ಬೆಳಗಾವಿ:1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕುಂದಾ ನಗರಿ ಬೆಳಗಾವಿ ಗಾಂಧಿ ಸ್ಮರಣೆಯಲ್ಲಿ ಮಿಂದೆದ್ದಿದೆ.
‘ಗಾಂಧಿ ಭಾರತ’ ಕಾರ್ಯಕ್ರಮದ ಅಂಗವಾಗಿ ಬೆಳಗಾವಿಯ ತಿಲಕವಾಡಿಯ ವೀರಸೌಧದಲ್ಲಿ ಗುರುವಾರ ಬೆಳಗ್ಗೆ ಮಹಾತ್ಮಾ ಗಾಂಧಿ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅನಾವರಣ ಮಾಡಿ, ಪುಷ್ಪನಮನ ಸಲ್ಲಿಸಿದರು.
ನಂತರ ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಖಾದಿ ಮೇಳ ಹಾಗೂ ವಸ್ತುಪ್ರದರ್ಶನವನ್ನು ಸಿಎಂ ಹಾಗೂ ಡಿಸಿಎಂ ಉದ್ಘಾಟನೆ ಮಾಡಿದರು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚರಕ ಸುತ್ತಿದರು. ಖಾದಿ ಮೇಳದಲ್ಲಿ ವಸ್ತ್ರಗಳನ್ನು ಖರೀದಿ ಮಾಡಿದರು.
ನಂತರ ಉಭಯ ನಾಯಕರುಗಳು ಬೆಳಗಾವಿ ವಿಮಾನ ನಿಲ್ದಾಣಕ್ಕೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೇರಿದಂತೆ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರನ್ನು ಬರಮಾಡಿಕೊಂಡರು. ಇದೇ ವೇಳೆ ಶಿವಕುಮಾರ್ ಅವರು ಹಿರಿಯ ನಾಯಕರಿಗೆ ಅಧಿವೇಶನದ ಬ್ಯಾಡ್ಜ್ ತೊಡಿಸಿದರು. ವಿಮಾನ ನಿಲ್ದಾಣದ ಹೊರಗೆ ಮಹಿಳೆಯರು ಆರತಿ ಬೆಳಗಿ ಮುಖಂಡರನ್ನು ಸ್ವಾಗತಿಸಿದರು.
ನಂತರ ತಿಲಕವಾಡಿಯ ಮುಖ್ಯರಸ್ತೆಯಿಂದ ವೀರಸೌಧದವರೆಗೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮತ್ತಿತರ ಮುಖಂಡರು ಕೈಯಲ್ಲಿ ಗಾಂಧಿ ಅವರ ಫೋಟೋ ಹಿಡಿದು ಮೆರವಣಿಗೆಯಲ್ಲಿ ಬಂದರು.
ಕಾರ್ಯಕಾರಿ ಸಮಿತಿ ಸಭೆಗೂ ಮುನ್ನ ವೀರಸೌಧದ ಆವರಣದಲ್ಲಿ ಧ್ವಜಾರೋಹಣ ನಡೆಸಲಾಯಿತು. ಈ ವೇಳೆ ಕಾಂಗ್ರೆಸ್ ನಾಯಕರೆಲ್ಲರೂ ಮಹಾತ್ಮಾ ಗಾಂಧಿ ಅವರ ಭಾವಚಿತ್ರ ಹಿಡಿದು ನವ ಸತ್ಯಾಗ್ರಹ ಬೈಠಕ್ ನಡೆಯುವ ಸ್ಥಳದತ್ತ ಹೆಜ್ಜೆ ಹಾಕಿದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ವಿಸ್ತರಿತ ಸಭೆಯಲ್ಲಿ ಪಾಲ್ಗೊಳ್ಳಲು ತಿಲಕವಾಡಿಯ ವಿಕಾಸಸೌಧಕ್ಕೆ ಆಗಮಿಸಿದ ಎಐಸಿಸಿ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.
1924 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಕ್ಷಣಗಳನ್ನು ಸೆರೆಹಿಡಿದಿದ್ದ ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬಣ್ಣದ ಛಾಯಾಚಿತ್ರಗಳನ್ನಾಗಿ ಪರಿವರ್ತಿಸಿ ತಿಲಕವಾಡಿಯ ವೀರಸೌಧದಲ್ಲಿ ಫೋಟೋ ಗ್ಯಾಲರಿ ಮಾಡಿದ್ದು, ಅದನ್ನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಕಾಂಗ್ರೆಸ್ ಮುಖಂಡರುಗಳು ವೀಕ್ಷಿಸಿದರು.
ಮಹಾತ್ಮಾ ಗಾಂಧಿ ಅವರು 1924 ರಲ್ಲಿ ಡಿ.26 ರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಹೀಗಾಗಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ನವ ಸತ್ಯಾಗ್ರಹ ಬೈಠಕ್ (ಸಿಡಬ್ಲ್ಯೂಸಿ ಸಭೆ) ಅನ್ನು ಆರಂಭ ಮಾಡಲಾಯಿತು.
ಸಭೆಯ ನಂತರ ಬೆಳಗಾವಿ ಕ್ಲಬ್ ನಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ನಾಯಕರಿಗೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಎಲ್ಲಾ ನಾಯಕರು ಭಾಗವಹಿಸಿದ್ದರು.
*ಡಿಸಿಎಂ ಮಾಧ್ಯಮ ಪ್ರತಿಕ್ರಿಯೆ:*
*ಸಾರ್ವಜನಿಕರ ವೀಕ್ಷಣೆಗಾಗಿ ವಸ್ತು ಪ್ರದರ್ಶನ, ದೀಪಾಲಂಕಾರ ವಿಸ್ತರಣೆ*
ಸಿಡಬ್ಲ್ಯೂಸಿ ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು “ಬೆಳಗಾವಿ ಅಧಿವೇಶನ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿರುವ ದೀಪಾಲಂಕಾರ ಹಾಗೂ ವಸ್ತುಪ್ರದರ್ಶನದ ಕಾಲಾವಧಿಯನ್ನು ವಿಸ್ತರಣೆ ಮಾಡಿ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು” ಎಂದು ತಿಳಿಸಿದರು.
“ಸಾರ್ವಜನಿಕರಿಗೆ ವಸ್ತು ಪ್ರದರ್ಶನ ವೀಕ್ಷಿಸಲು ಎಷ್ಟು ದಿನಗಳ ಕಾಲ ಅವಕಾಶ ನೀಡಲಾಗುವುದು ಹಾಗೂ ದೀಪಾಲಂಕಾರವನ್ನು ಎಷ್ಟು ದಿನ ಮುಂದುವರಿಸಲಾಗುವುದು ಎಂಬುದನ್ನು ಶುಕ್ರವಾರ ಸರ್ಕಾರದ ವತಿಯಿಂದ ಅಧಿಕೃತವಾಗಿ ಘೋಷಿಸಲಾಗುವುದು” ಎಂದು ತಿಳಿಸಿದರು.
“ಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮವಲ್ಲ. ದೇಶದ ಇತಿಹಾಸವನ್ನು ಸಂಭ್ರಮಿಸುವ ಕಾರ್ಯಕ್ರಮ. ಈ ಕಾರ್ಯಕ್ರಮ ನಡೆಸಲು ಬೆಳಗಾವಿಯ ಜನ ಹಾಗೂ ಸರ್ಕಾರಿ ಅಧಿಕಾರಿಗಳು ನಮಗೆ ಅತ್ಯುತ್ತಮವಾಗಿ ಸಹಕಾರ ನೀಡಿದ್ದಾರೆ. 1924ರ ಡಿ. 26 ಮಧ್ಯಾಹ್ನ 3 ಗಂಟೆಗೆ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಅದೇ ಸಮಯಕ್ಕೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಆರಂಭವಾಗಿದೆ. ಈ ಸಭೆ ಮೂಲಕ ಸಮಾಜದ ಎಲ್ಲ ವರ್ಗದವರನ್ನು ಒಟ್ಟಿಗೆ ತೆಗೆದುಕೊಂಡು ದೇಶವನ್ನು ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂಬುದನ್ನು ನಿರ್ಧರಿಸಲಾಗುವುದು” ಎಂದರು.
*ಬಿಜೆಪಿ ಅಸೂಯೆಗೆ ಮದ್ದಿಲ್ಲ:*
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ನಲ್ಲಿ ಭಾರತದ ನಕ್ಷೆ ತಪ್ಪಾಗಿ ಹಾಕಿರುವುದಕ್ಕೆ ಬಿಜೆಪಿ ದಾಳಿ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಗೊತ್ತಿಲ್ಲದೆ ಕೆಲವರು ಆ ನಕ್ಷೆ ಬಳಸಿದ್ದು, ಅವುಗಳನ್ನು ತೆರವುಗೊಳಿಸಲಾಗಿದೆ. ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಉಳಿದಂತೆ ಕಾರ್ಯಕ್ರಮ ಎಲ್ಲಾ ರೀತಿಯಲ್ಲೂ ಅತ್ಯುತ್ತಮವಾಗಿ ಆಯೋಜಿಸಲಾಗಿದೆ. ಬಿಜೆಪಿ ಇರುವುದೇ ನಮ್ಮ ವಿರುದ್ಧ ಅನವಶ್ಯಕ ದಾಳಿ ಮಾಡಲು. ಅವರ ಅಸೂಯೆಗೆ ಮದ್ದಿಲ್ಲ. ಅವರಿಗೆ ಏನು ಬೇಕೋ ಮಾಡಲಿ, ನಮ್ಮ ಕೆಲಸ ನಾವು ಮಾಡುತ್ತೇವೆ” ಎಂದು ತಿಳಿಸಿದರು.