ಲಾಸ್ ಏಂಜಲೀಸ್ : ಅಮೆರಿಕದ ಲಾಸ್ ಏಂಜಲೀಸ್ನಾದ್ಯಂತ ಭೀಕರ ಗಾಳಿಯು ಕಾಡ್ಗಿಚ್ಚುಗಳನ್ನು ವಿನಾಶಕಾರಿಯಾಗಿ ಪರಿವರ್ತಿಸಿದೆ. ಕಾಡ್ಗಿಚ್ಚಿನಿಂದಾಗಿ ಕನಿಷ್ಠ 16 ಜನರು ಸಾವಿಗೀಡಾಗಿದ್ದಾರೆ ಮತ್ತು 12,000 ಕ್ಕೂ ಹೆಚ್ಚು ಕಟ್ಟಡಗಳು ಬೆಂಕಿಗೆ ಆಹುತಿಯಾಗಿ ನೆಲಸಮಗೊಂಡಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
1,53,000 ನಿವಾಸಿಗಳು ಕಡ್ಡಾಯವಾಗಿ ಸ್ಥಳಾಂತರಿಸುವ ಆದೇಶದ ಅಡಿಯಲ್ಲಿದ್ದಾರೆ, 57,000 ರಚನೆಗಳು ತಕ್ಷಣದ ಅಪಾಯದಲ್ಲಿದೆ. ಇನ್ನೂ 1,66,000 ಜನರು ಸ್ಥಳಾಂತರಿಸುವ ಎಚ್ಚರಿಕೆಯಲ್ಲಿದ್ದಾರೆ.
ಅಗ್ನಿಶಾಮಕ ದಳದವರು ಜ್ವಾಲೆಯನ್ನು ತಣ್ಣಗಾಗಿಸಲು ಯುದ್ಧೋಪಾದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾತ್ರಿಯ ಮತ್ತು ಮುಂದಿನ ವಾರದ ಆರಂಭದಲ್ಲಿ ಬಲವಾದ ಗಾಳಿ ಬೀಸುವ ಮುನ್ಸೂಚನೆಯು ಅವರ ಕಾರ್ಯಕ್ಕೆ ಅಡ್ಡಿಯುಂಟು ಮಾಡಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಲಾಸ್ ಏಂಜಲೀಸ್ ಕೌಂಟಿಯಲ್ಲಿನ ನಾಲ್ಕು ಸಕ್ರಿಯ ಬೆಂಕಿಯ ಜ್ವಾಲೆಗಳಲ್ಲಿ ಅತಿ ದೊಡ್ಡದಾದ ಪಾಲಿಸೇಡ್ಸ್ ಫೈರ್, ಹೆಚ್ಚುವರಿ 1,000 ಎಕರೆಗಳಷ್ಟು ವಿಸ್ತರಿಸಿದೆ, ಹೆಚ್ಚಿನ ಮನೆಗಳನ್ನು ಆಹುತಿ ತೆಗೆದುಕೊಂಡಿದೆ. ಜನರ ತುರ್ತು ಸ್ಥಳಾಂತರಿಸುವಿಕೆಗೆ ಕಾರಣವಾಗಿದೆ. ಬೆಂಕಿಯ ಜ್ವಾಲೆಗಳು ಕೆರಲುತ್ತಲೇ ಇರುವುದರಿಂದ 1,00,000 ಕ್ಕೂ ಹೆಚ್ಚು ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ.
ಲಾಸ್ ಏಂಜಲೀಸ್ ಭೀಕರ ಕಾಳ್ಗಿಚ್ಚು
ಸಿಎಎಲ್ ಫೈರ್ ಅಧಿಕಾರಿ ಟಾಡ್ ಹಾಪ್ಕಿನ್ಸ್ ಪ್ರಕಾರ, ಪಾಲಿಸೇಡ್ಸ್ ಬೆಂಕಿಯ ಜ್ವಾಲೆಗಳಿಂದ 22,000 ಎಕರೆಗಳಿಗಿಂತ ಹೆಚ್ಚು ಪ್ರದೇಶ ಸುಟ್ಟುಹೋಗಿದೆ ಮತ್ತು 426 ಮನೆಗಳನ್ನು ಒಳಗೊಂಡಂತೆ 5,000 ಕ್ಕೂ ಹೆಚ್ಚು ಕಟ್ಟಡಗಳನ್ನು ನಾಶಪಡಿಸಿದೆ. ಜನವರಿ 7 ರಂದು ಕಾಡಿಚ್ಚಿನಿಂದ ಭೀಕರ ಬೆಂಕಿ ಜ್ವಾಲೆಗಳು ಪ್ರಾರಂಭವಾದಾಗಿನಿಂದ, ಅವರು ಸುಮಾರು 39,000 ಎಕರೆ ಪ್ರದೇಶವನ್ನು ಸುಟ್ಟುಹಾಕಿದೆ, ಇದು ಸ್ಯಾನ್ ಫ್ರಾನ್ಸಿಸ್ಕೋಗಿಂತ ದೊಡ್ಡದಾಗಿದೆ ಮತ್ತು ಸಂಪೂರ್ಣ ಸಮುದಾಯಗಳನ್ನು ನಾಶಮಾಡಿದೆ. ಆರಂಭಿಕವಾಗಿ ಆರ್ಥಿಕ ನಷ್ಟಗಳು $135 ಶತಕೋಟಿಯಿಂದ $150 ಶತಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಸಂಭಾವ್ಯವಾಗಿ ಈ ಕಾಳ್ಗಿಚ್ಚುಗಳು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಭೀಕರ ಎಂದು ಅಂದಾಜಿಸಲಾಗಿದೆ..
ವೀಡಿಯೊದಲ್ಲಿ ಪಾಲಿಸೇಡ್ಸ್ ಫೈರ್ ಬಳಿ ನಾಟಕೀಯ ಬೆಂಕಿ ಸುಂಟರಗಾಳಿಯನ್ನು ಸೆರೆಹಿಡಿಯಲಾಗಿದೆ, ನಿಯಂತ್ರಣಕ್ಕೆ ಬಾರದ ಬೆಂಕಿ ಜ್ವಾಲೆಯ ಸುಳಿಯನ್ನು ಇದು ತೋರಿಸುತ್ತದೆ. ಫೈರ್ ವರ್ಲ್ಸ್ ಅಥವಾ ಫೈರ್ ಡೆವಿಲ್ಸ್ ಎಂದೂ ಕರೆಯಲ್ಪಡುವ, ಬಿಸಿ ಗಾಳಿ ಮತ್ತು ಅನಿಲಗಳು ಬೆಂಕಿಯಿಂದ ಏರಿದಾಗ “ಫೈರ್ನಾಡೋ” ಸಂಭವಿಸುತ್ತದೆ, ಇದು ಹೊಗೆ, ಶಿಲಾಖಂಡರಾಶಿಗಳು ಮತ್ತು ಜ್ವಾಲೆಗಳನ್ನು ಗಾಳಿಯಲ್ಲಿ ಎತ್ತೊಯ್ಯುವ ಮೂಲಕ ಬೆಂಕಿಯ ಕಾಲಮ್ ಅನ್ನು ರೂಪಿಸುತ್ತದೆ.
ಪಾಲಿಸೇಡ್ಸ್ ಬೆಂಕಿಯು ಶೇಕಡಾ 11 ರಷ್ಟು ಹತೋಟಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಕಡಿದಾದ ಭೂಪ್ರದೇಶ ಮತ್ತು ಅನಿಯಮಿತ ಗಾಳಿಯಿಂದಾಗಿ ಅಗ್ನಿಶಾಮಕ ತಂಡಗಳಿಗೆ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅಲ್ಟಾಡೆನಾ ಪ್ರದೇಶದ ಮೇಲೆ ಪರಿಣಾಮ ಬೀರುವ ಈಟನ್ ಬೆಂಕಿ ಜ್ವಾಲೆಯಿಂದ 14,000 ಎಕರೆಗಳನ್ನು ಸುಟ್ಟುಹಾಕಿದೆ
ಕಾಡ್ಗಿಚ್ಚಿನ ಪರಿಣಾಮದಿಂದ ಈವರೆಗೆ 16 ಸಾವಿಗೀಡಾಗಿದ್ದಾರೆ, 13 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಇಲಾಖೆ ವರದಿ ಮಾಡಿದೆ ಮತ್ತು ನಾಪತ್ತೆಯಾದವರನ್ನು ಹುಡುಕುವ ಕಠೋರ ಕಾರ್ಯಕ್ಕೆ ಶವದ ನಾಯಿಗಳನ್ನು ಬಳಸಿಕೊಂಡು ವ್ಯವಸ್ಥಿತ ಹುಡುಕಾಟ ನಡೆದಿದೆ
ಬೆಂಕಿ ಜ್ವಾಲೆಯು ಮ್ಯಾಂಡೆವಿಲ್ಲೆ ಕಣಿವೆಯ ಅಕ್ಕಪಕ್ಕದ ಪ್ರದೇಶವನ್ನು ತಲುಪಿದೆ ಮತ್ತು ಸ್ಯಾನ್ ಫರ್ನಾಂಡೋ ವ್ಯಾಲಿ ಮತ್ತು ಬ್ರೆಂಟ್ವುಡ್ಗೆ ಅಪಾಯವನ್ನುಂಟುಮಾಡಿದೆ, ಇದು ಅರ್ನಾಲ್ಡ್ ಶ್ವಾರ್ಜಿನೆಗ್ಗರ್ನಂತಹ ಪ್ರಸಿದ್ಧ ವ್ಯಕ್ತಿಗಳು ವಾಸಿಸುವ ಉನ್ನತ ಮಟ್ಟದ ಪ್ರದೇಶವಾಗಿದೆ. ಜ್ವಾಲೆಗಳು 405 ಮುಕ್ತಮಾರ್ಗವನ್ನು ಸಮೀಪಿಸುತ್ತಿವೆ.
ಸಾಂಟಾ ಅನಾ ಬಿರುಗಾಳಿಯಿಂದ ಬೆಂಕಿಯು ಉಲ್ಬಣಗೊಂಡಿದೆ, ಇದು ಕೆಲವು ಪ್ರದೇಶಗಳಲ್ಲಿ ಗಂಟೆಗೆ 100 ಮೈಲುಗಳನ್ನು ತಲುಪಿದೆ (mph). ಈ ಒಣ ಮಾರುತಗಳು 70 mph ವರೆಗಿನ ಗಾಳಿಯೊಂದಿಗೆ ಪುನಃ ಆಗಮಿಸುವ ನಿರೀಕ್ಷೆಯಿದೆ ಮತ್ತು “ಶುಷ್ಕ ಗಾಳಿ ಮತ್ತು ಒಣಗಿನ ಸಸ್ಯವರ್ಗದೊಂದಿಗೆ ಸೇರಿಕೊಂಡು ಲಾಸ್ ಏಂಜಲೀಸ್ ಕೌಂಟಿಯಲ್ಲಿ ಬೆಂಕಿ ಜ್ವಾಲೆ ಹೆಚ್ಚಾಗುವ ಭಯಕ್ಕೆ ಕಾರಣವಾಗಿದೆ ಎಂದು ಅಗ್ನಿಶಾಮಕ ಮುಖ್ಯಸ್ಥ ಆಂಥೋನಿ ಮರ್ರೋನ್ ಹೇಳಿದ್ದಾರೆ.
ಅಧ್ಯಕ್ಷ ಜೋ ಬೈಡನ್ ಅವರು ಫೆಮಾ ಮೂಲಕ ಫೆಡರಲ್ ನೆರವನ್ನು ಅನ್ಲಾಕ್ ಮಾಡುವ ಮೂಲಕ ಈ ಪ್ರದೇಶದಲ್ಲಿ ಪ್ರಮುಖ ವಿಪತ್ತು ಎಂದು ಘೋಷಿಸಿದ್ದಾರೆ. ಅವರು ಶನಿವಾರ ಮತ್ತೊಮ್ಮೆ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ವೈಮಾನಿಕ ತಂಡಗಳು ಅನೇಕ ಕೆರಳಿದ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನ ಮುಂದುವರಿಸಿವೆ.
ಕಾಡ್ಗಿಚ್ಚಿನ ಕಾರಣವನ್ನು ನಿರ್ಧರಿಸಲು ಫೆಡರಲ್ ತನಿಖೆ ನಡೆಯುತ್ತಿದೆ. ನೈಸರ್ಗಿಕ ಅಂಶಗಳು ಆಗಾಗ್ಗೆ ಇಂತಹ ಬೆಂಕಿಗೆ ಕಾರಣವಾದರೂ, ಮಾನವ ಚಟುವಟಿಕೆಯ ಸಾಧ್ಯತೆಯನ್ನೂ ತಳ್ಳಿಹಾಕಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆನಡಾದ ಜೊತೆಗೆ, ಮೆಕ್ಸಿಕೋ ಕೂಡ ಕ್ಯಾಲಿಫೋರ್ನಿಯಾದಲ್ಲಿ ರಕ್ಷಣಾ ಮತ್ತು ಅಗ್ನಿಶಾಮಕ ಕೆಲಸಕ್ಕೆ ಸೇರಿಕೊಂಡಿದೆ. ಮೆಕ್ಸಿಕೋದಿಂದ 14,000 ಕ್ಕೂ ಹೆಚ್ಚು ಅಗ್ನಿಶಾಮಕ ದಳದವರು ಅಮೆರಿಕದ ಪಾಲಿಸೇಡ್ಸ್ ಬೆಂಕಿಯನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಹವಾಮಾನ ಬದಲಾವಣೆಯು ಕಾಡ್ಗಿಚ್ಚುಗಳ ಆವರ್ತನ ಮತ್ತು ತೀವ್ರತೆಗೆ ಪ್ರಮುಖ ಅಂಶವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಏರುತ್ತಿರುವ ತಾಪಮಾನಗಳು, ದೀರ್ಘಕಾಲದ ಬರಗಳು ಮತ್ತು ಒಣಗಿದ ಸಸ್ಯವರ್ಗವು ಬೆಂಕಿಯು ವೇಗವಾಗಿ ಹರಡಲು ಅನುಕೂಲವಾದ ಸನ್ನಿವೇಶಗಳನ್ನು ಸೃಷ್ಟಿಸುತ್ತದೆ, ಹೆಚ್ಚಿನ ಸಮುದಾಯಗಳನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಅವರು ಹೇಳಿದ್ದಾರೆ.