ಬೆಳಗಾವಿ : ರಾಜ್ಯ ಬಿಜೆಪಿಯಂತೆ ರಾಮದುರ್ಗದಲ್ಲೂ ಸಹ ಬಿಜೆಪಿ ಬಣ ರಾಜಕೀಯ ಜೋರಾಗಿದ್ದು, ಪರಿಣಾಮ ಪುರಸಭೆಯಲ್ಲಿ ಬಹುಮತ ಇದ್ದರೂ ಸಹ ಅಧಿಕಾರದಿಂದ ವಂಚಿತವಾಗುವ ಸಾಧ್ಯತೆ ಇದೆ. ಒಟ್ಟಾರೆ ಒಡೆದ ಮನೆಯಂತಾಗಿರುವ ಬಿಜೆಪಿ ಬಣ ರಾಜಕೀಯದಿಂದ ಇದೀಗ ಕಾಂಗ್ರೆಸ್ ಪಕ್ಷ ನಿರಾಯಾಸವಾಗಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ.
ಸೋಮವಾರ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಎಲ್ಲರ ಚಿತ್ತ ಇದೀಗ ರಾಮದುರ್ಗದತ್ತ ಹರಿದಿದೆ ಈ ನಡುವೆ ಕಾಂಗ್ರೆಸ್ ಪಕ್ಷ ತನ್ನ ಕೈ ಬಾವುಟ ಹಾರಿಸಲು ವೇದಿಕೆ ಸಿದ್ಧವಾಗಿದೆ.
ರಾಮದುರ್ಗ ಕಾಂಗ್ರೆಸ್ ಶಾಸಕ ಅಶೋಕ ಪಟ್ಟಣ ಅವರಿಗೆ ಈ ಬೆಳವಣಿಗೆ ಹೆಚ್ಚಿನ ಲಾಭ ತರಲಿದೆ ತಮ್ಮದೇ ಪಕ್ಷದ ಆಡಳಿತ ಇದ್ದರೆ ಹೆಚ್ಚು ಕೆಲಸ ಮಾಡಿಕೊಳ್ಳುವ ಅವರ ಬಯಕೆ ಈಡೇರುವ ಸಾಧ್ಯತೆ ಈ ಬಾರಿ ನಿಚ್ಚಳವಾಗಿದೆ.
27 ಸದಸ್ಯರನ್ನು ಹೊಂದಿರುವ ಪುರಸಭೆಯಲ್ಲಿ ಬಿಜೆಪಿ 16 ಸದಸ್ಯರನ್ನು ಹೊಂದಿ ಸ್ಪಷ್ಟ ಬಹುಮತ ಹೊಂದಿದೆ. ಹಿಂದಿನ ಅವಧಿಯಲ್ಲಿ ಓರ್ವ ಪಕ್ಷೇತರ ಸದಸ್ಯೆ ಸಹ ಬಿಜೆಪಿ ಬೆಂಬಲಿಸಿದ್ದರಿಂದ ಬಲ 17ಕ್ಕೇರಿತ್ತು. ಆದರೆ, ಪಕ್ಷದಲ್ಲಿ ಬಣ ರಾಜಕೀಯ ಹಾಗೂ ರಾಜ್ಯದಲ್ಲಿ ಬದಲಾದ ರಾಜಕೀಯದಿಂದ ಪುರಸಭೆಯ ಕೊನೆಯ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷೇತರ ಸದಸ್ಯೆ ಸೇರಿ ಬಿಜೆಪಿಯ 5 ಸದಸ್ಯರು ಆಪರೇಷನ್ ಹಸ್ತಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಪುರಸಭೆ ಅಧಿಕಾರ ಬಿಜೆಪಿಯ ಕೈತಪ್ಪುವ ಸಾಧ್ಯತೆ ಇದ್ದು, ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಎಲ್ಲ ಸಾಧ್ಯತೆಗಳು ಹೆಚ್ಚಾಗಿದೆ.
ಕಳೆದ ವಿಧಾನಸಭೆ ಚುನಾವಣೆ ನಂತರ ರಾಜ್ಯ ಹಾಗೂ ಜಿಲ್ಲೆಯ ಬಣ ರಾಜಕೀಯದ ಕರಿನೆರಳು ರಾಮದುರ್ಗ ತಾಲೂಕಿನಲ್ಲೂ ಕಾಣಿಸಿಕೊಂಡಿದ್ದು, ಬಿಜೆಪಿ ಒಡೆದ ಮನೆಯಾಗಿದೆ. 16 ಬಿಜೆಪಿ ಸದಸ್ಯರಲ್ಲಿ ಎರಡು ತಂಡಗಳಾಗಿದ್ದು, ಎರಡೂ ಗುಂಪುಗಳ ಮಧ್ಯೆ ಕಂದಕ ನಿರ್ಮಾಣವಾಗಿದೆ. ಈ ಬಣಗಳನ್ನು ಒಂದಡೆ ಸೇರಿಸುವ ನಾಯಕರಿಲ್ಲದೆ ಪುರಸಭೆಯಲ್ಲಿ ಸ್ಪಷ್ಟ ಬಹುಮತವಿದ್ದರೂ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಆತಂಕ ಎದುರಾಗಿದೆ. ಪಕ್ಷ ಒಗ್ಗೂಡಿಸುವ ಜಿಲ್ಲಾ ನಾಯಕರು ಇಲ್ಲದ ಕಾರಣ ಅಧಿಕಾರ ಕೈತಪ್ಪುವ ಸಾಧ್ಯತೆ ಇದೆ.
ಸರ್ಕಾರ ಪುರಸಭೆಯ ಉಳಿದ ಅವಧಿಗೆ ಅಗಸ್ಟ್ ನಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ಬ ಮಹಿಳೆಗೆ ಮೀಸಲಾಗಿದೆ. ಸತತ ಹಿಂದುಳಿದ ವರ್ಗ ಅ ವರ್ಗಕ್ಕೆ ಮೀಸಲಾತಿ ನೀಡಿದೆ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ನ್ಯಾಯಾಲಯದ ಕಟ್ಟೆ ಏರಿದ್ದರಿಂದ ಚುನಾವಣೆ ಮೂಂದೂಡಲಾಗಿತ್ತು. ನ್ಯಾಯಾಲಯ ಅರ್ಜಿದಾರರ ಮತ್ತು ಸರ್ಕಾರದ ವಾದ ಆಲಿಸಿ ಕೊನೆಗೆ ಅಗಸ್ಟ್ ನಲ್ಲಿ ಪ್ರಕಟಿಸಿದ ಮೀಸಲಾತಿಯನ್ವಯ ಜ.13 ರಂದು ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.
ರಾಮದುರ್ಗ ಪುರಸಭೆಯಲ್ಲಿ ಕಳೆದ ಎರಡು ಅವಧಿಯಲ್ಲಿ ಬಿಜೆಪಿ ಸುಲಭವಾಗಿ ಅಧಿಕಾರದ ಗದ್ದುಗೆ ಏರಿತ್ತು. ಆದರೆ, ಈ ಭಾರಿ ಅಷ್ಟು ಸುಲಭವಿಲ್ಲ. ಬಿಜೆಪಿ ಬಣ ಬಡಿದಾಟದ ಲಾಭ ಪಡೆದು ಶಾಸಕ ಅಶೋಕ ಪಟ್ಟಣ ಪುರಸಭೆಯಲ್ಲಿ ಕಾಂಗ್ರೆಸ್ ಧ್ವಜ ಹಾರಿಸುವ ತಯಾರಿ ನಡೆಸಿದ್ದಾರೆ. ಬಿಜೆಪಿಯ ಸದಸ್ಯರನ್ನು ಕಾಂಗ್ರೆಸ್ನತ್ತ ಸೆಳೆಯಲು ಕೆಪಿಸಿಸಿ ಸದಸ್ಯ ಸುರೇಶ ಪತ್ತೇಪೂರ ನೇತೃತ್ವ ವಹಿಸಿದ್ದಾರೆಂದು ತಿಳಿದು ಬಂದಿದೆ. ಆದರೂ ಕೊನೆಯ ಕ್ಷಣದಲ್ಲಿ ಪಕ್ಷದ ಮುಖಂಡರು ಪೀಲ್ಡ್ಗಿಳಿದು ಸದಸ್ಯರ ಮನವೊಲಿಸಿದರೆ ಮಾತ್ರ ಬಿಜೆಪಿಗೆ ಅಧಿಕಾರ ಒಲಿಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಾಮದುರ್ಗ ಪುರಸಭೆಯ ಆರು ಜನ ಬಿಜೆಪಿ ಸದಸ್ಯರು ಕಾಂಗ್ರೆಸ್ಗೆ ಹೋಗುವರೆಂಬ ಗುಮಾನಿ ಇದೆ. ಬಿಜೆಪಿ ಎಲ್ಲ 16 ಸದಸ್ಯರಿಗೂ ವಿಪ್ ಜಾರಿ ಮಾಡಲಾಗಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷರು ಪುರಸಭೆ ಚುನಾವಣೆಯ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
-ಮಲ್ಲಣ್ಣ ಯಾದವಾಡ, ಬಿಜೆಪಿ ಮುಖಂಡರು
ಈ ಬಾರಿಯ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ರಣತಂತ್ರ ಹೆಣೆದಿದ್ದು, ಈ ಬಾರಿ ಕಾಂಗ್ರೆಸ್ ನವರೇ ಅಧ್ಯಕ್ಷರಾಗೋದು ಖಚಿತ.
-ಅಶೋಕ ಪಟ್ಟಣ ಶಾಸಕರು ರಾಮದುರ್ಗ