ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆ ಮುಗಿದು, ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಒಬ್ಬರಿಗೆ ಒಬ್ಬ ಹುದ್ದೆ ಎನ್ನುವ ಪ್ರಕಾರ, ಕೆಪಿಸಿಸಿ ಅಧ್ಯಕ್ಷ ಹುದ್ದೆಯಿಂದ ಡಿ.ಕೆ.ಶಿವಕುಮಾರ್ ಕೆಳಗೆ ಇಳಿಯಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಬೇರೆ ಬೇರೆ ಕಾರಣದಿಂದ ಆ ಪ್ರಕ್ರಿಯೆ ಮುಂದಕ್ಕೆ ಹೋಗುತ್ತಲೇ ಇತ್ತು. ಈಗ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಸಚಿವ ಸಂಪುಟ ವಿಸ್ತರಣೆಯ ಸುದ್ದಿ ಮತ್ತೆ ಮುನ್ನಲೆಗೆ ಬರುತ್ತಿದೆ.
ಸದ್ಯದಲ್ಲೇ ಅಂದರೆ ಮುಂಬರುವ ಸಂಕ್ರಾಂತಿಯ ಒಳಗೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿಗೆ ಹೊಸ ಅಧ್ಯಕ್ಷರು ಬರುವುದು ಖಾತ್ರಿ ಎಂದು ಹೇಳಲಾಗುತ್ತಿದೆ. ಹೆಚ್ಚುವರಿ ಡಿಸಿಎಂ ಸೃಷ್ಟಿಯ ವಿಚಾರ ರಾಜ್ಯ ರಾಜಕೀಯದಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದ ವೇಳೆ, ಹಲವು ನಾಯಕರು ಕೆಪಿಸಿಸಿ ಅಧ್ಯಕ್ಷರಿಗೆ ಕೌಂಟರ್ ಕೊಡಬೇಕು ಎನ್ನುವ ಆಯಾಮದಲ್ಲಿ ನಾನೂ ಆಕಾಂಕ್ಷಿ ಎಂದು ಹೇಳಿದ್ದರು. ಅದರಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಕೂಡಾ ಒಬ್ಬರು. ನನಗೆ ಅಧ್ಯಕ್ಷ ಹುದ್ದೆ ಕೊಡುವುದಾದರೆ, ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ದ ಎನ್ನುವ ಮಾತನ್ನು ರಾಜಣ್ಣ ಆಡಿದ್ದರು. ಸಿಎಂ ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ರಾಜಣ್ಣ ಅವರ ಹೆಸರು, ಸದ್ಯ ರೇಸಿನಲ್ಲಿರುವ ಇಬ್ಬರ ಪೈಕಿ ಇಲ್ಲ ಎನ್ನುವುದು ಖಾತ್ರಿಯಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲಾ ಕೆಲವು ತಿಂಗಳ ಹಿಂದೆ ರಾಜ್ಯದ ಎಲ್ಲಾ ಸಚಿವರಿಗೆ ತಮ್ಮತಮ್ಮ ಕಾರ್ಯಾಲಯದ ಕೆಲಸ ಮತ್ತು ಒಟ್ಟಾರೆ ಅಭಿಪ್ರಾಯದ ಬಗ್ಗೆ ವಿವರಣೆಯನ್ನು ಕೇಳಿದ್ದರು. ಆದರೆ, ಕೆಲವರು ಹೊರತಾಗಿ ಯಾರೂ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಈಗ, ಉಪ ಚುನಾವಣೆ ಮುಗಿದಿರುವುದರಿಂದ ಅಧ್ಯಕ್ಷ ಹುದ್ದೆಯ ಪ್ರಕ್ರಿಯೆಯನ್ನು ಮುಗಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ಪಕ್ಷನಿಷ್ಠೆ ತೋರಿರುವರು ಮತ್ತು ಜಾತಿ ಆಧಾರಿತವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
ಅರಣ್ಯ ಸಚಿವ ಮತ್ತು ಲಿಂಗಾಯತ ಸಮುದಾಯದ ಈಶ್ವರ ಖಂಡ್ರೆ ಮತ್ತು ಲೋಕೊಪಯೋಗಿ ಇಲಾಖೆಯ ಸಚಿವ ಮತ್ತು ವಾಲ್ಮೀಕಿ ಸಮುದಾಯದ ಸತೀಶ್ ಜಾರಕಿಹೊಳಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಆದರೆ, ಇಬ್ಬರೂ ನಾಯಕರು ಕೆಲವು ದಿನಗಳ ಮಟ್ಟಿಗೆ, ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಜೊತೆಗೆ, ಸಚಿವ ಸ್ಥಾನದಲ್ಲೂ ಮುಂದುವರಿಯುವ ಇರಾದೆಯನ್ನು ವ್ಯಕ್ತ ಪಡಿಸುತ್ತಿರುವುದು ಹೈಕಮಾಂಡ್ ಈ ವಿಚಾರದಲ್ಲಿ ಮತ್ತೆ ಚಿಂತನೆ ನಡೆಸುವಂತೆ ಮಾಡಿದೆ. ಡಿ.ಕೆ.ಶಿವಕುಮಾರ್ ಅವರು ಸುಮಾರು ಒಂದೂವರೆ ವರ್ಷದಿಂದ ಎರಡೂ ಹುದ್ದೆಯನ್ನು ನಿಭಾಯಿಸುತ್ತಿಲ್ಲವೇ ಎನ್ನುವುದು ಇವರ ವಾದ ಎಂದು ಹೇಳಲಾಗುತ್ತಿದೆ.