ಪಂಚಭೂತಗಳಲ್ಲಿ ಲೀನನಾದ ಬೆಳಗಾವಿ ಯೋಧ ರವಿ ತಳವಾರ..!
ಮುಗಿಲು ಮುಟ್ಟಿದ ಕುಟುಂಬದಸ್ಥರ ಆಕ್ರಂದನ.
ಮಮ್ಮಲು ಮರುಗಿ ಕಂಬನಿ ಮಿಡಿದ ಸಹಸ್ರಾರು ಜನ.
ಬೆಳಗಾವಿ/ಅಗಸಗಿ : ನಾಗಾಲ್ಯಾಂಡ್ ನಲ್ಲಿ ಕರ್ತವ್ಯನಿರತ ವೇಳೆ ವಾಹನ ಕಂದಕಕ್ಕೆ ಉರುಳಿದ ಅಪಘಾತದಲ್ಲಿ ಮೃತಪಟ್ಟ ಬೆಳಗಾವಿ ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದ ಆಸ್ಸಾಂ ರೈಫಲ್ 40 ನೇ ಬಟಾಲಿಯನ್ ವೀರ ಯೋಧ, ರವಿ ಯಲ್ಲಪ್ಪಾ ತಳವಾರ ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಸಕಲ ಸರಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ನೆರವೇರಿತು.
ಮೂರು ದಿನಗಳ ಹಿಂದೆ ( 8 ಜನೆವರಿ 2025) ನಾಗಾಲ್ಯಾಂಡ್ ದಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧ ರವಿಯ ಪಾರ್ಥಿವ ಶರೀರ ಬೆಳಗಾವಿಗೆ ತಲುಪಿದ ಮೇಲೆ ಇಂದು(ಶನಿವಾರ) ಮಧ್ಯಾಹ್ನ ಬೆಳಗಾವಿ ಮಹಾರ ರೆಜಿಮೆಂಟ್ ಸೇನಾ ಪಡೆ ಮೃತ ದೇಹವನ್ನು ತಂದು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡರು. ಸ್ವಗ್ರಾಮದಲ್ಲಿ ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ‘ಭಾರತ್ ಮಾತಾಕಿ ಜೈ, ರವಿ ಅಮರ ರಹೇ’ ಎಂಬ ಘೋಷಗಳೊಂದಿಗೆ ಮೆರವಣಿಗೆ ನಡೆಸಿ ಮೃತ ದೇಹವನ್ನು ಯೋಧನ ಹೋಲದಲ್ಲಿರುವ ರುದ್ರಭೂಮಿಗೆ ತಂದು ಅಗ್ನಿಸ್ಪರ್ಶ ನೀಡಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಹತ್ತಾರು ಗ್ರಾಮಸ್ಥರಿಂದ ಸಂತಾಪ ಸೂಚನೆ, ಕಂಬನಿ ಮಿಡಿತ.
ಬೆಳಗಾವಿ ಮಹಾರ ರೆಜಿಮೆಂಟ್ ಸೇನಾ ಪಡೆ ಮುಂಜಾನೆ ಮೃತ ದೇಹವನ್ನು ಅಂತಿಮ ಸಂಸ್ಕಾರಕ್ಕೆ ನಿಂಗ್ಯಾನಟ್ಟಿ ಗ್ರಾಮದ ಕಡೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಹಾಯ್ದು ಹೋಗುವ ಗ್ರಾಮಗಳಾದ ಅಗಸಗಿ, ಕಂಗ್ರಾಳಿ ಕೆಎಚ್, ಅಲತಗೆ, ಚಲವೆನಟ್ಟಿ, ಮಾಳೆನಟ್ಟಿ, ಹಂದಿಗನೂರ,ಬೊಡಕೆನಟ್ಟಿ, ಕುರಿಹಾಳ ಗ್ರಾಮಸ್ಥರು ಗ್ರಾಮದಲ್ಲಿ ವೀರ ಯೋಧನ ಬ್ಯಾನರ್ ಕಟ್ಟಿ ಪಾರ್ಥಿವ ಶರೀರ ಸಾಗಿಸುವ ವಾಹನದ ಮೇರವಣಿಗೆ ನಡೆಸಿ ಪುಪ್ಪದೆಳೆಗಳನ್ನು ಯೋಧನ ಪಾರ್ಥಿವ ಶರೀರ ಹಾಗೂ ವಾಹನದ ಮೇಲೆ ಚೆಲ್ಲಿ ನಮನ ಸಲ್ಲಿಸಿ ಕಂಬನಿ ಮಿಡಿದರು.
ಈ ಸಂದರ್ಭದಲ್ಲಿ ಅಗಸಗಿಯಲ್ಲಿ ಯೋಧನಿಗೆ ಸಹಸ್ರಾರು ಗ್ರಾಮಸ್ಥರು, ಪ್ರೌಢಶಾಲೆ, ಕಾಲೇಜ್, ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ಒಂದೆಡೆ ಸೇರಿ ಸಂತಾಪ ಸೂಚಿಸಿದರು. ಈ ವೇಳೆ KPCC ಸದಸ್ಯ ಮಲಗೌಡ ಪಾಟೀಲ, ಅಪ್ಪಯ್ಯಗೌಡ ಪಾಟೀಲ, ಅಗಸಗಿ ಗ್ರಾ ಪಂ ಅಧ್ಯಕ್ಷ ಅಮೃತ ಮುದ್ದಣ್ಣವರ, ಅಗಸಗಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರವಿ ಮಧಾಳೆ, ಪ್ರಾಥಮಿಕ ಶಾಲೆ ಪ್ರಾಚಾರ್ಯರು, ಮಾಜಿ ಸೈನಿಕರ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಂದ್ರ ಲಾಡ ಮೊದಲಾದವರು ಮೃತ ಯೋಧನ ಕುರಿತು ಮಾತನಾಡಿ ಸಂತಾಪ ಸೂಚಿಸಿದರು.
ಕಾಕತಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುರೇಶ್ ಶಿಂಗಿ ಹಾಗೂ ಕಾಕತಿ ಉಪ ತಹಶಿಲ್ದಾರ ಸಾಲುಂಕೆ, ಸರ್ಕಲ್ ಅಬ್ದುಲ್ ಶಹಾಪೂರ, ನೇತೃತ್ವದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಸಲು ಏರ್ಪಡಿಸಿದ್ದರು. ಮತ್ತು ಕಳೆದೆರಡು ದಿನಗಳಿಂದ ನಿಂಗ್ಯಾನಟ್ಟಿ ಮುಖಂಡರಾದ ಬಸನಗೌಡ ಹುದ್ದಾರ, ಭೀಮರಾಯ ನಾಯಿಕ, ಸುರೇಶ ಹಂಜಿ, ಸಿದ್ರಾಯ ನಾಯಿಕ, ಸಂತೋಷ ನಾಯಿಕ, ಕರುನಾಡ ರಕ್ಷಣಾ ವೇದಿಕೆ, ಸಿದ್ಧಿವಿನಾಯಕ ಯುವಕ ಮಂಡಳ ಹಾಗೂ ಶಿವಾಪೂರ, ಇದ್ದಲಹೊಂಡ ಗ್ರಾಮಸ್ಥರು ಸೇರಿಕೊಂಡು ಅಂತ್ಯಸಂಸ್ಕಾರಕ್ಕಾಗಿ ಅಚ್ಚುಕಟ್ಟಾಗಿ ಸಕಲ ಸಿದ್ದತೆ ಮಾಡಿಕೊಂಡಿದ್ದರು. ಶಿಕ್ಷಕ ಗಿರೀಶ್ ರುದ್ರಾಪೂರಿ ರೂಪರೇಷೆ ಹಾಕಿ ಯೋಧನ ಅಂತ್ಯಕ್ರಿಯೆ ಶಿಸ್ತುಬದ್ಧವಾಗಿ ನಡೆಸುವಲ್ಲಿ ಪಾತ್ರ ವಹಿಸಿದ್ದರು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ಉತ್ತಮ ರೀತಿಯಲ್ಲಿ ಅಂತ್ಯಕ್ರಿಯೆ ನೆರವೇರುವಲ್ಲಿ ಸಾಧ್ಯವಾಯಿತು.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಂಕ್ರದನ.
ಯೋಧ ರವಿಯ ಮೃತದೇಹ ಗ್ರಾಮಕ್ಕೆ ತಲುಪುತ್ತಿದ್ದಂತೆ ಕುಟುಂಬಸ್ಥರ ಆಂಕ್ರದನ ಮುಗಿಲು ಮುಟ್ಟಿತ್ತು.
ತಂದೆ ಯಲ್ಲಪ್ಪಾ, ತಾಯಿ ಸಿದ್ದವ್ವಾ, ಪತ್ನಿ ಸುಪ್ರೀಯಾ, ಮಗ ಸುಪ್ರೀತ, ಮಗಳು ಪ್ರೀಯಾ, ಸಹೋದರಾದ ಭಾರತೀಯ ಸೈನ್ಯದಲ್ಲಿರು ಎರಡನೇ ಸಹೋದರ ಯೋಧ ಶಿವು, ಇನ್ನಿಬ್ಬರು ಸಹೋದರರಾದ ಸಂಜು ಮತ್ತು ಬಸವರಾಜ ಹಾಗೂ ಸಂಬಂಧಿಕರು ಮಿಡಿದ ಕಂಬನಿಗಳಿಂದ ನೇರೆದಿದ್ದ ಜನಸ್ತೋಮದ ಮಮ್ಮಲು ಮರುಗಿತು.
ಅಂತ್ಯಕ್ರಿಯೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೋಳಿ, KPCC ಸದಸ್ಯ ಮಲಗೌಡ ಪಾಟೀಲ, ಹಿರಿಯ ಮುಖಂಡ ಅಪ್ಪಯ್ಯಗೌಡ ಪಾಟೀಲ ಅಗಸಗಿ ಗ್ರಾ ಪಂ ಅಧ್ಯಕ್ಷ ಅಮೃತ ಮುದ್ದಣ್ಣವರ,ಬಸನಗೌಡ ಹುದ್ದಾರ, ಸಿದ್ದು ಸುಣಗಾರ, ಭೀಮರಾಯ ನಾಯಿಕ, ಸುರೇಶ ಹಂಜಿ, ಇನ್ಸ್ಪೆಕ್ಟರ್ ಸುರೇಶ್ ಶಿಂಗಿ, ತಹಶಿಲ್ದಾರ ಸುಭಾಸ ಅಸೋದೆ, ಕಾಕತಿ ಉಪ ತಹಶಿಲ್ದಾರ ಸಾಲುಂಕೆ, ಸರ್ಕಲ್ ಅಬ್ದುಲ್ ಶಹಾಪೂರ, ತಲಾಠಿ ಮರಾಠೆ ಬಂಬರಗೆ ಗ್ರಾ ಪಂ ಅಧ್ಯಕ್ಷ , ಸದಸ್ಯರು, ಪಿಡಿಓ, ಸೇನಾ ಪಡೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು, ಮಾಜಿ ಹಾಗೂ ಹಾಲಿ ಯೋಧರು ಸುತ್ತಮುತ್ತಲಿನ ಅಗಸಗಿ, ಚಲವೆನಟ್ಟಿ, ಮಾಳೆನಟ್ಟಿ, ಹಂದಿಗನೂರ,ಬೊಡಕೆನಟ್ಟಿ, ಕುರಿಹಾಳ, ಶಿವಾಪೂರ, ಇದ್ದಲಹೊಂಡ, ಸುತಗಟ್ಟಿ ಗ್ರಾಮಗಳ ಸಾವಿರಾರು ಸಂಖ್ಯೆಯಲ್ಲಿ ಹಿರಿಯರು, ಶಿಕ್ಷಕರು, ಸ್ನೇಹಿತರು, ಯುವಕರು, ಸಮಾಜ ಸೇವಕರು, ವಿಧ್ಯಾರ್ಥಿಗಳು ಉಪಸ್ಥಿತರಾಗಿ ಕಂಬನಿ ಮಿಡಿದರು.