ಬೆಳಗಾವಿ: ವಿಧಾನ ಮಂಡಲದ ಅಧಿವೇಶನಕ್ಕೆ ಬೆಳಗಾವಿ ಸಜ್ಜಾಗಿದ್ದು, ಅತಿರಥ ಗಣ್ಯರನ್ನು ಸ್ವಾಗತಿಸುವ ಕಟೌಟ್(ಫಲಕ)ಗಳು ತಪ್ಪಾಗಿರುವ ಬಗ್ಗೆ ಜನಜೀವಾಳ ವಿಶೇಷ ವರದಿ ಮಾಡಿ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಫಲಕ ಅಳವಡಿಸಿವವರು ಕೊನೆಗೂ ತಪ್ಪನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಮೂಲಕ ಬಹುದೊಡ್ಡ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದ ತಮ್ಮ ಫಲಕವನ್ನು ಕೊನೆಗೂ ತಿದ್ದಿಕೊಂಡಿದ್ದಾರೆ. ಈ ಮೂಲಕ ತಮಗೆ ಆಗುತ್ತಿದ್ದ ಮುಜುಗರವನ್ನು ತಪ್ಪಿಸಿಕೊಂಡಿದ್ದಾರೆ.
ಬೆಳಗಾವಿಯ ಪ್ರಮುಖ ಚನ್ನಮ್ಮ ವೃತ್ತ ಸೇರಿದಂತೆ ವಿವಿಧೆಡೆ ವಿಧಾನಮಂಡಲದ ಅಧಿವೇಶನಕ್ಕೆ ಆಗಮಿಸುವ ಗಣ್ಯಮಾನ್ಯರಿಗೆ ಸ್ವಾಗತ ಕೋರಿ ದೊಡ್ಡ ಫಲಕ ಅಳವಡಿಸಲಾಗಿತ್ತು. ಆದರೆ, ಫಲಕದಲ್ಲಿ ಚಳಿಗಾಲ ಎಂದು ಬರೆಯುವ ಬದಲು ಚಲಿಗಾಲ ಎಂದು ಬರೆಯಲಾಗಿತ್ತು. ಅದು ಸಹ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸತೀಶ ಜಾರಕಿಹೊಳಿ, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ರಾಹುಲ್ ಜಾರಕಿಹೊಳಿ ಅವರ ಫಲಕದಲ್ಲಿ ಇಂತಹ ಲೋಪ ಕಂಡುಬಂದಿತ್ತು. ಈ ಬಗ್ಗೆ ಕನ್ನಡ ನಾಡು ನುಡಿಗಾಗಿ ಹೋರಾಟ ನಡೆಸಿ ಕನ್ನಡದ ಲೋಪ ದೋಷಗಳನ್ನು ಸದಾ ಎತ್ತಿ ತೋರಿಸುತ್ತಾ ಬಂದಿರುವ ಕನ್ನಡ ಸಾರಸ್ವತ ಲೋಕದ 77 ವರ್ಷಗಳ ಹಿರಿಯಣ್ಣ ಜನಜೀವಾಳ ದಿನಪತ್ರಿಕೆ ಶನಿವಾರದಂದು, ಆಗಿರುವ ಈ ಬಹುದೊಡ್ಡ ಲೋಪವನ್ನು ವಿಶೇಷ ವರದಿ ಮಾಡಿ ಸಂಬಂಧಿಸಿದವರ ಗಮನಕ್ಕೆ ತಂದಿತ್ತು. ಈ ವರದಿ ಬೆನ್ನಲ್ಲೇ ಫಲಕವನ್ನು ಸರಿಪಡಿಸುವ ಕಾರ್ಯ ಆಗಿದೆ. ಈ ಮೂಲಕ ಫಲಕ ಅಳವಡಿಸುವವರು ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಂಡು ಫಲಕವನ್ನು ಬರೆಯುವಲ್ಲಿ ಜನಜೀವಾಳ ಕಣ್ಣು ತೆರೆಸುವ ಕೆಲಸ ಮಾಡಿದೆ. ಜನಜೀವಾಳದ ಈ ಸೂಕ್ಷ್ಮ ದೃಷ್ಟಿಕೋನವನ್ನು ಕನ್ನಡಿಗರು ವಿಶೇಷವಾಗಿ ಅಭಿನಂದಿಸಿದ್ದಾರೆ. ಮುಂದಿನ ದಿನಗಳಲ್ಲೂ ಇಂತಹ ನಾಡು ನುಡಿಯ ಕಾರ್ಯ ಜನಜೀವಾಳದಿಂದ ಆಗಲಿ ಎಂದು ಕನ್ನಡ ಅಭಿಮಾನಿಗಳು ತಮ್ಮ ಎಂದಿನ ಪ್ರೀತಿಯ ಸವಿ ಮಾತನ್ನು ಹೇಳಿದ್ದಾರೆ.