ವಿಜಯನಗರ : ಸುಮಾರು 20 ವರ್ಷಗಳ ಹಿಂದೆ ಹೊಸಪೇಟೆಯ ದನನಾಯಕನಕೆರೆಯಿಂದ ರೈಲು ಹತ್ತಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆ ಸೇರಿ 50 ವರ್ಷ ವಯಸ್ಸಿನ ಸಾಕಮ್ಮ ಎಂಬುವವರು ಅನಾಥರಾಗಿದ್ದರು. ಇದೀಗ ಅವರನ್ನ ಮರಳಿ ರಾಜ್ಯಕ್ಕೆ ಕರೆತರಲು ಸಮಾಜ ಕಲ್ಯಾಣ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ಮಂಡಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಸನ ಮೂಲದ ಐಪಿಎಸ್ ಅಧಿಕಾರಿ ರವಿನಂದನ್ ಬಿ. ಎಂ ಅವರು ಸಾಕಮ್ಮ ಅವರನ್ನು ಮಾತನಾಡಿಸಿ, ವಿಡಿಯೋ ಮಾಡಿ ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತ ವಿಜಯ್ಕುಮಾರ್ ಎಂಬುವರಿಗೆ ಕಳುಹಿಸಿದ್ದರು. ಅದನ್ನು ವಿಜಯ್ಕುಮಾರ್ ಗುರುವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದರು.
ಪೋಸ್ಟ್ ನೋಡಿದ ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ಸಾಕಮ್ಮ ಅವರನ್ನು ಕರೆತರುವ ಸಂಬಂಧ ಮಂಡಿ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿನಂದನ್ ಅವರೊಂದಿಗೂ ಗುರುವಾರ ಚರ್ಚಿಸಿದರು. ನಂತರ ಈ ಕಾರ್ಯವನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆ ವಹಿಸಿಕೊಂಡಿದೆ.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ‘ನಿರಾಶ್ರಿತರ ಕೇಂದ್ರದಲ್ಲಿ ಇರುವ ಸಾಕಮ್ಮ ಅವರನ್ನು ಕರೆತರಲು ಸಮಾಜ ಕಲ್ಯಾಣ ಇಲಾಖೆಯಿಂದ ಮೂರು ಜನರ ತಂಡ ಈಗಾಗಲೇ ಹೋಗಿದೆ. ನಾಳೆ ಸಂಜೆ ಚಂಡೀಗಡದಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಾರೆ. ನಂತರ ಬಳ್ಳಾರಿಗೆ ಕರೆತರುತ್ತೇವೆ. ಈಗಾಗಲೇ ನಮ್ಮ ತಂಡದವರು ಅಲ್ಲಿನ ಜಿಲ್ಲಾಡಳಿತದೊಂದಿಗೆ ಸಂಪರ್ಕಿಸಿದ್ದಾರೆ. ಅಲ್ಲಿನ ಎಸ್ಪಿ ಕೂಡಾ ಅವರ ಮಕ್ಕಳನ್ನು ಮಾತನಾಡಿಸಿದ್ದಾರೆ’ ಎಂದರು.
ಈ ಬಗ್ಗೆ ಸಾಕಮ್ಮ ಅವರ ಮಗ ಯಲ್ಲಪ್ಪ ಮಾತನಾಡಿ, ‘ನಾವು ಚಿಕ್ಕವರಿದ್ದಾಗಲೇ ನಮ್ಮ ತಾಯಿ ಕಾಣೆಯಾಗಿದ್ದರು. ಇದೀಗ ನಮಗೆ ಹುಡುಕಿಕೊಟ್ಟಿದ್ದಾರೆ. ನಮ್ಮ ತಾಯಿ ನಮ್ಮ ಕಡೆ ಬಂದ್ರೆ ಸಂತೋಷ’ ಎಂದು ಹೇಳಿದರು.
ಸಾಕಮ್ಮ ಸಂಬಂಧಿಯೊಬ್ಬರು ಮಾತನಾಡಿ, ನಮ್ಮ ಚಿಕ್ಕಮ್ಮ ಕಾಣೆಯಾಗಿ ಸುಮಾರು 20 ವರ್ಷ ಕಳೆದಿತ್ತು. ನಾವು ಅಲ್ಲಿ ಇಲ್ಲಿ ಹುಡುಕಾಡಿದೆವು. ಆದ್ರೆ ಸಿಗಲಿಲ್ಲ. ತೀರಿಕೊಂಡಿದ್ದಾರೆ ಎಂದು ತಿಥಿ ಕಾರ್ಯವನ್ನು ಮಾಡಿದ್ದೆವು. ಮೂಲತಃ ಹಾಸನ ಜಿಲ್ಲೆಯವರಾದ ಅಧಿಕಾರಿ ನಮಗೆ ಮಾಹಿತಿ ನೀಡಿದ್ದಾರೆ. ತಾಯಿ ಕಳೆದುಕೊಂಡಿದ್ದ ಮಕ್ಕಳಿಗೆ ಈಗ ಸಿಕ್ಕಿರುವುದು ಸಂತೋಷವಾಗಿದೆ ಎಂದಿದ್ದಾರೆ.
ವಿಡಿಯೋದಲ್ಲಿ ಸಾಕಮ್ಮ ಎಂದು ಹೆಸರು ಹೇಳಿಕೊಳ್ಳುವ ಮಹಿಳೆ, ತಮ್ಮ ಊರು ಹೊಸಪೇಟೆ ಸಮೀಪದ ದನನಾಯಕನಹಳ್ಳಿ ಎಂದು ತಿಳಿಸಿದ್ದಾರೆ. ಮಂಡಿ ಜಿಲ್ಲೆಯ ರೈಲು ಹತ್ತಿ ಬಂದಿದ್ದು ಕೆಲವು ವರ್ಷಗಳಿಂದ ಇಲ್ಲಿಯೇ ಉಳಿದಿರುವುದಾಗಿ ಹೇಳಿದ್ದಾರೆ. ತಮ್ಮೂರಿನಲ್ಲಿ ಅಣ್ಣ, ತಮ್ಮ ಇರುವುದಾಗಿ, ಅವರೆಲ್ಲರೂ ಬಂಗಾರದ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.