ಜನ ಜೀವಾಳ ಜಾಲ, ಬೆಳಗಾವಿ : ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಮತ್ತು ನೂತನ ಪಿಂಚಣಿ ಯೋಜನೆ (ಎನ್ ಪಿಎಸ್) ರದ್ದುಗೊಳಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ನವೆಂಬರ್ 6 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರಕಾರಿ ನೌಕರರ ಸಂಘ ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಪದಾಧಿಕಾರಿಗಳು ಸರಕಾರ ಈ ನಿಟ್ಟಿನಲ್ಲಿ ಗಮನಹರಿಸುವಂತೆ ಮನವಿ ಮಾಡಿದ್ದಾರೆ.
ಚನ್ನಮ್ಮ ಸರ್ಕಲ್ ಮೂಲಕ ಸರದಾರ ಮೈದಾನದಲ್ಲಿ ಜಾಥಾ ಸಂಪನ್ನವಾಗಲಿದೆ. ಜಾಥಾದಲ್ಲಿ ಸುಮಾರು 6ಸಾವಿರ ಸರಕಾರಿ ನೌಕರರು ಭಾಗವಹಿಸುವರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಾಂತಾರಾಮ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಎನ್ಪಿಎಸ್ ನಿಂದ ನೌಕರರ ಸಂಧ್ಯಾ ಕಾಲದ ಬದುಕು ಕಷ್ಟಕ್ಕೆ ಸಿಲುಕಿದೆ. ನಿವೃತ್ತಿ ನಂತರ ನೌಕರರು ಬದುಕು ಚೆನ್ನಾಗಿರಬೇಕು. ಅಂದರೆ ಎನ್.ಪಿ.ಎಸ್. ನಿರ್ಮೂಲನೆ ಆಗಬೇಕು. ಒ.ಪಿ.ಎಸ್. ಸೌಲಭ್ಯ ಪಡೆಯಬೇಕು ಎಂದು ಹೇಳಿದರು.
ರಾಜ್ಯದಲ್ಲಿ 39 ಇಲಾಖೆಗಳ 2.5 ಲಕ್ಷ ನೌಕರರು ನೂತನ ಪಿಂಚಣಿ ಯೋಜನೆಗೆ ಒಳಪಡುವರು. ಜಿಲ್ಲೆಯಲ್ಲಿ 15 ಸಾವಿರ ನೌಕರರು ಎನ್.ಪಿ.ಎಸ್.ಗೆ ಒಳಪಡಲಿದ್ದಾರೆ. ಈಗಾಗಲೇ ನಾಲ್ಕೂ ರಾಜ್ಯಗಳಾದ ಪಂಜಾಬು ಛತ್ತೀಸ್ ಗಢ , ಜಾರ್ಖಂಡ ಮತ್ತು ರಾಜಸ್ತಾನಗಳಲ್ಲಿ ಎನ್.ಪಿ.ಎಸ್. ರದ್ದುಗೊಳಿಸಲಾಗಿದೆ.
ಸಂಘದ ಪದಾಧಿಕಾರಿಗಳಾದ ಎನ್.ಟಿ.ಲೋಕೇಶ, ಕಾರ್ಯದರ್ಶಿಗಳು, ಡಾ.ನಾಗಲಕರ, ಹೆಬ್ಬೆಳಕರ, ಸತೀಶ ಬುರುಡ್, ದೀಪಕ ಮತ್ತು ಮಾರುತಿ, ನೀಲಜಗಿ, ರಾಮು ಗುಗವಾಡ ಮತ್ತು ಎಸ್.ಎಮ್.ಪಾಟೀಲ, ಅಶೋಕ ಖೋತ, ಉಮೇಶ ಟೊಪ್ಪದ ಹಾಗೂ ಶಾಮ ಮಾಳಿ ಉಪಸ್ಥಿತರಿದ್ದರು.