯ ಸಂಗಮದಿಂದ 21 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಡಲಾಗಿದ್ದು, ಟೆಂಡರ್ ಗೆ ಅನುಮತಿಯೂ ನೀಡಲಾಗಿದೆ. ನನ್ನ ಇಲಾಖೆಯಲ್ಲೇ 108 ಕೋಟಿ ವೆಚ್ಚದಲ್ಲಿ ಈ ಯೋಜನೆ ಮಾಡಲಾಗುವುದು” ಎಂದು ಹೇಳಿದರು.
“ನಿಮ್ಮ ಸಮಸ್ಯೆ ಏನೇ ಇದ್ದರೂ ನಮಗೆ ಹೇಳಿ, ನಾವು ನಿಮ್ಮ ಜತೆ ಇದ್ದೇವೆ. ಬಡವರ ಮನೆ ನೀಡುವ ಆಲೋಚನೆ ಮಾಡುತ್ತಿದ್ದೇವೆ. ಈ ಕ್ಷೇತ್ರದ ಸುಮಾರು 40 ಸಾವಿರ ಜನರು ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಲು ಕನಕಪುರದಲ್ಲಿ ಕೈಗಾರಿಕೆಗೆ ಅವಕಾಶ ನೀಡಲು ಜಾಗ ಗುರುತಿಸಲಾಗುತ್ತದೆ” ಎಂದು ತಿಳಿಸಿದರು.
“ಈ ಕ್ಷೇತ್ರದಲ್ಲಿ ಉತ್ತಮ ಅಧಿಕಾರಿಗಳು ಇದ್ದಾರೆ ಯಾರೂ ನಿಮಗೆ ಲಂಚ ಕೇಳುವುದಿಲ್ಲ. ಪಂಚಾಯ್ತಿ ಮಟ್ಟದಲ್ಲಿ ಕೆಲವರು ಲಂಚ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಅವರ ಪಟ್ಟಿಯನ್ನು ತರಿಸಿಕೊಳ್ಳುತ್ತೇನೆ. ಇನ್ನು ಈ ಕ್ಷೇತ್ರದಲ್ಲಿ ಇಸ್ಪೀಟ್ ಜೂಜಿಗೆ ಅವಕಾಶ ನೀಡುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾರಣ ಈ ಕ್ಷೇತ್ರದಲ್ಲಿ ಏನೇ ಆದರೂ ಡಿ.ಕೆ. ಶಿವಕುಮಾರ್ ಕ್ಷೇತ್ರ ಎಂದು ಬರೆದು ದೊಡ್ಡದು ಮಾಡುತ್ತಾರೆ.
ಈ ಸಂದರ್ಭದಲ್ಲಿ ನಮ್ಮ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.
ಕಾರ್ಯಕ್ರಮದ ವೇಳೆ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾಡಾನೆ ಹಾವಳಿಯಿಂದ ಮುಕ್ತಿ ಬೇಕು ಎಂಬ ಬೇಡಿಕೆ ಇರುವ ಬಗ್ಗೆ ಕೇಳಿದಾಗ, “ಕಾಡಾನೆ ಹಾವಳಿ ಇರುವುದು ನಿಜ. ಬನ್ನೇರುಘಟ್ಟದಿಂದ ಸಂಗಮ, ಮೇಕೆದಾಟು ಸೇರಿ ತಮಿಳುನಾಡಿನ ಗಡಿ ಭಾಗದಲ್ಲಿ ಆನೆಗಳ ಸಂಚಾರ ಹೆಚ್ಚಾಗಿದೆ. ನಮ್ಮ ಮನೆ ಸಮೀಪದಲ್ಲೇ 50 ಆನೆಗಳ ಹಿಂಡು ಸಾಗುತ್ತಿರುವ ವಿಡಿಯೋ ಕೂಡ ಬಂದಿದ್ದವು. ಈ ಪರಿಸ್ಥಿತಿಯಲ್ಲಿ ಎಷ್ಟು ನಿಯಂತ್ರಿಸಲು ಸಾಧ್ಯವೋ ನಿಯಂತ್ರಣ ಮಾಡುತ್ತಿದ್ದೇವೆ. ಅರಣ್ಯ ಇಲಾಖೆಯಿಂದ ಇದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲಾ ಕಡೆ ತಡೆಗೋಡೆ ನಿರ್ಮಿಸಲು, ಗುಂಡಿ ತೊಡಲು ವ್ಯವಸ್ಥೆ ಮಾಡಲಾಗುತ್ತಿದೆ. ಚನ್ನಪಟ್ಟಣ ಉಪಚುನಾವಣೆ ಸಮಾಯದಲ್ಲೂ ಈ ಬೇಡಿಕೆ ಹೆಚ್ಚಾಗಿತ್ತು” ಎಂದು ಉತ್ತರಿಸಿದರು.
ಡಿನ್ನರ್ ಸಭೆ ಬಗ್ಗೆ ಕೇಳಿದಾಗ, “ಯಾವ ಡಿನ್ನರ್ ಇಲ್ಲ. ಹೊಸವರ್ಷಾಚರಣೆಗೆ ನಮ್ಮ ಕೆಲ ನಾಯಕರು ಸೇರಿದರು. ಇದಕ್ಕೆ ಯಾರೋ ಸುದ್ದಿ ಕಟ್ಟಿದ್ದಾರೆ ಅಷ್ಟೇ. ನಾವು ಹೊಸವರ್ಷಕ್ಕೆ ಹೊರ ದೇಶಕ್ಕೆ ಹೋಗಿದ್ದೆವು. ಇಲ್ಲಿ ನಮ್ಮ ನಾಯಕರು ಊಟಕ್ಕೆ ಸೇರಿದರು. ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳಲಾಗಿದೆ” ಎಂದರು.
ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಆಗಲಿದೆ ಎಂದು ಕೇಳಿದಾಗ, “ಅದೆಲ್ಲವೂ ಸುಳ್ಳು. ಈ ವಿಚಾರವಾಗಿ ಮೂಖ್ಯಮಂತ್ರಿಗಳು ಮಾಹಿತಿ ನೀಡುತ್ತಾರೆ” ಎಂದು ತಿಳಿಸಿದರು.
ರಾಮನಗರದ ಭಾಗಕ್ಕೆ ಮತ್ತೊಂದು ಮಂತ್ರಿ ಸ್ಥಾನ ಸಿಗುವುದೇ ಎಂದು ಕೇಳಿದಾಗ, “ನಾನು ಇದ್ದೇನಲ್ಲಾ. ಈ ಬಗ್ಗೆ ಸಿಎಂ ಅವರನ್ನು ಕೇಳಿ” ಎಂದರು.
ಬಿಇ ಓದಿದ ಯುವತಿಗೆ ‘ನಮ್ಮ ಮೆಟ್ರೋ’ದಲ್ಲಿ ಕೆಲಸ, ಮೂರು ದಿನಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಸೇವೆ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ದೊಡ್ದ ಆಲಹಳ್ಳಿಯ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದಲ್ಲಿ ಜನರ ಕಷ್ಟಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ ಡಿಸಿಎಂ
ಕನಕಪುರ (ದೊಡ್ಡಆಲಹಳ್ಳಿ):
“ನಿಮ್ಮ ಮಗಳಿಗೆ ನಮ್ಮ ಮೆಟ್ರೋದಲ್ಲಿ ಕೆಲಸ ದೊರೆಯುವಂತೆ ನೋಡಿಕೊಳ್ಳಲಾಗುವುದು. ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಉನ್ನತ ವ್ಯಾಸಂಗ ಮಾಡುವುದೇ ಅಪರೂಪ. ಅವರ ಪರವಾಗಿ ನಾವು ಬಲವಾಗಿ ನಿಲ್ಲಬೇಕು” ಎಂದು ಹೇಳಿದಾಗ ಎದುರಿಗಿದ್ದ ತಾಯಿ ಮಗಳ ಕಣ್ಣಾಲಿಗಳು ಒದ್ದೆಯಾದವು.
ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ನಡೆದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ಈ ಘಟನೆಗೆ ಸಾಕ್ಷಿಯಾಯಿತು.
ಕೊರಟಗೆರೆದೊಡ್ಡಿಯ ಅನಿತಾ ಎಂಬುವಬರು ನನ್ನ ಮಗಳು ಶರಣ್ಯ ಬಿಇ ಓದಿದ್ದು. ಈ ಕ್ಷೇತ್ರದ ಹೆಣ್ಣುಮಗಳು, ನಿಮ್ಮ ಇಲಾಖಾ ವ್ಯಾಪ್ತಿಯಲ್ಲಿ ಕೆಲಸ ನೀಡಿ ಎಂದಾಗ ಡಿಸಿಎಂ ಅವರು ನಾನಿದ್ದೇನೆ ಎಂದು ಭರವಸೆ ನೀಡಿದರು.
ಇವರ ಜೊತೆಯಲ್ಲಿಯೇ ಮನವಿ ಸಲ್ಲಿಸಿದ, ಬಿಇ ಕಂಪ್ಯೂಟರ್ ಸೈನ್ಸ್ ಓದಿದ ದೊಡ್ಡಆಲಹಳ್ಳಿಯ ಭೈರವಿ.ಕೆ ಅವರ ಮನವಿಗೆ ಸ್ಪಂದಿಸಿ, “ನನ್ನ ಈ ದೂರವಾಣಿ ಸಂಖ್ಯೆಗೆ ನಿಮ್ಮಿಬ್ಬರ ರೆಸ್ಯೂಮ್ ಕಳಿಸಿ ಅಥವಾ ನನ್ನ ಮನೆಯ ಬಳಿ ಬಂದು ಭೇಟಿಯಾಗಿ ಪರಿಚಿತ ಕಂಪನಿಗಳಿಗೆ ತಿಳಿಸಿ ಕೆಲಸ ಕೊಡಿಸುವೆ” ಎಂದು ಭರವಸೆ ನೀಡಿದರು.
ಹೆಣ್ಣುಮಕ್ಕಳು ಬಹಳ ದೂರದಿಂದ ಬಸ್ ಇಳಿದು ನಡೆದು ಬರಬೇಕು ಅವರು ಬರುವ ತನಕ ಜೀವ ಹೋದಂತೆ ಆಗುತ್ತದೆ ಆದ ಕಾರಣಕ್ಕೆ ನಮ್ಮ ಅರಸನಹಳ್ಳಿ ಹೊಸದೊಡ್ಡಿಗೆ ಬಸ್ ಬೇಕು ಎಂದು ವಿನೋದಮ್ಮ, ತಾರಾ, ರತ್ನಮ್ಮ ಅವರು ಕಣ್ಣೀರಾದರು.
ಇವರ ಕಣ್ಣೀರಿಗೆ ತಕ್ಷಣವೇ ಸ್ಪಂದಿಸಿದ ಡಿಸಿಎಂ, ಕನಕಪುರ ಡಿಪೋ ವ್ಯವಸ್ಥಾಪಕರಾದ ನರಸಿಂಹರಾಜು ಅವರನ್ನು ಕರೆದು, “ಮೂರು ದಿನದ ಒಳಗಾಗಿ ಬಸ್ ವ್ಯವಸ್ಥೆ ಮಾಡಿ ನನಗೆ ಖುದ್ದಾಗಿ ಮಾಹಿತಿ ನೀಡಬೇಕು” ಎಂದು ಖಡಕ್ ಸೂಚನೆ ನೀಡಿದರು.
ದೊಡ್ದ ಆಲಹಳ್ಳಿ ಆಂಜನಪ್ಪ ಅವರು ನನಗೆ ಇತ್ತೀಚಿಗೆ ಲಕ್ವ ಹೊಡೆದಿದ್ದು, ಬಸ್ ನಿಲ್ದಾಣ ಅಥವಾ ಪಟ್ಟಣದ ಜನನಿಬಿಢ ಪ್ರದೇಶದಲ್ಲಿ ಅಂಗಡಿ ಹಾಕಿಕೊಳ್ಳಲು ಸಹಾಯಧನ ನೀಡಬೇಕಾಗಿ ಮನವಿ ಮಾಡಿದಾಗ, “ಸ್ಥಳೀಯ ಮುಖಂಡರನ್ನು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರನ್ನು ಕರೆದು ಇವರಿಗೆ ಸಹಾಯ ಮಾಡಬೇಕು” ಎಂದು ತಿಳಿಸಿದರು.
ನಲ್ಲಹಳ್ಳಿ ಗ್ರಾಮದ ಸವಿತಾ ಅವರು ನಮ್ಮ ಗ್ರಾಮದ 50ಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ಸಮಸ್ಯೆಯಿದ್ದು ಇದನ್ನು ಆದಷ್ಟು ಬೇಗ ಪರಿಹರಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಡಿಸಿಎಂ ಅವರು, “ಅರ್ಹರ ಪಟ್ಟಿಯನ್ನು ಗ್ರಾಮ ಪಂಚಾಯತಿ ಮೂಲಕ ತಯಾರಿಸಿ ಅದನ್ನು ಮಾಜಿ ಸಂಸದರಾದ ಸುರೇಶ್ ಅವರ ಗಮನಕ್ಕೆ ತನ್ನಿ ಎಂದರು. ಈ ಗ್ರಾಮಕ್ಕೆ ಭೇಟಿ ನೀಡಿ ನಿವೇಶನ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ” ಎಂದು ಪಕ್ಕದಲ್ಲಿಯೇ ಇದ್ದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕನಕಪುರದ ಚೈತ್ರ ಅವರು ತಾಲ್ಲೂಕು ಆಫೀಸ್ ಆವರಣದಲ್ಲಿ ಕ್ಯಾಂಟೀನ್ ತೆರೆಯಲು ಅವಕಾಶ ನೀಡಿ ಎನ್ನುವ ಮನವಿಗೆ, “ಅಕ್ಕ ಕೆಫೆ ಅಥವಾ ಇಂದಿರಾ ಕ್ಯಾಂಟೀನ್ ತೆರೆಯಲು ಅವಕಾಶ ನೀಡುತ್ತೇವೆ. ನೀವು ಅಕ್ಕ ಕೆಫೆ ಯೋಜನೆಯ ಅಡಿ ಅರ್ಜಿ ಸಲ್ಲಿಸಿ” ಎಂದು ಸಲಹೆ ನೀಡಿದರು.
ನಲ್ಲಹಳ್ಳಿ ಅಜ್ಜೇಗೌಡರು ಸಾತನೂರು ಮಾರ್ಗವಾಗಿ ನಲ್ಲಹಳ್ಳಿಗೆ ಬಸ್ ವ್ಯವಸ್ಥೆ. ನಲ್ಲಹಳ್ಳಿಯಿಂದ ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಗೆ ನೇರವಾಗಿ ಬಸ್ ವ್ಯವಸ್ಥೆ ಮಾಡಿ ಎಂದು ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯತಿ ಸೇರಿದಂತೆ ವಿವಿಧ ಪಂಚಾಯತಿಗಳಲ್ಲಿ 17 ವರ್ಷದಿಂದ ಪುನರ್ ವಸತಿ ನೌಕರರು ಕೆಲಸ ಮಾಡುತ್ತಿದ್ದು ಇವರಿಗೆ ಕನಿಷ್ಠ ವೇತನ ಹಾಗೂ ಕೆಲಸ ಖಾಯಂ ಮಾಡುವಂತೆ ನಟರಾಜ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಕನಕಪುರದ ಮಹಾದೇವಯ್ಯ ಅವರು ನನ್ನ ಮಗ ಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಸಹಾಯಕನಾಗಿ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದು ಕೆಲಸ ಖಾಯಂ ಎಂದು ಅರ್ಜಿ ಕೊಟ್ಟರು. ಮರೀಗೌಡನಹಳ್ಳಿ ಚಂದ್ರಯ್ಯ ಅವರು ನಮ್ಮ ಪೌತಿ ಖಾತೆ ಬೇರೆಯವರ ಹೆಸರಿಗೆ ಹೋಗಿದ್ದು ಮತ್ತೆ ನಮ್ಮ ಹೆಸರಿಗೆ ಬರುವಂತೆ ಮಾಡಿ ಎಂದು ಮನವಿ ಮಾಡಿದರು.
ಕೃಷ್ಣೆಗೌಡ ಅವರು ನನ್ನ ಮೊಮ್ಮಗ ಬಿಇ ಓದಿದ್ದು ನಿಮ್ಮ ಸಂಸ್ಥೆಯಲ್ಲಿ ಕೆಲಸ ಕೊಡಿ ಎಂದಾಗ “ಮನೆಯ ಬಳಿ ಮೊಮ್ಮಗನ ಜೊತೆ ಬನ್ನಿ ಕೆಲಸ ಕೊಡಿಸುವೆ” ಎಂದು ಡಿಸಿಎಂ ಹೇಳಿದರು.
ಏಳಗಳ್ಳಿ ಗ್ರಾಮದ ಶಿವಸ್ವಾಮಿ ಅವರು ನನ್ನ ಜಮೀನಿಗೆ ದಾರಿ ಬಿಡದೆ ಸತಾಯಿಸುತ್ತಿದ್ದಾರೆ ಎಂದಾಗ, “ಕಾನೂನಾತ್ಮಕವಾಗಿ ಇವರ ಸಮಸ್ಯೆ ಪರಿಹರಿಸಿ” ಎಂದು ಪಕ್ಕದಲ್ಲಿಯೇ ಇದ್ದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 285, ಗ್ರಾಮ ಪಂಚಾಯ್ತಿಗೆ 105, ಬೆಸ್ಕಾಂ 10, ಪಿಂಚಣಿಗೆ ಸಂಬಂಧಿಸಿದಂತೆ ಕೆಲವು ಅರ್ಜಿ ಸೇರಿ ಸುಮಾರು 600 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಜನರ ಸಮಸ್ಯೆಗಳನ್ನು ಡಿಸಿಎಂ ಅವರ ಜೊತೆಗೂಡಿ ಮಾಜಿ ಸಂಸದ ಡಿ. ಕೆ. ಸುರೇಶ್ ಅವರು ಆಲಿಸಿದರು.
ಹುಟ್ಟೂರಲ್ಲಿ ನಾಡಕಚೇರಿಯನ್ನು ಉದ್ಘಾಟನೆ ಮೂಲಕ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದರು.ನಂತರ ರೈತ ಸಂಪರ್ಕ ಕೇಂದ್ರ, ಅಂಚೆ ಕಚೇರಿ ಒಳಗೊಂಡ ನೂತನ ಸರ್ಕಾರಿ ಕಚೇರಿಗಳ ಸಂಕೀರ್ಣವನ್ನು ವೀಕ್ಷಿಸಿದರು. ಡಿಸಿಎಂ ಅವರನ್ನು ಹುಟ್ಟೂರಿನ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರುವ ಮೂಲಕ ಬರಮಾಡಿ ಕೊಂಡರು.
ನಂತರ ಬಾಗಿಲಿಗೆ ಬಂತು, ಸರಕಾರ ಸೇವೆಗೆ ಇರಲಿ ಸಹಕಾರ ಹಾಗೂ ಮರು ಸರ್ವೇ ಯೋಜನೆಯಡಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಸೃಜಿಸಲಾದ ಕರಡು ಆರ್ ಟಿಸಿ ದಾಖಲೆಗಳ ವಿತರಣೆ ಕಾರ್ಯಕ್ರಮವನ್ನು ಶಿವಕುಮಾರ್ ಅವರು ಉದ್ಘಾಟಿಸಿದರು. ನಂತರ ನೂತನ ಪೌತಿ ಖಾತೆ ಪತ್ರವನ್ನು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಿದರು. ಕೃಷಿ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಣೆ ಹಾಗೂ ಸೌಲಭ್ಯ ಪತ್ರ ವಿತರಣೆ ಮಾಡಿ ಸರ್ಕಾರದ ಪ್ರಯೋಜನಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಭಾರತಿಯ ಸೇನೆಯಿಂದ ಇತ್ತೀಚಿಗೆ ನಿವೃತ್ತರಾದ ದೊಡ್ದ ಆಲಹಳ್ಳಿಯ ಸೈನಿಕ ಚಂದ್ರಶೇಖರ್ ಅವರನ್ನು ಸನ್ಮಾನಿಸಿದರು. ಉಯ್ಯಂಬಳ್ಳಿ ಹೋಬಳಿಯ ಫಲನುಭವಿಗಳಿಗೆ ಸಹಾಯಧನ, ಪಡಿತರ ಚೀಟಿ ಸಮಸ್ಯೆ, ವಿದ್ಯಾರ್ಥಿ ವೇತನ, ವಿವಿಧ ಇಲಾಖೆಗಳಿಂದ ಮಂಜೂರಾದ ಯೋಜನೆಗಳ ಚೆಕ್ ಹಾಗೂ ಪರಿಹಾರ ಧನ ವಿತರಣೆ ನೀಡಿದರು.
ಕಂದಾಯ ಇಲಾಖೆಯಿಂದ ಸಿಬ್ಬಂದಿ ಒದಗಿಸಿದರೆ ನಾಲ್ಕು ತಿಂಗಳಲ್ಲಿ ತಾಲೂಕಿನಲ್ಲಿ ಮರು ಭೂಮಾಪನ ಯೋಜನೆ ಪೂರ್ಣಗೊಳಿಸುತ್ತೇನೆ: ಡಿ.ಕೆ. ಸುರೇಶ್
ಕನಕಪುರ:
“ಕಂದಾಯ ಇಲಾಖೆಯಿಂದ 30-40 ಸಿಬ್ಬಂದಿ ಒದಗಿಸಿದರೆ ನಾನೇ ಮುಂದೆ ನಿಂತು ಮುಂದಿನ ನಾಲ್ಕು ತಿಂಗಳಲ್ಲಿ ತಾಲೂಕಿನಲ್ಲಿ ಮರು ಭೂಮಾಪನ ಯೋಜನೆ ಪೂರ್ಣಗೊಳಿಸುತ್ತೇನೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಕನಕಪುರದ ದೊಡ್ಡಆಲಹಳ್ಳಿಯಲ್ಲಿ ಭಾನುವಾರ ನಡೆದ ಮರು ಭೂಮಾಪನ ಯೋಜನೆಯಡಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಸೃಜಿಸಲಾದ ಕರಡು ಆರ್ ಟಿಸಿ ದಾಖಲೆಗಳ ವಿತರಣೆ ಕಾರ್ಯಕ್ರಮದಲ್ಲಿ ಸುರೇಶ್ ಅವರು ಭಾಗವಹಿಸಿ ಮಾತನಾಡಿದರು.
“ಕಂದಾಯ ಇಲಾಖೆಯಲ್ಲಿ ಇದೊಂದು ಐತಿಹಾಸಿಕ ದಿನ. 100 ವರ್ಷಕ್ಕೂ ಹೆಚ್ಚು ಕಾಲ ಅಳವಡಿಸಿಕೊಂಡಿದ್ದ ಭೂಮಾಪನ ಪದ್ಧತಿ ಹೊರತಾಗಿ ಈಗ ಹೊಸ ಮಾದರಿಯ ಮಾಪನ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಆಮೂಲಕ ದೊಡ್ಡಆಲಹಳ್ಳಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮ ಮಾಡಲಾಗಿದೆ” ಎಂದರು.
“ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಸರ್ವೇ ಇಲಾಖೆ, ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸುತ್ತೇನೆ. ಸರ್ವೇ ಕಚೇರಿ ಎಂದರೆ ರೈತರ ಪಾಲಿನ ಸಿಂಹಸ್ವಪ್ನ. ಇದಕ್ಕೆ ಪರಿಹಾರ ನೀಡಲು ಕರ್ನಾಟಕ ಸರ್ಕಾರ ಈ ಪ್ರಾಯೋಗಿಕ ಪ್ರಯತ್ನ ಮಾಡಿದೆ” ಎಂದು ಹೇಳಿದರು.
“ಮೊದಲು ಯಾವ ಜಿಲ್ಲೆಯಲ್ಲಿ ಮಾಡಬೇಕು ಎಂದು ಚಿಂತನೆ ನಡೆಸುವಾಗ ನಾನು ನಮ್ಮ ರಾಮನಗರ ಜಿಲ್ಲೆಯ ನಮ್ಮ ಕ್ಷೇತ್ರದಲ್ಲೇ ಮಾಡಿ ಎಂದು ಕಂದಾಯ ಸಚಿವರಿಗೆ ಮನವಿ ಮಾಡಿದೆ. ಉಯ್ಯಂಬಳ್ಳಿ
ಹೋಬಳಿಯಲ್ಲಿ 35 ಕಂದಾಯ ಗ್ರಾಮಗಳಿದ್ದು, 33 ಗ್ರಾಮಗಳಲ್ಲಿ 23,469 ರೈತರ ಭೂಮಿಯ ಸರ್ವೇ ಮಾಡಲಾಗಿದೆ. ಕೆಲವರು ಸರಪಳಿ ಹಾಕಿ ಅಳತೆ ಮಾಡಿದರೆ ಮಾತ್ರ ಸರ್ವೇ ಎಂದು ಭಾವಿಸಿದ್ದಾರೆ. ಹೀಗಾಗಿ ಅನೇಕರು ನಮ್ಮ ಜಮೀನು ಸರ್ವೇ ಆಗಿದೆ ಎಂದರೆ ನಂಬುತ್ತಿಲ್ಲ” ಎಂದು ತಿಳಿಸಿದರು.
“ರೋವರ್ ತಂತ್ರಜ್ಞಾನದ ಮೂಲಕ ಬಹಳ ಸರಳೀಕರಣವಾಗಿ, ಬಹಳ ನಿಖರವಾಗಿ ಭೂ ಮಾಪನ ಮಾಡಲಾಗಿದೆ. ಈ ತಂತ್ರಜ್ಞಾನ ಮೂಲಕ ಅಳತೆಯಲ್ಲಿ ವ್ಯತ್ಯಾಸ ಕಂಡುಬರುವುದು ಕೇವಲ 1 ಸೆ.ಮೀ ಮಾತ್ರ. ಈ ರೀತಿ 97 ಸಾವಿರ ಎಕರೆ ಜಮೀನು ಸರ್ವೇ ಮಾಡಲಾಗಿದೆ” ಎಂದರು.
“ಪಹಣಿಯಲ್ಲಿ ನಕ್ಷೆ, ನಕಾಶೆ, ಕ್ಯೂಆರ್ ಕೋಡ್ ಇರುತ್ತದೆ. ಇದನ್ನು ಸ್ಕ್ಯಾನ್ ಮಾಡಿದರೆ ಭೂಮಿಯ ಅಳತೆ ದಾಖಲೆ ಮಾಹಿತಿ ಲಭ್ಯವಾಗುತ್ತದೆ. ರೈತರಿಗೆ ಜಮೀನಿನಲ್ಲಿ ವ್ಯತ್ಯಾಸ ಕಂಡು ಬಂದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಒಂದೇ ಪಹಣಿಯಲ್ಲಿ ಹಲವಾರು ಹೆಸರುಗಳಿದ್ದು, ಅದನ್ನು ಸರಿಪಡಿಸಲು ಅವಕಾಶವಿದೆ. ಆಕ್ಷೇಪಗಳಿದ್ದರೆ ಅದನ್ನು ಉಚಿತವಾಗಿ ಸರಿಪಡಿಸಲು 1 ತಿಂಗಳು ಕಾಲಾವಕಾಶವಿದೆ. ಒಂದು ತಿಂಗಳ ನಂತರ ಇದಕ್ಕೆ ಶುಲ್ಕ ಪಾವತಿಸಬೇಕು” ಎಂದು ತಿಳಿಸಿದರು.
“ಈ ಹೋಬಳಿಯಲ್ಲಿ 5 ಸಾವಿರ ಸರ್ವೇ ನಂಬರ್ ಗಳು ಇದ್ದವು. ಈ ಕಾರ್ಯಕ್ರಮದ ನಂತರ ಸರ್ವೇ ನಂಬರ್ ಗಳ ಸಂಖ್ಯೆ 23 ಸಾವಿರಕ್ಕೆ ಏರಿಕೆಯಾಗಿವೆ.
“ಈ ಸೌಲಭ್ಯವನ್ನು ಇಡೀ ತಾಲೂಕು ಹಾಗೂ ಜಿಲ್ಲೆಗೆ ವಿಸ್ತರಿಸಬೇಕು ಎಂದು ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಕಂದಾಯ ಇಲಾಖೆ ಸಚಿವರಾದ ಕೃಷ್ಣ ಭೈರೇಗೌಡ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಂದಿಲ್ಲ. ಇಂದು ಬೆಳಗ್ಗೆ ಅವರಿಗೆ ಕರೆ ಮಾಡಿ ಮಾತನಾಡುವಾಗ ನಮ್ಮ ಬೇಡಿಕೆ ಇನ್ನು ಇವೆ ಎಂದು ಕೇಳಿದೆ. ಅವರು ನಿಮ್ಮ ಬೇಡಿಕೆ ಏನೇ ಇದ್ದರೂ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು” ಎಂದರು.
“ಇನ್ನು ಈ ಆರ್ ಟಿಸಿ ಒಳಗೆ ಜಮೀನು ಮಾಲೀಕರ ಹೆಸರಿನ ಜತೆಗೆ ಅವರ ಫೋಟೋ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಸೇರಿಸುವ ಕೆಲಸ ಮಾಡಬೇಕು. ಆಗ ಒಂದೇ ಹೆಸರಿನ ಹಲವು ವ್ಯಕ್ತಿಗಳಿದ್ದರೂ ಗೊಂದಲ ಆಗುವುದಿಲ್ಲ” ಎಂದು ಸಲಹೆ ನೀಡಿದರು.
*ಬಸ್ ನಿಲ್ದಾಣಕ್ಕೆ ಮನವಿ:*
“ಸರ್ಕಾರಿ ಕಿರಿಯ ಪ್ರಾಥಮಿಕ . ಪಾಠಶಾಲೆ ನಾನು ಆಟವಾಡಿ ಬೆಳೆದ ಆಟದ ಮೈದಾನ. ಇಲ್ಲಿ ಸರ್ಕಾರಿ ಬಸ್ ಗಳು ಬಂದರೆ ಮತ್ತೆ ವಾಪಸ್ ಹೋಗಲು ರಸ್ತೆಯಲ್ಲಿ ಬಸ್ ಹಿಂದಿರುಗಿಸಲು ಕಷ್ಟವಾಗುತ್ತಿದೆ. ಹೀಗಾಗಿ ಈ ಮೈದಾನದಲ್ಲೇ ಸರ್ಕಾರಿ ಬಸ್ ನಿಲ್ದಾಣ ಮಾಡಿಕೊಡಬೇಕು” ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಮಾಡಿದರು. ಈ ಮನವಿಗೆ ರಾಮಲಿಂಗಾ ರೆಡ್ಡಿ ಅವರು ಸಮ್ಮತಿ ಸೂಚಿಸಿದರು.
*ರೈತರ ಸಮಸ್ಯೆಗೆ ಪರಿಹಾರ ಕೊಡಿ:*
“ರಾಜ್ಯ ಸರ್ಕಾರ ಈಗ ಕೇವಲ ಬಗರ್ ಹುಕುಂ ಸಾಗುವಳಿ ಜಮೀನಿಗೆ ಮಾತ್ರ ಮಾರ್ಗಸೂಚಿ ಹೊರಡಿಸಿದ್ದು, ಅದಕ್ಕೂ ಮುಂಚಿತವಾಗಿ ಆಗಿರುವ ಜಮೀನುಗಳಿಗೆ ಪರಿಹಾರ ಕಂಡುಹಿಡಿಯಬೇಕು. ಈ ವಿಚಾರವಾಗಿ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಬೇಕು” ಎಂದು ಮನವಿ ಮಾಡಿದರು.
“ಐಎಲ್, ಆರ್ ಆರ್, ಹರಾಜು ಮೂಲಕ ಬಂದಿರುವ ಜಮೀನು, ಹಂಗಾಮಿ ಸಾಗುವಳಿ ಜಮೀನು ಪಡೆದವರು ಈಗಾಗಲೇ ಮೂರ್ನಾಲ್ಕು ಕೈ ಬದಲಾಗಿದೆ. 1964ರಿಂದ ಆರ್ ಟಿಸಿ ಮಾಡಿಕೊಂಡು ಬಂದವರನ್ನು ಪರಿಗಣಿಸಬೇಕು. ತಾಲೂಕು ಕಚೇರಿಗಳಲ್ಲೇ ಭೂಮಿಯ ದಾಖಲೆಗಳು ಇಲ್ಲವಾಗಿವೆ. ಇಡೀ ರಾಜ್ಯದಲ್ಲಿ ಇಂತಹ ಸಮಸ್ಯೆಗಳಿವೆ. ಹೀಗಾಗಿ ರೈತರ ಬಳಿ ಇರುವ ಮೂಲ ದಾಖಲೆ ಹಾಗೂ ಸ್ಥಳ ಪರಿಶೀಲನೆ ಮಾಡಿ ಅವರಿಗೆ ಜಮೀನಿನ ದಾಖಲೆ ನೀಡಬೇಕು. ಈ ಪ್ರಕ್ರಿಯೆಯನ್ನು ಸರಳೀಕರಣ ಮಾಡಬೇಕು” ಎಂದು ಮನವಿ ಮಾಡಿದರು.