ಬೆಂಗಳೂರು: ತೆಲುಗಿನಲ್ಲಿ ‘ಹನುಮಾನ್’ ಸಿನಿಮಾ ಘೋಷಣೆ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ ಅವರ ‘ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಘೋಷಣೆಯಾಗಿದೆ.
ಸದ್ಯ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಚಿತ್ರೀಕರಣದಲ್ಲಿ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ.
ಈ ಚಿತ್ರ ಸಂದೀಪ್ ಸಿಂಗ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. 2027ರ ಜನವರಿ 21ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಸಂದೀಪ್ ಸಿಂಗ್ ಅವರು 2024ರ ಫೆಬ್ರುವರಿ 16ರಂದು ಈ ಸಿನಿಮಾವನ್ನು ಘೋಷಿಸಿದ್ದರು. ಹಿಂದಿ, ಮರಾಠಿ, ಕನ್ನಡ, ತಮಿಳು ಸೇರಿ ಆರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ರಣ್ದೀಪ್ ಹೂಡ ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿದ್ದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ನಿರ್ಮಾಪಕರಲ್ಲಿ ಸಂದೀಪ್ ಸಿಂಗ್ ಒಬ್ಬರಾಗಿದ್ದರು. ಶಿವಾಜಿ ಮಹಾರಾಜ್ ಪತ್ನಿಯ ಪಾತ್ರದಲ್ಲಿ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳಾದ ಝಾನೈ ಭೋಸ್ಲೆ ನಟಿಸಲಿದ್ದಾರೆ.