ಚಾಮರಾಜನಗರ : ಜಾತಿ ವ್ಯವಸ್ಥೆಯ ಪರಿಣಾಮವಾಗಿ ಅನೇಕರಲ್ಲಿ ಈಗಲೂ ಗುಲಾಮಗಿರಿಯ ಮನಸ್ಥಿತಿ ಇದೆ. ಇದನ್ನು ಕಿತ್ತೊಗೆಯಲು ಗುಣಮಟ್ಟದ, ವೈಜ್ಞಾನಿಕ, ವೈಚಾರಿಕತೆಯ ಶಿಕ್ಷಣ ದೊರೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅವರು ಇಂದು ಕೊಳ್ಳೇಗಾಲ ಸಂಘ ಸಂಸ್ಥೆಗಳು, ಭಕ್ತವೃಂದ ಹಾಗೂ ಜೆ.ಎಸ್.ಎಸ್ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಡಾ: ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ 109 ನೇ ಜಯಂತ್ಯೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸಮಾಜದಲ್ಲಿ ಬದಲಾವಣೆ ತರಲು, ಮುಖ್ಯವಾಹಿನಿಗೆ ಬರಲು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ಇಲ್ಲದೇ ಹೋದರೆ ಸ್ವಾಭಿಮಾನಿಗಳಾಗಿ ಇರಲು ಸಾಧ್ಯವಾಗುವುದಿಲ್ಲ. ಗುಲಾಮಗಿರಿ ಮನಸ್ಥಿತಿಯನ್ನು ಕಿತ್ತೊಗೆಯಬೇಕು. ಇದು ವೈಜ್ಞಾನಿಕ ಶಿಕ್ಷಣದಿಂದ ಸಾಧ್ಯ ಎಂದರು.
ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಒಬ್ಬ ಶ್ರೇಷ್ಠ ಸಂತರು. ಇಡೀ ಸಮಾಜಕ್ಕೆ ಮಾನವೀಯತೆಯ ಸಂದೇಶವನ್ನು ಸಾರಿದ್ದರು. ಆ ಕಾಲದಲ್ಲಿಯೇ ರಾಜೇಂದ್ರ ಮಹಾಸ್ವಾಮಿಗಳು ಗ್ರಾಮೀಣ ಮಕ್ಕಳಿಗೆ ಶಿಕ್ಷಣ, ವಸತಿನಿಲಯ ನಿರ್ಮಿಸಿದ್ದರಿಂದ ಇಂದು ಸುತ್ತೂರು ಮಹಾಸಂಸ್ಥಾನ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ. ಅವರ ಕಾಲದಲ್ಲಿ ಸಣ್ಣ ಝರಿಯಾಗಿದ್ದ ಸಂಸ್ಥೆ ಇಂದು ದೊಡ್ಡ ಸಮುದ್ರವಾಗಿದೆ. ಬಸವಣ್ಣನವರ ಸಂದೇಶವನ್ನು ರಾಜೇಂದ್ರ ಮಹಾಸ್ವಾಮಿಗಳು ಬಹಳ ವ್ಯಾಪಕವಾಗಿ ದೇಶ, ವಿದೇಶಗಳಲ್ಲಿಯೂ ಪಸರಿಸಿದ್ದಾರೆ ಎಂದರು.
ಮಾನವ ಸಮಾಜದಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಧ್ವೇಷಿಸುವುದನ್ನು ಸಂಪೂರ್ಣವಾಗಿ ಬಿಡಬೇಕು. ಎಲ್ಲರೂ ಕೂಡ ಮಾನವ ಸಮಾಜವನ್ನು ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕೆಂದು ಸಂತರು, ಸಾಧುಗಳು, ಸೂಫಿಗಳು, ಸಮಾಜ ಸುಧಾರಕರು ಈ ದೇಶದಲ್ಲಿ ಹೇಳಿದ್ದಾರೆ. ಸುತ್ತೂರು ಗ್ರಾಮದಿಂದ ಬಂದ ಸ್ವಾಮಿಗಳು ಹಳ್ಳಿ ಜನರ ಬದುಕನ್ನು ಅರ್ಥ ಮಾಡಿಕೊಂಡಿದ್ದರು. ಸಮಾಜದಲ್ಲಿ ಅನೇಕ ನೂನ್ಯತೆ, ಅಸಮಾನತೆಗಳನ್ನು ಕಾಣುತ್ತೇವೆ. ಅಸಮಾನತೆ ನಿರ್ಮಾಣವಾಗಿದ್ದರೆ ಜಾತಿ ವ್ಯವಸ್ಥೆಯ ಕಾರಣದಿಂದ. ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಬಹುಸಂಖ್ಯಾತ ಜನ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದರು ಎಂದರು.
ವ್ಯಕ್ತಿಯ ಯೋಗ್ಯತೆಯನ್ನು ಅವನ ಜಾತಿಯ ಆಧಾರದ ಮೇಲೆ ಅಳೆಯಲಾಗುತ್ತದೆ. ನೈಜ ಪ್ರತಿಭೆಯನ್ನು ಸಾಧನೆಯಿಂದ ಅಳೆಯಲಾಗುತ್ತದೆ. ಇದನ್ನು ರಾಜೇಂದ್ರ ಸ್ವಾಮಿಗಳು ಕಣ್ಣಾರೆ ಕಂಡಿದ್ದ ರಾಜೇಂದ್ರ ಸ್ವಾಮಿಗಳು ಶಿಕ್ಷಣ ಬಹಳ ಮುಖ್ಯ ಎಂದು ಅರ್ಥ ಮಾಡಿಕೊಂಡಿದ್ದರು. ಸುತ್ತೂರಿನಿಂದ ಮೈಸೂರಿಗೆ ಬಂದ ನಂತರ ವಸತಿ ನಿಲಯಗಳನ್ನು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭ ಮಾಡಿದರು. ವಸತಿ ನಿಲಯಗಳಿಲ್ಲದೇ ಹೋದರೇ ಬಹಳ ಜನರಿಗೆ ಓದುವ ಅವಕಾಶ ತಪ್ಪುತ್ತಿತ್ತು. ಸಂವಿಧಾನ ಬಂದ ನಂತರ ಎಲ್ಲರಿಗೂ ಸಮಾನ ಅವಕಾಶಗಳನ್ನು ಪಡೆಯುವಂತಾಗಿದೆ. ಯಾರೂ ಯಾರಿಂದಲೂ ಶೋಷಣೆಗೆ ಒಳಗಾಗಬಾರದು, ಎಲ್ಲರಿಗೂ ಸಮಾನ ಶಿಕ್ಷಣ, ಬದುಕುವ ಅವಕಾಶಗಳನ್ನು , ಸಂವಿಧಾನದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ದೊರಕಿಸಿ ಕೊಟ್ಟಿದ್ದಾರೆ. ಅದಕ್ಕಾಗಿಯೇ ನಮ್ಮ ಸರ್ಕಾರ ಸಂವಿಧಾನದ ಪೀಠಿಕೆಯನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ಓದಿಸಲಾಗುತ್ತಿದೆ. ಸಂವಿಧಾನದ ಆಶಯಗಳು ಹಾಗೂ ಧ್ಯೇಯೋದ್ದೇಶಗಳು ಎಲ್ಲರಿಗೂ ಅರ್ಥವಾಗಬೇಕು. ಸಂವಿಧಾನ ಗೊತ್ತಿಲ್ಲದೇ ಹೋದರೆ ನಮಗಿರುವ ಹಕ್ಕುಗಳು ಯಾವುವು, ನಮ್ಮ ಕರ್ತವ್ಯಗಳೇನು ಎಂದು ತಿಳಿಯುವುದಿಲ್ಲ. ನಮಗೆ ಹಕ್ಕುಗಳು ತಿಳಿದರೆ ಅವುಗಳನ್ನು ಪಡೆಯುವ ಪ್ರಯತ್ನ ಮಾಡಬಹುದು. ಎಲ್ಲರಿಗೂ ಒಂದೇ ರೀತಿಯ ಹಕ್ಕುಗಳಿವೆ. ದಲಿತರು, ಹಿಂದುಳಿದವರು, ಮುಂದುವರೆದವರು ಬಹುಸಂಖ್ಯಾತರಿಗೆ ಒಂದೇ ರೀತಿಯ ಹಕ್ಕುಗಳಿವೆ ಎಂದರು.
ಧರ್ಮವನ್ನು ನಾವು ಸರಿಯಾಗಿ ಅರ್ಥ ಮಡಿಕೊಳ್ಳಬೇಕು. ‘ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮ ಯಾವುದಯ್ಯ’ ಎಂದು ಬಸವಣ್ಣ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ. ದಯೆ ಪ್ರತಿಯೊಬ್ಬರಲ್ಲಿಯೂ ಇರಬೇಕು. ಅದಕ್ಕಾಗಿಯೇ 12 ನೇ ಶತಮಾನದಲ್ಲಿಯೇ ಸಮಸಮಾಜಕ್ಕಾಗಿ ಕ್ರಾಂತಿ ಮಾಡಿದರು. ಕಂದಾಚಾರ, ಮೌಢ್ಯಗಳ ವಿರುದ್ಧ ಹೋರಾಟ ಮಾಡಿದವರು, ಜೊತೆಗೆ ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಇದನ್ನು ಅರ್ಥ ಮಡಿಕೊಳ್ಳಬೇಕು. ಈಗಲೂ ಅನೇಕರು ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಡುತ್ತಾರೆ. ಸ್ವರ್ಗ ನರಕದ ಕಲ್ಪನೆಯನ್ನು ನಿರಾಕರಿಸಿದ್ದ ಬಸವಣ್ಣ ‘ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ಎಂದು ಹೇಳಿದ್ದರು. ಇದನ್ನು ನಾವು ಪಾಲನೆ ಮಾಡಬೇಕು. ನಾವೆಲ್ಲರೂ ಮನುಷ್ಯರಾಗಿ, ಮಾನವರಾಗಿ ಬದುಕುವ ಪ್ರಯತ್ನ ಮಾಡಬೇಕು. ಧರ್ಮ ಹಾಗೂ ಶಿಕ್ಷಣದ ಕೆಲಸವನ್ನು ಸುತ್ತೂರು ಸಂಸ್ಥೆಗಳು ಮಾಡುತ್ತಿವೆ. ಅದಕ್ಕೆ ಅಡಿಪಾಯವನ್ನು ಹಾಕಿದವರು ರಾಜೇಂದ್ರ ಮಹಾಸ್ವಾಮಿಗಳು. ಅವರು ಬಯಸಿದಂತಹ ಸಮಾಜ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ ಎಂದರು.
ಜಗದ್ಗುರು ಡಾ: ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಸಾಲೂರು ಬೃಹನ್ಮಠದ ಶ್ರೀ ಮಲೆಮಹದೇಶ್ವರ ಬೆಟ್ಟದ ಡಾ: ಶ್ರೀ ಶಾಂತಿ ಮಲ್ಲಿಕಾರ್ಜುನ ಸ್ವಾಮಿಗಳು, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ: ಹೆಚ್.ಸಿ.ಮಹದೇವಪ್ಪ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಮರಿಸ್ವಾಮಿ , ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ , ಉಪಾಧ್ಯಕ್ಷ ಎ.ಪಿ.ಶಂಕರ್ ಮೊದಲಾದವರು ಉಪಸ್ಥಿತರಿದ್ದರು.
ಚಾಮರಾಜನಗರ : ವಿದ್ಯಾರ್ಥಿಗಳ ಪ್ರತಿಭೆಯನ್ನು ವಿಕಸನಗೊಳಿಸುವುದೇ ಶಿಕ್ಷಣ. ಜಾತಿಯಿಂದ ಯಾರೂ ಪ್ರತಿಭಾವಂತರಾಗುವುದಿಲ್ಲ. ಎಲ್ಲರಲ್ಲಿಯೂ ಪ್ರತಿಭೆಯಿದ್ದು ಅದು ಹೊರಬರಲು ಅವಕಾಶಗಳು ಸಿಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಸತ್ತೇಗಾಲದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷö್ಮಮ್ಮ ಸೋಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಎರಡು ಕೋಟಿ ರೂ.ಗಳನ್ನು ವೆಚ್ಚ ಮಾಡಿ ನಿರ್ಮಾಣವಾಗಿರುವ ಶಾಲೆಯಲ್ಲಿ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯಗಳನ್ನು ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಮರಿಸ್ವಾಮಿ ಸ್ವಂತ ಶ್ರಮದಿಂದ ಐಪಿಎಸ್ ಆಗಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರಕುವಂತೆ ಮಾಡಿದ್ದಾರೆ. ಸ್ವಾತಂತ್ಯ್ರಕ್ಕೂ ಮುನ್ನ ಶೂದ್ರರು, ದಲಿತರಿಗೆ ಅವಕಾಶಗಳೇ ಇರಲಿಲ್ಲ. ಅಂಬೇಡ್ಕರ್ ಅವರು ಕಷ್ಟಪಟ್ಟು ವಿದ್ಯಾವಂತರಾದರು. ಶಿಕ್ಷಣ ಪ್ರಬಲವಾದ ಅಸ್ತç. ಶಿಕ್ಷಣದಿಂದ ವಂಚಿತರಾದವರು ಸ್ವಾಭಿಮಾನದಿಂದ, ಗೌರವದಿಂದ ಬದುಕುವುದು ಕಷ್ಟವಾಗುತ್ತದೆ. ಅದಕ್ಕಾಗಿ ಎಲ್ಲರೂ ವಿದ್ಯಾವಂತರಾಗಲೇಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.
ಮರಿಸ್ವಾಮಿಯವರು ಈ ಊರಿನಲ್ಲಿ ಹುಟ್ಟಿ ಐಪಿಎಸ್ ಅಧಿಕಾರಿಯಾಗಿ, ಪೊಲೀಸ್ ಮಹಾನಿರ್ದೇಶಕರಾಗಿ ಈ ಊರಿಗೆ ಹಾಗೂ ಈ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಈ ಊರಿನ ಜನ ಹೆಮ್ಮೆ ಪಡುವಂತೆ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರು ಸತ್ತೇಗಾಲ ಗ್ರಾಮದ ಗ್ರಾಮಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಈ ಶಾಲೆಯ ನಿರ್ಮಾಣಕ್ಕೆ ಆಸಕ್ತಿ ತಳೆದು ಇತರರ ಸಹಾಯವನ್ನು ಪಡೆದು ಶಾಲೆಯನ್ನು ನಿರ್ಮಾಣ ಮಾಡಿರುವುದನ್ನು ಮುಖ್ಯಮಂತ್ರಿಗಳೂ ಮೆಚ್ಚಿದರು. ಚಾಮರಾಜನಗರದಲ್ಲಿ ಒಟ್ಟು ಪ್ರಾಥಮಿಕ ಶಾಲೆಗಳು 1102 ಶಾಲೆಗಳಿದ್ದು ಪೈಕಿ 805 ಸರ್ಕಾರಿ ಶಾಲೆಗಳಿವೆ. ಸರ್ಕಾರವೇ ಎಲ್ಲವನ್ನೂ ಅಭಿವೃದ್ಧಿ ಪಡೆಸುವುದು ಕಷ್ಟವಾಗುತ್ತದೆ. ಇದರಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಇದೆ. ನಾವು ಓದಿದ ಶಾಲೆ ಹೊಸದಾಗಿ ನಿರ್ಮಾಣವಾಗಿ ಉದ್ಘಾಟನೆಯಾಗುತ್ತಿರುವಾಗ ಈ ಕೆಲಸ ಮಾಡಿದವರಿಗೆ ಆಗುವ ಖುಷಿ, ಸಮಾಧಾನ ಬೇರೆಯಾರಿಗೂ ಆಗಲು ಸಾಧ್ಯವಿಲ್ಲ. ಮರಿಸ್ವಾಮಿ ಹಾಗೂ ಅವರ ಕುಟುಂಬದವರಲ್ಲದೇ ಶಾಲಾ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿದ 63 ಜನರನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಗುರಿ ಇಟ್ಟುಕೊಂಡು ಸಾಧನೆ ಮಾಡಿ..
ನಾವು ವಿದ್ಯಾರ್ಥಿಗಳಾಗಿದ್ದಾಗ ಬರಿಗಾಲಿನಲ್ಲಿ ಶಾಲೆಗೆ ತರಳುತ್ತಿದ್ದೆವು. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯೂ ಶೂ, ಸಾಕ್ಸ್ ಹಾಗೂ ಸಮವಸ್ತçವನ್ನು ಹಾಕಿಕೊಳ್ಳಬೇಕೆಂದು ಶೂಭಾಗ್ಯ ಕಾರ್ಯಕ್ರಮವನ್ನು ಜಾರಿ ಮಾಡಿದ್ದೆ. ಈಗ ಹಾಲು, ರಾಗಿ ಮಾಲ್ಟ್, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು, ಸಮವಸ್ತç, ಪುಸ್ತಕವನ್ನು ಕೊಡುತ್ತಿದ್ದೇವೆ. ಹಾಗಾಗಿ ಮಕ್ಕಳು ಓದಬೇಕು. ವಿದ್ಯೆಯಿಂದ ವಂಚಿತರಾಗಬಾರದು ಎಂದರು. ಮಕ್ಕಳಿಗೆ ಆರ್ಥಿಕವಾಗಿ ತೊಂದರೆಯಾಗಬಾರದು ಎಂದು ಗೃಹಲಕ್ಷಿö್ಮÃ ಕಾರ್ಯಕ್ರಮವನ್ನು ಜಾರಿ ಮಾಡಿದ್ದೇವೆ. ಜನರಲ್ಲಿ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು ಎಂದು 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿದೆ. ಗ್ಯಾರಂಟಿಗಳಿಗೆ 56 ಸಾವಿರ ಕೊಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದರು.
ನಾನು ಓದದೇ ಹೋಗಿದ್ದರೆ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ. ರಾಚಯ್ಯನವರು ಕಾನೂನು ಓದಿದ್ದರಿಂದ ಸಚಿವರು ಹಾಗೂ ರಾಜ್ಯಪಾಲರಾದವರು. ಮರಿಸ್ವಾಮಿಯವರು ಓದಿದದರಿಂದ ಐ.ಪಿ.ಎಸ್ ಅಧಿಕಾರಿಯಾದರು. ಅದಕ್ಕೆ ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು ಜೀವನದಲ್ಲಿ ಗುರಿಯಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಆರ್ಥಿಕ ಶಕ್ತಿ ತುಂಬವ ಗ್ಯಾರಂಟಿ ಯೋಜನೆಗಳು..
ಗೃಹಲಕ್ಷ್ಮೀ ಹಣದಿಂದ ಬಂಗಾರದಂತಹ ಬೆಳೆ ಬೆಳೆದಿರುವ ಬಗ್ಗೆ ಪತ್ರಿಕಾ ತುಣುಕನ್ನು ಸಿಎಂ ಪ್ರಸ್ತಾಪಿಸಿ, 1 ಕೋಟಿ 22 ಲಕ್ಷ ಕುಟುಂಬದ ಯಜಮಾನಿಯರಿಗೆ ತಿಂಗಳಿಗೆ 2 ಸಾವಿರ ರೂ.ಗಳನ್ನು ಕೊಡಲಾಗುತ್ತಿದೆ ಎಂದರು. ಐದು ಕೆಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯ ಮೂಲಕ ಉಚಿತವಾಗಿ ಕೊಡುವ ಕೆಲಸವನ್ನು ಸಿದ್ದರಾಮಯ್ಯ ಜಾರಿಮಾಡಿದ್ದು ಎಂದರು. ಅಕ್ಕಿಗೆ 34 ರೂ.ಗಳನ್ನು ಕೊಡುತ್ತೇವೆ ಎಂದಾಗ ನರೇಂದ್ರ ಮೋದಿ ನಿರಾಕರಿಸಿದರು. ಪ್ರತಿ ವ್ಯಕ್ತಿಗೆ 34 ರೂ.ಗಳಂತೆ 170 ರೂ.ಗಳನ್ನು ನೀಡಲಾಗುತ್ತಿದೆ. 4.50 ಕೋಟಿ ಜನರಿಗೆ ಈ ಸೌಲಭ್ಯ ತಲುಪಿಸಲಾಗುತ್ತಿದೆ. 1 ಕೋಟಿ 62 ಲಕ್ಷ ಜನರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ನಾನು ಹಳ್ಳಿಯಲ್ಲಿ ಹುಟ್ಟಿ ಕಷ್ಟ ಗೊತ್ತಿರುವುದರಿಂದ ಈ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದರು.
ಸತ್ತೇಗಾಲ ಪಟ್ಟಣ ಪಂಚಾಯಿತಿ ರಚನೆಗೆ ಮುಖ್ಯಮಂತ್ರಿಗಳ ಭರವಸೆ..
ನಮ್ಮ ಬಜೆಟ್ 3 ಲಕ್ಷದ 71 ಸಾವಿರ ಕೋಟಿ. ಅದರಲ್ಲಿ 1.20 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಸತ್ತೇಗಾಲದಲ್ಲಿ 14 ಮತಗಟ್ಟೆಗಳಿದ್ದು ಪಟ್ಟಣ ಪಂಚಾಯಿತಿ ಮಾಡಲು ಮನವಿ ಸಲ್ಲಿಸಿದ್ದಾರೆ. ಇದನ್ನು ಮಾಡಿಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಧನಗೆರೆ ಜಾಗೀರ್ದಾರ್ ಅಣೆಕಟ್ಟೆಗೆ ನೀರು ಒದಗಿಸುವ ಜೊತೆಗೆ ಬೇಸಿಗೆ ಬೆಳೆಗೆ ನೀರು ಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ನೀರಿದ್ದರೆ ಮಾಡಿಕೊಡುವ ಭರವಸೆ ನೀಡಿದರು. ಈ ಬಾರಿ ಮಲೆ ಉತ್ತಮವಾಗಿ ಆಗಿದ್ದು ಎಲ್ಲೆಡೆ ಬಿತ್ತನೆಯಾಗಿದೆ. ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಪ್ರತಿ ವರ್ಷ ಮಳೆ ಉತ್ತಮವಾಗಿ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಇತರರಿಗೆ ನೆರವಾಗಿ..
ಸುಸಜ್ಜಿತ ಶಾಲೆ ನಿರ್ಮಾಣ ಮಾಡಿದ್ದು ಅದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಮರಿಸ್ವಾಮಿಯವರು ಮಾಡಿದಂತೆ ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ನೆರವಾಗಬೇಕು. ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ತಳ್ಳಿಕೊಂಡು ಹೋಗಿ, ಹಿಂದಕ್ಕೆ ಮಾತ್ರ ಎಳೆಯಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು ಎಂದರು. ಮೀಸಲಾತಿ ಲಾಭವನ್ನು ಪಡೆದ ಮೇಲೆ ಇತರರಿಗೂ ನೆರವು ನೀಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಸ್ಪೂರ್ತಿಯನ್ನು ಪಡೆದುಕೊಂಡು ಜನರಿಗಾಗಿ ಕೆಲಸ ಮಾಡಬೇಕು ಎಂದರು.
ಚಾಮರಾಜನಗರ ಜಿಲ್ಲಾ ಉಸ್ತುವರಿ, ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ:ಹೆಚ್.ಸಿ ಮಹದೇವಪ್ಪ, ಪ್ರಾಥಮಿಕ ಶಿಕ್ಷಣ ತ್ತು ಸಾಕ್ಷರತಾ ಇಲಾಕೆ ಸಚಿವ ಮಧು ಬಂಗಾರಪ್ಪ. ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಸಚಿವರು ಎಂಎಸ್ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಶಾಸಕ ಕೃಷ್ಣಮೂರ್ತಿ, ಗಣೇಸ್ ಪ್ರಸಾದ್, ಮಾಜಿ ಶಾಸಕ ನರೇಂದ್ರ, ನಂಜುಂಡಸ್ವಾಮಿ, ಮಾಜಿ ಸಚಿವ ಲಿಂಗಯ್ಯ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಶಾಲಾ ಕಟ್ಟಡದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ದಾನಿಗಳು ಹಾಗೂ ನಿವೃತ್ತ ಪೋಲೀಸ್ ಮಹಾನಿರ್ದೇಶಕ ಎಸ್ ಮರಿಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸ್ಥಾನ ಇನ್ನೂ ಗಟ್ಟಿಯಾಯಿತು..
ಮೊದಲು ಮೈಸೂರು ಜಿಲ್ಲೆಗೆ ಸೇರಿದ್ದ ಚಾಮರಾಜನಗರವನ್ನು ದಿವಂಗತ ಬಿ.ರಾಚಯ್ಯನವರ ಕಾಲದಲ್ಲಿ ಮೈಸೂರು ಮತ್ತು ಚಾಮರಾಜನಗರ ಎಂಬ ಜಿಲ್ಲೆಗಳಾದವು. ನಾನು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೊಸ ಜಿಲ್ಲೆಯನ್ನು ಘೋಷಣೆ ಮಾಡಿದೆವು. ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದರು. ಕೆಲವು ಶಾಸಕರು ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿ ಅವರು ಜಿಲ್ಲೆಗೆ ಭೇಟಿ ನೀಡದಂತೆ ಮಾಡಿದ್ದರು. ಚಾಮರಾಜನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳುತ್ತಾರೆ ಎಂಬ ಕಳಂಕ ಜಿಲ್ಲೆಯ ಮೇಲೆ ಹೊರಿಸಲಾಗಿದೆ. ನಾನು ರಾಚಯ್ಯನವರು ಇಲ್ಲಿಗೆ ಬಂದು ಹೊಸ ಜಿಲ್ಲೆಯನ್ನು ಉದ್ಘಾಟನೆ ಮಾಡಿದೆವು. ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ . ರಾಚಯ್ಯ ಹಾಗೂ ನಾನು ಮೌಢ್ಯವನ್ನು ನಂಬುತ್ತಿರಲಿಲ್ಲವಾದ್ದರಿAದ ಇಲ್ಲಿಗೆ ಬಂದೇ ಘೋಷಣೆಯನ್ನು ಮಾಡಿದೆವು ಎಂದರು.
ಜೆ.ಹೆಚ್. ಪಟೇಲರು ಹಾಗೂ ವಾಟಾಳ್ ನಾಗರಾಜ್ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ತೆರಳಿ ಘೋಷಣೆ ಮಾಡಿದರು. ಅದಾದ ನಂತರ ಇಪ್ಪತ್ತು ಸಾರಿಯಾದರೂ ಚಾಮರಾಜನರಕ್ಕೆ ನಾನು ಆಗಮಿಸಿದ್ದೇನೆ. ಮುಖ್ಯಮಂತ್ರಿ ಸ್ಥಾನ ಹೋಗುವ ಬದಲು ಅದು ಇನ್ನೂ ಗಟ್ಟಿಯಾಯಿತು ಎಂದರು.
ರಾಜಕೀಯದ ಕೊನೆಗಾಲದಲ್ಲಿದ್ದೇನೆ
ನೀವು ಮೂರನೇ ಬಾರಿ ಮುಖ್ಯಮಂತ್ರಿಯಾಗುತ್ತೀರಿ ಎಂದು ಅಭಿಮಾನಿಯೊಬ್ಬರು ಕೂಗಿದಾಗ ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಜನರ ಅಭಿಮಾನ ಬಹಳ ಮುಖ್ಯ. ಆನರ ಪರೀತಿ ಅಭಿಮಾನವನ್ನು ಗಳಿಸದೇ ಹೋದರೆ ರಾಜಕೀಯದಲ್ಲಿ ಉಳಲಿಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿಗಳು, ಈ ಭಾಗದಲ್ಲಿ ರಾಚಯ್ಯನವರು ಬಹಳ ಎತ್ತರದ ರಾಜಕಾರಣಿ. ನಾನು ರಾಜಕೀಯವಾಗಿ ಬೆಳೆಯಲು ಅವರ ಸಾಹಯವೂ ಇದೆ ಎನ್ನುವುದನ್ನು ಮೆರೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.