ತ್ರಿಚಕ್ರ ವಾಹನ ಅಪಘಾತ; ನಾವಲಗಟ್ಟಿ ಅಂಗವಿಕಲ ವ್ಯಕ್ತಿ ದುರ್ಮರಣ.
ಅಂಗವೈಕಲ್ಯ ಮೆಟ್ಟಿನಿಂತು ಸಾಧಕನಾಗಿದ್ದ ಗಣಪತಿ..!
ಬೆಳಗಾವಿ : ತ್ರಿಚಕ್ರ ವಾಹನದಿಂದ ಸಂಭವಿಸಿರುವ ಅಪಘಾತದಲ್ಲಿ ನಾವಲಗಟ್ಟಿ ಗ್ರಾಮದ ಅಂಗವಿಕಲ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಗ್ರಾಮದ ವ್ಯಾಪ್ತಿಯ ಹಿರೇಬಾಗೇವಾಡಿ- ಮೋದಗಾ ರಸ್ತೆಯಲ್ಲಿ ಇಂದು (ಭಾನುವಾರ) ಜರುಗಿದೆ.
ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ 40 ವರ್ಷದ ಗಣಪತಿ ಮುರಗೋಡ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಹುಟ್ಟುತ್ತಲೇ ಅಂಗವೈಕಲ್ಯ ಹೊಂದಿರುವ ಗಣಪತಿಗೆ ಸರ್ಕಾರದಿಂದ ತ್ರಿಚಕ್ರ ವಾಹನ ನೀಡಲಾಗಿತ್ತು. ಈ ವಾಹನದ ಮೂಲಕ ನಾವಲಗಟ್ಟಿ ಗ್ರಾಮದಿಂದ ಮೋದಗಾ ಗ್ರಾಮದ ಕಡೆಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಗಣೇಶ ಮುರಗೋಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮೃತರಿಗೆ ಪತ್ನಿ, ಮಕ್ಕಳು, ತಾಯಿ, ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವಿದೆ.
ಮೃತ ಗಣಪತಿ ಮುರಗೋಡ ಹುಟ್ಟುತ್ತಲೇ ಅಂಗವೈಕಲ್ಯನಾಗಿದ್ದರೂ ಅತ್ಯಂತ ಲವಲವಿಕೆ ಹಾಗೂ ಏನನ್ನಾದರೂ ಸಾಧಿಸಬೇಕು ಎಂಬ ಛಲವನ್ನು ಹೊಂದಿದ್ದನು. ಈತ ಜನ ಸ್ನೇಹಿ ಹಾಗೂ ರೈತರ ಪರ ವಿಶೇಷ ಕಾಳಜಿ ಹೊಂದಿದನು. ತೋಟಗಾರಿಕೆ, ಕಂದಾಯ, ಕೃಷಿ ಇಲಾಖೆ ಸೇರಿದಂತೆ ಇನ್ನೀತರ ಸರ್ಕಾರಿ ಸೌಲಭ್ಯಗಳ ಕುರಿತು ನಾವಲಗಟ್ಟಿ ಗ್ರಾಮ ಅಷ್ಟೇ ಅಲ್ಲ ಸುತ್ತಮುತ್ತಲಿನ ಗ್ರಾಮಸ್ಥರಿಗೂ ಮಾಹಿತಿ ನೀಡಿ ಸೌಲಭ್ಯದಿಂದ ವಂಚಿತರಾಗದಂತೆ ಕಾರ್ಯ ಮಾಡುತ್ತಿದ್ದನು. ಗಣಪತಿ ಮುರಗೋಡನ ಅಕಾಲಿಕ ಸಾವಿನ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರಿಗೆ ಬರಸಿಡಿಲು ಬಡದಂತಾಗಿದೆ ಅಲ್ಲದೇ ಗ್ರಾಮಸ್ಥರ ಹಾಗೂ ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿದೆ.
ಈ ದುರ್ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.