ಬೆಳಗಾವಿ :
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕರು ಮೌಲ್ಯಮಾಪನ ಬಹಿಷ್ಕರಿಸುವ ಮೂಲಕ ಇದೀಗ ವಿಶ್ವವಿದ್ಯಾಲಯಕ್ಕೆ ಬಿಗ್ ಶಾಕ್ ನೀಡಿದ್ದಾರೆ.
ವಾರದ ಹಿಂದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ನಗರದ ಬಿ.ಕೆ. ಕಾಲೇಜಿನಲ್ಲಿ ಚರ್ಚೆ ನಡೆಸಿದ್ದರು. ಆಗ ಅಧ್ಯಾಪಕರು ವಾರದ ಗಡುವು ನೀಡಿದ್ದರು. ಆದರೆ ಗಡುವು ನವೆಂಬರ್ 2 ಕ್ಕೆ ಮುಗಿದಿದೆ.
ಗಡುವು ಮುಗಿದರೂ ಮೌಲ್ಯಮಾಪನ ಕುಲಸಚಿವ ರಿಂದ ಇದುವರೆಗೆ ಯಾವುದೇ ಸಕಾರಾತ್ಮಕ ಉತ್ತರ ದೊರೆತಿಲ್ಲ. ಇದರಿಂದ ಬೇಸತ್ತು ಹೋಗಿರುವ ಅಧ್ಯಾಪಕರು ಮೌಲ್ಯಮಾಪನ ಬಹಿಷ್ಕರಿಸುವ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
ನಗರದ ಬಿ.ಕೆ.ಕಾಲೇಜು, ಸಂಗೊಳ್ಳಿ ರಾಯಣ್ಣ ಕಾಲೇಜು, ಮಹಾಂತೇಶ ನಗರ ಬಿಎಡ್ ಕಾಲೇಜು ಮತ್ತು ಜಿಎಸ್ಎಸ್ ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯುತ್ತಿರುವ ಈಗ ನಡೆಯುತ್ತಿರುವ ವಿವಿಧ ವಿಷಯಗಳ ಮೌಲ್ಯಮಾಪನ ಕಾರ್ಯ ಸ್ಥಗಿತಗೊಳಿಸಿ ಹೋರಾಟ ನಡೆಸುವುದಾಗಿ ಅಧ್ಯಾಪಕರು ಇದೀಗ ವಿಶ್ವವಿದ್ಯಾಲಯಕ್ಕೆ ಎಚ್ಚರಿಕೆ ರವಾನಿಸಿದ್ದಾರೆ. ಅಧ್ಯಾಪಕರ ಸಂಘದ ಅಧ್ಯಕ್ಷ ಎಂ.ಎಂ. ಬಿರಾದಾರ್ ಮತ್ತು ಪದಾಧಿಕಾರಿಗಳು ಈ ಬಗ್ಗೆ ಕಠಿಣ ಹೋರಾಟಕ್ಕೆ ಮುಂದಾಗಿದ್ದು, ವಿಶ್ವವಿದ್ಯಾಲಯ ಕೊನೆಗೂ ಅಧ್ಯಾಪಕರ ಸಮಸ್ಯೆಗೆ ಸ್ಪಂದಿಸುತ್ತಾದಾ ಕಾದು ನೋಡಬೇಕಿದೆ.