ಬೆಳಗಾವಿ : ಬೆಳಗಾವಿಯಿಂದ ಮಂತ್ರಾಲಯಕ್ಕೆ ರೈಲು ಸೇವೆ ನೀಡಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ರೈಲು ಯೋಜನೆಗಳ ಕುರಿತು ನೈಋತ್ಯ ರೈಲ್ವೆಗೆ ಮನವಿಯನ್ನು ಸಲ್ಲಿಕೆ ಮಾಡಲಾಗಿದೆ. ಹಲವು ಹೊಸ ರೈಲುಗಳ ಸಂಚಾರ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಡಲಾಗಿದೆ. ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ಬಜೆಟ್ನಲ್ಲಿ ಹೊಸ ರೈಲು ಸೇವೆಗಳಿಗೆ ಅನುಮತಿ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.
ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಹೊಸಪೇಟೆ ಸದಸ್ಯರು ನೈಋತ್ಯ ರೈಲ್ವೆ ವ್ಯವಸ್ಥಾಪಕರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿದರು.
ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ರೈಲ್ವೆ ಯೋಜನೆಗಳ ಕುರಿತು ಬೇಡಿಕೆಯನ್ನು ಈಡೇರಿಸಲು ಮನವಿ ಪತ್ರವನ್ನು ಸಲ್ಲಿಕೆ ಮಾಡಿದರು.
ಯಾವ-ಯಾವ ಬೇಡಿಕೆಗಳು?
ಬೆಳಗಾವಿ-ಹೈದರಾಬಾದ್-ಮಂಗಳೂರು ರೈಲು ಖಾಯಂಗೊಳಿಸಿ. ರೈಲು ನಂಬರ್ 07335/ 36 ರೈಲನ್ನು ಖಾಯಂಗೊಳಿಸಬೇಕು. ಬೆಳಗಾವಿ-ಹೈದರಾಬಾದ್-ಮಂಗಳೂರು ರೈಲು ಉತ್ತರ ಕರ್ನಾಟಕವನ್ನು ಮಂತ್ರಾಲಯ ಜೊತೆ ಸಂಪರ್ಕಿಸಲಿದೆ. ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಹೋಗುವ ಮತ್ತು ಭದ್ರಾಚಲಂಗೆ ಸಂಚಾರ ನಡೆಸುವ ಭಕ್ತರಿಗೆ ಅನುಕೂಲವಾಗಿದೆ. ಈ ರೈಲನ್ನು ಖಾಯಂಗೊಳಿಸಿ ನಿರಂತರವಾಗಿ ಓಡಿಸಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿದೆ.
* ಹೊಸಪೇಟೆ-ದಾವಣಗೆರೆ-ಮಂಗಳೂರು ಹೊಸ ರೈಲು. ಹೊಸಪೇಟೆ-ದಾವಣಗೆರೆ-ಮಂಗಳೂರು ನಡುವೆ ಹೊಸ ರೈಲು ಸೇವೆ ಆರಂಭಿಸಬೇಕು. ಇದರಿಂದಾಗಿ ಯುನೆಸ್ಕೋ ಮಾನ್ಯತೆ ಪಡೆದಿರುವ ಹಂಪಿ, ಬೇಲೂರು-ಹಳೆಬೀಡು ನಡುವೆ ನೇರ ಸಂಪರ್ಕ ಸಾಧ್ಯವಾಗಲಿದೆ. ಅಲ್ಲದೇ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ಶ್ರವಣಬೆಳಗೊಳಕ್ಕೆ ಪ್ರಯಾಣಿಸುವ ಜನರಿಗೂ ಅನುಕೂಲವಾಗಲಿದೆ. ಈ ರೈಲು ಕಲ್ಯಾಣ ಕರ್ನಾಟಕವನ್ನು ಕರಾವಳಿಯೊಂದಿಗೆ ನೇರವಾಗಿ ಸಂಪರ್ಕಿಸಲಿದೆ. ಆದ್ದರಿಂದ ರೈಲು ಆರಂಭಿಸಬೇಕು ಎಂದು ಮನವಿಯಲ್ಲಿ ವಿವರಣೆ ನೀಡಲಾಗಿದೆ.
* ಹೊಸಪೇಟೆ ರೈಲು ನಿಲ್ದಾಣ ಆಧುನೀಕರಣ. ವಿಜಯನಗರ ಜಿಲ್ಲೆಯ ಕೇಂದ್ರಸ್ಥಾನವಾದ ಹೊಸಪೇಟೆ ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸಬೇಕು. ಪಿಟ್ ಲೈನ್ ನಿರ್ಮಾಣ ಮಾಡಿ ಸರಕು ಸಾಗಣೆ ರೈಲುಗಳನ್ನು ಸ್ಥಳಾಂತರ ಮಾಡಬೇಕು. ಎರಡು ಹೊಸ ಪ್ಲಾಟ್ ಫಾರಂ ನಿರ್ಮಾಣ ಮಾಡಬೇಕು. ಪ್ರಮುಖ ಕಟ್ಟಡದಲ್ಲಿ ಮೊದಲ ಮಹಡಿ ನಿರ್ಮಾಣ ಮಾಡಬೇಕು. ಲಿಫ್ಟ್ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ.
* ಹೊಸದಾಗಿ ಅಂಡರ್ಪಾಸ್, ಮೇಲ್ಸೆತುವೆ ನಿರ್ಮಾಣ. ಹೊಸಪೇಟೆಯ ಚಿತವಾಡಿಯಲ್ಲಿ ಸುಮಾರು 50 ಸಾವಿರ ಜನರು ವಾಸವಾಗಿದ್ದಾರೆ. ಈ ಪ್ರದೇಶ ಹೊಸಪೇಟೆ ನಗರದ ವ್ಯಾಪ್ತಿಯಲ್ಲಿದೆ. ಇಲ್ಲಿಂದ ಶಾಲೆ, ಕಾಲೇಜು, ಕೃಷಿ ಕೆಲಸಗಳಿಗೆ ತೆರಳುವ ಅನೇಕ ಜನರಿದ್ದಾರೆ. ಇಲ್ಲಿ ಸರಕು ಸಾಗಣೆ, ಪ್ರಯಾಣಿಕ ರೈಲು ಸಂಚಾರದ ವೇಳೆ ಜನರು ಕಾಯಬೇಕಿದೆ. ಆದ್ದರಿಂದ ಅಂಡರ್ಪಾಸ್ ಅಥವ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಲಾಗಿದೆ.
* ಹೊಸಪೇಟೆ-ದಾವಣಗೆರೆ-ತುಮಕೂರು ಡೆಮು ರೈಲು. ಹೊಸಪೇಟೆ-ದಾವಣಗೆರೆ-ತುಮಕೂರು ನಡುವೆ ಹೊಸ ಡೆಮು ರೈಲು ಸೇವೆಯನ್ನು ಆರಂಭಿಸಬೇಕು. ಬೆಂಗಳೂರು ನಗರಕ್ಕೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಈ ರೈಲು ಸೇವೆ ಸಹಾಯಕವಾಗಲಿದೆ ಎಂದು ಸಮಿತಿ ಹೇಳಿದೆ.