ಚ ಕಿತ್ತೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ‘ಚಕೋರ ಸಾಹಿತ್ಯ ವಿಚಾರ ವೇದಿಕೆ, ಕಿತ್ತೂರಿನ ರಾಜಗುರು ಕಲ್ಮಠದ ಸಭಾಭವನದಲ್ಲಿ ಉದ್ಘಾಟನೆಯಾಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್, ಎನ್, ಮುಕುಂದರಾಜ್, ಚಕೋರ ವೇದಿಕೆಯನ್ನು ಉದ್ಘಾಟಿಸಿ “ಸಾಹಿತ್ಯಾಸಕ್ತರನ್ನು ಒಟ್ಟುಗೂಡಿಸಿ ಸಾಹಿತ್ಯಿಕ ಚಟುವಟಿಕೆಗಳನ್ನು ಹೆಚ್ಚಿಸುವ ದೃಷ್ಟಿಕೋನದಿಂದ ಪ್ರತಿ ಜಿಲ್ಲೆಯಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆಯನ್ನು ಪ್ರಾರಂಭಿಸುತ್ತಿದ್ದೇವೆ. ಜನರಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯವನ್ನು ಪ್ರಸಾರ ಮಾಡಬೇಕು, ಜಿಲ್ಲೆಯಾದ್ಯಂತ ಸಣ್ಣಪುಟ್ಟ ಊರುಗಳಲ್ಲಿಯೂ ಕೂಡ ಚಕೋರ ವೇದಿಕೆಯ ಮುಖಾಂತರ ಸಾಹಿತ್ಯಿಕ ಕಾರ್ಯಕ್ರಮಗಳು ಜರುಗುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು.
ಪ್ರತಿ ಜಿಲ್ಲೆಗೆ ಇಬ್ಬರು ಸಂಚಾಲಕರನ್ನು ನೇಮಿಸಲಾಗಿದ್ದು ಬೆಳಗಾವಿ ಜಿಲ್ಲೆಗೆ ಹಿರಿಯ ಸಾಹಿತಿ ಎಲ್,ಎಸ್, ಶಾಸ್ತ್ರಿ ಹಾಗೂ ಕವಿ ನಾಗೇಶ್ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿಯ ಎಲ್ಎಸ್ ಶಾಸ್ತ್ರಿಯವರು ಪುಸ್ತಕ ಓದುವ ಸಂಸ್ಕೃತಿ ಇಂದು ನಶಿಸಿ ಹೋಗುತ್ತಿದ್ದು, ನಾವು ನಮ್ಮ ಮಕ್ಕಳ ಕೈಯಲ್ಲಿ ಮೊಬೈಲಗಳ ಬದಲಿಗೆ ಪುಸ್ತಕಗಳನ್ನು ನೀಡುವಂತಾಗಬೇಕು ಎಂದು ನುಡಿದರು.
ಡಾ,ಪ್ರಜ್ಞಾ ಮತ್ತೀಹಳ್ಳಿ ‘ ಹಳಗನ್ನಡ ಕಾವ್ಯಗಳಲ್ಲಿ ರಸಗ್ರಹಣದ ಮಹೋನ್ನತಿ ‘ ಕುರಿತು ಉಪನ್ಯಾಸ ನೀಡಿದರು.
ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಿತ್ತೂರು ಕ,ಸಾ,ಪ ಅಧ್ಯಕ್ಷ ಡಾ, ಶ್ರೀಕಾಂತ ದಳವಾಯಿ ಹಾಗೂ ಮಾಧ್ಯಮಿಕ ಶಾಲಾ ಉಪ ಪ್ರಾಚಾರ್ಯ ಮಹೇಶ ಚೆನ್ನಂಗಿ ಉಪಸ್ಥಿತರಿದ್ದರು.
ಈಶ್ವರ ಗಡಿಬಿಡಿ ಪ್ರಾರ್ಥಿಸಿದರು.ಕವಿ ನಾಗೇಶ ನಾಯಕ ಸ್ವಾಗತಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ್ ಕುಪ್ಪಸಗೌಡರ ಕಾರ್ಯಕ್ರಮ ನಿರೂಪಿಸಿದರು.