ಕಾರವಾರ : ಪರಿಸರ ಪ್ರೇಮಿ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ (80 ವರ್ಷ ) ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ತುಳಸಿಗೌಡ ಅವರು ಉತ್ತರ ತುಳಸಿಗೌಡ ಅವರು ವರ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿದ್ದರು. ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಗಿಡ ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿದ್ದರು.
ವೃಕ್ಷಮಾತೆ ಎಂದೇ ಹೆಸರಾಗಿದ್ದ ತುಳಸಿ ಗೌಡ ಕಳೆದ 60 ವರ್ಷಗಳಿಂದ ಅವರು ಪರಿಸರ ಸಂರಕ್ಷಣೆಯ ಕಾರ್ಯ ಹಾಗೂ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಇವರ ಪರಿಸರ ಪ್ರೇಮವನ್ನು ಮೆಚ್ಚಿ 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 2023ರಲ್ಲಿ ತುಳಸಿ ಗೌಡ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು.
ಅಂಕೋಲಾದ ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರು ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ 1944 ರಲ್ಲಿ ಜನಿಸಿದರು. ಬಡತನದ ಜತೆಗೆ ತನ್ನ ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ಶಾಲೆ ಮೆಟ್ಟಿಲನ್ನು ಏರದೆ ತಾಯಿಯ ಜೊತೆ ಕೂಲಿ ಕೆಲಸಕ್ಕೆ ತೆರಳಲು ಪ್ರಾರಂಭಿಸಿದ್ದರು. ಗೋವಿಂದೇ ಗೌಡ ಎನ್ನುವವರ ಜತೆ ಬಾಲ್ಯದಲ್ಲಿಯೇ ವಿವಾಹವಾಗಿತ್ತು. ಅವರು 17ನೇ ವಯಸ್ಸನಲ್ಲಿದ್ದಾಗ ಲೇವರ ಪತಿಯನ್ನು ಕಳೆದುಕೊಂಡರು. ಅವರಿಗೆ 12ನೇ ವಯಸ್ಸಿನಿಂದಲೇ ಮರಗಳ ಜೊತೆಗಿನ ಬಾಂಧವ್ಯ ಆರಂಭವಾಗಿದ್ದು, ಅದು ಜೀವನ ಪರ್ಯಂತ ಮುಂದುವರಿಯಿತು. ವೃಕ್ಷ ಎಂಬುದು ಅವರ ಜೀವನದ ಅವಿಭಾಜ್ಯ ಅಂಗವಾಯಿತು. ಬಳಿಕ ಮರಗಳ ಜೊತೆಯಲ್ಲೇ ನಿತ್ಯ ಒಡನಾಟ. ಗಿಡ, ಮರ, ಬಳ್ಳಿ, ಅವುಗಳ ಜಾತಿ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿತ್ತು.
ತುಳಸಿ ಗೌಡ ಅವರು ಬರಿಗಾಲಿನಲ್ಲೇ ಹೋಗಿ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದರು. ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸಿದ ಕಾರ್ಯವನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿತ್ತು.