ಶಿರಸಿ : ಉತ್ತರ ಕನ್ನಡ ಜಿಲ್ಲೆ ಅಖಂಡವಾಗಿರಬೇಕೆಂಬುದು ಒಂದಷ್ಟು ಜನರ ಆಶಯವಾಗಿದೆ. ಅದು ತಪ್ಪೆಂದು ನಾನು ಹೇಳುವುದಿಲ್ಲ, ಆದರೆ ಬಹುತೇಕರಿಗೆ ದೂರವಾಗಿರುವ ಜಿಲ್ಲಾ ಕೇಂದ್ರ ಕಾರವಾರದ ಬದಲು ಶಿರಸಿಯನ್ನು ಮಾಡುತ್ತಾರೆಯೇ ? ಜಿಲ್ಲೆ ಅಖಂಡವಾಗಿರಬೇಕು ಎಂದು ನಮ್ಮ ವಿರುದ್ಧ ಮಾತನಾಡಿದವರು ಜಿಲ್ಲೆಯ ಮಧ್ಯದ ಭಾಗವಾಗಿರುವ ಶಿರಸಿಗೆ ಜಿಲ್ಲಾ ಕೇಂದ್ರ ತರುತ್ತಾರೆಯೇ ? ಅದಕ್ಕೆ ಅವರು ಒಪ್ಪುವುದಿಲ್ಲ. ಹೀಗಾಗಿಯೇ ಪ್ರತ್ಯೇಕ ಜಿಲ್ಲಾ ಹೋರಾಟವನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ಅವರು ಶುಕ್ರವಾರ ಬನವಾಸಿಯಲ್ಲಿ ಕದಂಬ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಗಾಗಿ ಆಗ್ರಹಿಸಿ ನಡೆದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದರು. ಜಿಲ್ಲಾ ಕೇಂದ್ರ ಕಾರವಾರ ಘಟ್ಟದ ಮೇಲಿನ ಎಲ್ಲ ತಾಲೂಕಿನವರಿಗೆ ದೂರವಾಗಿದೆ. ಬಡವರಿಗೆ ಜಿಲ್ಲಾ ಕೇಂದ್ರ ಕಾರವಾರಕ್ಕೆ ಹೋಗಿ ಬರುವುದು ಕಷ್ಟಕರ. ಪ್ರತ್ಯೇಕ ಜಿಲ್ಲಾ ಹೋರಾಟಕ್ಕೆ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಬೆಂಬಲ ಸೂಚಿಸಿದ್ದಾರೆ. ಶಾಸಕ ಭೀಮಣ್ಣ ಅವರೂ ಸಹಕಾರ ನೀಡುವುದರ ಜೊತೆಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿಸುವ ಮಾತನ್ನು ಹೇಳಿದ್ದಾರೆ. ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರೂ ಸಹ ಪ್ರತ್ಯೇಕ ಜಿಲ್ಲೆಯಾದರೆ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿಸುವ ಮೂಲಕ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಅಡಿಪಾಯವನ್ನು ಹಾಕಿಕೊಟ್ಟಿದ್ದಾರೆ. ಡಿಸೆಂಬರ್ 9 ರಂದು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಕದಂಬ ಕನ್ನಡ ಪ್ರತ್ಯೇಕ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಯ ಕೂಗು ಮುಟ್ಟಬೇಕಿದೆ. ಹಾಗಾಗಿ ನಾವು ವಿಳಂಬ ಮಾಡದೆ ಜನರನ್ನು ಜಾಗೃತಗೊಳಿಸಿ, ಜನರ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಯಾರ ಬಗ್ಗೆಯೂ ವೈಯಕ್ತಿಕವಾಗಿ ವಿರೋಧವಿಲ್ಲ, ಪ್ರತ್ಯೇಕ ಜಿಲ್ಲೆಯಾಗುವುದರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ದೊರೆಯುತ್ತದೆ. ಜನರಿಗೆ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವುದು ಸುಲಭವಾಗಲಿ ಎಂಬ ಕಾರಣಕ್ಕೆ ಈ ವಿಷಯ ಕೈಗೆತ್ತಿಕೊಳ್ಳಲಾಗಿದೆ. ಪ್ರಚಾರದ ಹಂಬಲಿಗಾಗಿ ಸಖಾಸುಮ್ಮನೆ ಹೇಳಿಕೆ ಕೊಡುವುದು ತರವಲ್ಲ ಎಂದರು.
ಅಕಾಲಿಕ ಮಳೆಯ ಕಾರಣಕ್ಕೆ ಅನ್ನದಾತನಾಗಿರುವ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಹೊಲದಲ್ಲಿ ಭತ್ತಗಳು ಮಳೆಗೆ ಹಾಳಾಗುತ್ತಿದ್ದರೂ, ನಮ್ಮ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂಬ ಕಾರಣಕ್ಕೆ ಪ್ರತಿಭಟನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ ಮಾತನಾಡಿ, ಬನವಾಸಿ ಬಗ್ಗೆ ಅಭಿಮಾನ ಎಲ್ಲೆಡೆ ಇದೆ. ಆದರೆ ಅಭಿವೃದ್ಧಿ ವಿಷಯದಲ್ಲಿ ಮಾತ್ರ ಬನವಾಸಿಗೆ ಸ್ಥಾನವಿಲ್ಲದಿರುವುದು ದುರ್ದೈವದ ಸಂಗತಿ. ಬನವಾಸಿಯ ಅಭಿವೃದ್ಧಿ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿರುವುದು ದುರ್ದೈವದ ಸಂಗತಿ. ನಮಗೆ ಕದಂಬ ಕನ್ನಡ ಜಿಲ್ಲೆ ಆಗಬೇಕು, ಜೊತೆಗೆ ಬನವಾಸಿಯನ್ನು ತಾಲೂಕಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ವಿ.ಎಂ.ಭಟ್ಟ ಮಾತನಾಡಿ, ಪ್ರತಿಯೊಂದು ಹೋರಾಟಕ್ಕೆ ನಾಯಕತ್ವದ ಅವಶ್ಯಕತೆ ಇದೆ. ಪ್ರತ್ಯೇಕ ಜಿಲ್ಲೆ ಅನಂತಮೂರ್ತಿ ಅವರಿಗೆ ಬೇಕೋ ಬೇಡವೋ ಗೊತ್ತಿಲ್ಲ, ಆದರೆ ಜನಸಾಮಾನ್ಯರಿಗೆ ಜಿಲ್ಲೆಯ ಅವಶ್ಯಕತೆ ಇದೆ. ಘಟ್ಟದ ಮೇಲಿನ ತಾಲೂಕುಗಳಿಗೆ ರೈಲ್ವೆ ಇಲ್ಲ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ, ವಿಮಾನ ನಿಲ್ದಾಣವಿಲ್ಲ. ಇವೆಲ್ಲವೂ ಕರಾವಳಿಯ ಪಾಲಾಗಿದೆ. ಹೀಗಾಗಿ ಘಟ್ಟದ ಮೇಲಿನ ಏಳು ತಾಲೂಕುಗಳ ಜನರಿಗಾಗಿ ಪ್ರತ್ಯೇಕ ಜಿಲ್ಲೆಯ ಅವಶ್ಯಕತೆ ಇದೆ. ಜೊತೆಗೆ ಐತಿಹಾಸಿಕ ಹಿನ್ನಲೆಯುಳ್ಳ ಬನವಾಸಿಗೆ ತಾಲೂಕು ಸ್ಥಾನಮಾನ ದೊರೆಯುವುದು ಇಂದಿನ ಅಗತ್ಯ. ಇದು ಸಂಪೂರ್ಣ ರಾಜಕೀಯೇತರ ಹೋರಾಟ, ಎಲ್ಲ ಸಮುದಾಯ, ಎಲ್ಲ ಒಕ್ಷದ ಪ್ರಮುಖರನ್ನು ಒಳಗೊಂಡಿರುವ ಈ ಹೋರಾಟ ಎಲ್ಲರ ಒಕ್ಕೊರಲಿನ ಧ್ವನಿಯಾಗಿದೆ. ಈ ಹೋರಾಟವು ಸುದೀರ್ಘ ಪಯಣದ ಹಾದಿಯಾಗಿದೆ. ಹಾಗಾಗಿ ನಾವೆಲ್ಲ ಸಮಯ ಕೊಟ್ಟು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಬನವಾಸಿ ತಾಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಸಿ.ಎಫ್. ನಾಯ್ಕ ಮಾತನಾಡಿ, ಪ್ರತ್ಯೇಕ ಜಿಲ್ಲಾ ಹೋರಾಟದ ಕೂಗು ಈಗಿನದ್ದಲ್ಲ. ಘಟ್ಟದ ಮೇಲಿನ ಪ್ರದೇಶಗಳಲ್ಲಿ ಶಿರಸಿ ಜಿಲ್ಲಾ ಕೇಂದ್ರವಾಗಲು ಸೂಕ್ತವಾದ ಸ್ಥಳವಾಗಿದೆ. ಇಲಾಖೆಗಳ ಕಟ್ಟಡಗಳಿಗೆ ಸಾಕಷ್ಟು ಸ್ಥಳಾವಕಾಶವಿದೆ. ಶಿರಸಿಯಲ್ಲಿ ಈಗಾಗಲೇ ಬಹುತೇಕ ಎಲ್ಲ ಜಿಲ್ಲಾ ಮಟ್ಟದ ಕಚೇರಿಗಳಿವೆ. ಜಿಲ್ಲಾಧಿಕಾರಿ ಕಾರ್ಯಾಲಯ ಹಾಗೂ ಎಸ್ಪಿ ಕಚೇರಿ ಮಾತ್ರ ಬರುವುದು ಬಾಕಿ ಎನಿಸುತ್ತದೆ. ಹೀಗಾಗಿ ನಾವೆಲ್ಲ ಒಗ್ಗಟ್ಟಾಗಿ ಪ್ರತ್ಯೇಕ ಕದಂಬ ಕನ್ನಡ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಗಾಗಿ ಹೋರಾಟ ಮಾಡಬೇಕು ಎಂದರು.
ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿನಯ ಗೌಡ, ಪ್ರತ್ಯೇಕ ಜಿಲ್ಲೆಯ ಕೂಗು ಪ್ರತಿಯೊಬ್ಬ ಜನರ ಕೂಗಾಗಿದೆ. ಜಿಲ್ಲಾ ಕೇಂದ್ರ ಬಹುತೇಕರಿಗೆ ದೂರದ ಪ್ರದೇಶವಾಗಿದೆ. ಪ್ರತಿಯೊಂದಕ್ಕೂ ಜಿಲ್ಲಾ ಕೇಂದ್ರವನ್ನೇ ಅವಲಂಬಿಸಿರುವುದರಿಂದ ಅದು ನಮಗೆ ಹತ್ತಿರ ಇರಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಾಗಿ ಹೋರಾಟದಲ್ಲಿ ಭಾಗಿಯಾಗಬೇಕಿದೆ ಎಂದರು.
ಬನವಾಸಿ ಗ್ರಾಪಂ ಅಧ್ಯಕ್ಷೆ ಬೀಬಿ ಆಯೇಷಾ ಮಾತನಾಡಿ, ಬನವಾಸಿ ತಾಲೂಕಿಗಾಗಿ ನಾವು ಸಾಕಷ್ಟು ವರ್ಷಗಳಿಂದ ಹೋರಾಟ ನಡೆಸಿತ್ತಿದ್ದೇವೆ. ಕಳೆದ 15-20 ವರ್ಷಗಳಿಂದ ಹೋರಾಟ ನಡೆಸಿದರೂ ಅದು ಫಲಪ್ರದವಾಗಿಲ್ಲ. ಇದೀಗ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ಮತ್ತೆ ಹೋರಾಟ ಪ್ರಾರಂಭಿಸಲಾಗಿದೆ. ಕದಂಬ ಕನ್ನಡ ಜಿಲ್ಲೆಯಾಗಲಿ, ಬನವಾಸಿ ತಾಲೂಕಾಗಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ರಮೇಶ ನಾಯ್ಕ ಕುಪ್ಪಳ್ಳಿ, ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ, ಅಂಡಗಿ ಗ್ರಾಪಂ ಅಧ್ಯಕ್ಷ ಮಂಜುನಾಥ ಮಾತನಾಡಿ, ನಮ್ಮೆಲ್ಲರ ಅನುಕೂಲಕ್ಕಾಗಿ ಕದಂಬ ಕನ್ನಡ ಪ್ರತ್ಯೇಕ ಜಿಲ್ಲೆ ಹಾಗು ಬನವಾಸಿ ತಾಲೂಕಾಗಬೇಕು. . ಇಂದು ರೈತರು ಒಂದು ಸಣ್ಣ ಕೆಲಸ ಆಗಬೇಕೆಂದರೆ 150 ಕಿ.ಮೀ ದೂರದ ಕಾರವಾರಕ್ಕೆ ಹೋಗಿ ಬರುವುದು ಕಷ್ಟವಾಗುತ್ತದೆ ಎಂದರು.
ಧುರೀಣ ಗಣೇಶ ಸಣ್ಣಲಿಂಗಣ್ಣನವರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶ್ರೀಪಾದ ರಾಯ್ಸದ, ಜಯಶೀಲ ಗೌಡ, ಮೊದಲಾದವರು ಮಾತನಾಡಿದರು.
ಬನವಾಸಿಯ ಶ್ರೀ ಮಧುಕೇಶ್ವರ ದೇವಾಲಯದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ನಾಡಕಚೇರಿ ವರೆಗೆ ಆಗಮಿಸಿ, ಉಪತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಮೆರವಣಿಗೆಯಲ್ಲಿ ಬನವಾಸಿ ತಾಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಸಿ.ಎಫ್.ನಾಯ್ಕ, ಮಾಜಿ ಜಿಪಂ ಸದಸ್ಯರಾದ ಶೋಭಾ ನಾಯ್ಕ, ಉಷಾ ಹೆಗಡೆ, ರೂಪಾ ನಾಯ್ಕ, ಪ್ರಮುಖರಾದ ಮಂಜುನಾಥ ಪಾಟೀಲ, ಬನವಾಸಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿನಯ ಗೌಡ, ಮುಂಡಗೋಡಿನ ಹೋರಾಟಗಾರ ಚಿದಾನಂದ ಹರಿಜನ, ಮಾಜಿ ಗ್ರಾಪಂ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ಶಿರಸಿ ವಕೀಲರ ಸಂಘದ ಅಧ್ಯಕ್ಷ ಸಿಎಫ್ ಈರೇಶ, ಅಶೋಕ ನಾಯ್ಕ ಮಧುರವಳ್ಳಿ, ಎ.ಆರ್.ನಾಯ್ಕ, ರಮೇಶ ನಾಯ್ಕ ಕುಪ್ಪಳ್ಳಿ, ಪಿಎಲ್ಡಿ ಬ್ಯಾಂಕ್ ಶಿರಸಿ ಅಧ್ಯಕ್ಷ ಶ್ರೀಪಾದ ರಾಯ್ಸದ್, ಅನಿಲ ನಾಯಕ ಶಿರಸಿ, ಜಿ.ಎಸ್.ಹೆಗಡೆ, ಗ್ರಾಪಂ ಸದಸ್ಯ ನಾಗರಾಜ ಉಪ್ಪಾರ್, ಲ. ಸಾಯಿರಾಮ್ ಕಾನಳ್ಳಿ, ಬನವಾಸಿ ಗ್ರಾಪಂ ಉಪಾಧ್ಯಕ್ಷ ಸಿದ್ಧಲಿಂಗೇಶ ನರೇಗಲ್ ಸೇರಿದಂತೆ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು