ಬೆಳಗಾವಿ: ಬೆಳಗಾವಿಯಲ್ಲಿ ಈಗ ಕನ್ನಡದ ಕಗ್ಗೊಲೆ ನಡೆದಿದೆ. ಇಲ್ಲಿ ಡಿಸೆಂಬರ್ 9 ರಿಂದ 19 ರವರೆಗೆ ನಡೆಯಲಿರುವ ವಿಧಾನ ಮಂಡಲದ ಚಳಿಗಾಲದ ಉಭಯ ಸದನಗಳ ಅಧಿವೇಶನದ ಹಿನ್ನೆಲೆಯಲ್ಲಿ ಪ್ರಮುಖ ವೃತ್ತಗಳಲ್ಲಿ ಬೃಹತ್ ಫಲಕಗಳನ್ನು ಅಳವಡಿಸಲಾಗಿದೆ. ಬೆಳಗಾವಿಯ ಪ್ರಮುಖ ವೃತ್ತವಾಗಿರುವ ಚನ್ನಮ್ಮ ವೃತ್ತದಲ್ಲಿ ಅಳವಡಿಸಲಾಗಿರುವ ನಾಮ ಫಲಕದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಲೋಪ ಕಂಡು ಬಂದಿದೆ. ಚಳಿಗಾಲದ ಹೆಸರನ್ನು *ಚಲಿಗಾಲ* ಎಂದು ಬರೆಯಲಾಗಿದೆ. ಚನ್ನಮ್ಮ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಹಾಕಿದಾಗ ವಾಹನಗಳು ನಿಲುಗಡೆಯಾಗುತ್ತವೆ. ಆ ಸಂದರ್ಭದಲ್ಲಿ ಎದುರಿಗೆ ಕಂಡುಬರುವ ಈ ನಾಮಫಲಕ ಗಮನಿಸಿದ ಕನ್ನಡಿಗರು ಈ ಫಲಕ ನೋಡಿ ಅಪಹಾಸ್ಯ ಮಾಡುವಂತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ರಾಹುಲ್ ಜಾರಕಿಹೊಳಿ ಅವರ ಫೋಟೋ ಸಹ ಇದೆ. ಜೊತೆಗೆ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಅತಿರಥ ನಾಯಕರ ಭಾವಚಿತ್ರಗಳನ್ನು ಹಾಕಲಾಗಿದೆ. ಆದರೆ ಅತ್ಯಂತ ದೊಡ್ಡ ಅಕ್ಷರಗಳಲ್ಲಿ ಮೂಡಿ ಬಂದಿರುವ ಚಲಿಗಾಲ ಎಂಬ ಶಬ್ದ ನೋಡಿ ಕನ್ನಡಿಗರು ಈಗ ನಗುವ ಪ್ರಸಂಗ ಸೃಷ್ಟಿಯಾಗಿದೆ.
ನಾಮಫಲಕದಲ್ಲಿ ಆಗಿರುವ ಲೋಪವನ್ನು ಈಗಲೇ ಸರಿಪಡಿಸಿದರೆ ಒಳಿತು. ಇಲ್ಲವಾದರೆ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸುವ ನಾಡಿನ ಶಾಸಕರು ಅಧಿಕಾರಿಗಳು ಸಹಾ ಈ ಫಲಕ ನೋಡಿ ಇನ್ನಷ್ಟು ಮುಜುಗರ ಪಟ್ಟುಕೊಳ್ಳುವ ಸನ್ನಿವೇಶ ಎದುರಾಗಲಿದೆ.
ದಿನ ಬೆಳಗಾದರೆ ಕನ್ನಡಕ್ಕಾಗಿ ಹೋರಾಡುವ ಕನ್ನಡ ಸಂಘಟನೆಗಳು ಚನ್ನಮ್ಮ ವೃತ್ತದಿಂದಲೇ ಪ್ರತಿಭಟನೆ ಆರಂಭ ಮಾಡುತ್ತವೆ. ಜಿಲ್ಲಾಡಳಿತದ ಅಧಿಕಾರಿಗಳು ಸಹ ಈ ಪ್ರಮುಖ ಸ್ಥಳದಿಂದಲೇ ಹಾಯ್ದು ಹೋಗುತ್ತಾರೆ. ಆದರೆ, ಇವರೆಲ್ಲ ಕಂಡು ಕಾಣದಂತೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.