ಬೆಳಗಾವಿ: ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಬೆಳಗಾವಿ ಸಿಇಎನ್ ಠಾಣೆ ಸಿಪಿಐ ಬಾವುದ್ದೀನ್ ಗಡೇಕರ್ ಅವರಿಗೆ ರಾಜ್ಯ ಸರಕಾರವು 10 ಸಾವಿರ ರೂ. ನಗದು ಬಹುಮಾನ ಘೋಷಿಸಿದೆ. ಈ ಬಗ್ಗೆ ಆರಕ್ಷಕ ಮಹಾನಿರೀಕ್ಷಕ ಆರ್. ಹಿತೇಂದ್ರ ಅವರು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯ ಜಂಟಿ ನಿಯಂತ್ರಕ (ಹಣಕಾಸು) ಅವರಿಗೆ ಆದೇಶಿಸಿದ್ದು, ಬಹುಮಾನದ ಮೊತ್ತವನ್ನು 2024-25ನೇ ಸಾಲಿ ಲೆಕ್ಕ ಶೀರ್ಷಿಕೆಯಡಿ ಭರಿಸುವಂತೆ ತಿಳಿಸಿದ್ದಾರೆ. ಡಿ. 10 ರಂದು ನಡೆದ ಪಂಚಮಸಾಲಿ ಹೋರಾಟದ ಸಂದರ್ಭದಲ್ಲಿ ನಡೆದ ಲಾಠಿ ಚಾರ್ಜ್ ಸಂದರ್ಭದಲ್ಲಿ ಸೌಧಕ್ಕೆ ಮುತ್ತಿಗೆ ಹಾಕುತ್ತಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಆರಕ್ಷಕ ಮಹಾನಿರೀಕ್ಷಕ ಹಿತೇಂದ್ರ ಅವರೊಂದಿಗೆ ಸಿಪಿಐ ಬಾವುದ್ದೀನ್ ಗಡೇಕರ್ ಮುಂಚೂಣಿಯಲ್ಲಿ ನಿಂತಿದ್ದರು.