ಬೆಳಗಾವಿ :
ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ 67 ನೇ ಕರ್ನಾಟಕ ರಾಜ್ಯೋತ್ಸವ ಮಂಗಳವಾರ ಸಂಭ್ರಮದಿಂದ ನೆರವೇರಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ಪಿ.ಜಿ. ಕೆಂಪಣ್ಣವರ ಮಾತನಾಡಿ, ಕನ್ನಡ ಭಾಷೆ ಸಾಹಿತ್ಯಕ್ಕೆ ಬಹಳ ಪ್ರಾಚೀನ ಇತಿಹಾಸ ಇದೆ. ಎರಡು ಸಾವಿರ ವರ್ಷಗಳ ಭವ್ಯ ಪರಂಪರೆ ಸದ್ಯಕ್ಕೆ ಕಾಣಸಿಗುತ್ತದೆ. ಕನ್ನಡದಲ್ಲಿ ಲಭಿಸಿರುವ ಹಲ್ಮಿಡಿ ಶಾಸನ ಅತ್ಯಂತ ಪುರಾತನ ಶಾಸನ ಎಂದೆನಿಸಿದರೂ ತಾಳಗುಂದ ಸೇರಿದಂತೆ ಹಲವು ಶಾಸನಗಳು ಅತ್ಯಂತ ಪ್ರಾಚೀನವಾಗಿದ್ದು ಕನ್ನಡ ಭಾಷೆಗೆ ಇರುವ ಭವ್ಯತೆಯನ್ನು ಸಾಕ್ಷೀಕರಿಸುತ್ತವೆ. ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು 1956 ರಲ್ಲಿ ಭಾಷಾ ಪ್ರಾಂತ್ಯವಾಗಿ ಮೊದಲಿಗೆ ಮೈಸೂರು ಹೆಸರಿನಲ್ಲಿ ಅಸ್ತಿತ್ವಕ್ಕೆ ತರಲಾಯಿತು. ನಂತರ ಕರ್ನಾಟಕ ಎಂಬ ಹೆಸರಿನಲ್ಲಿ ಮರುನಾಮಕರಣ ಮಾಡಲಾಯಿತು ಎಂದು ಹೇಳಿದರು.
ಉಜ್ವಲ ಭಾಷಾ ಇತಿಹಾಸ, ಪರಂಪರೆ ಹೊಂದಿರುವ ಕನ್ನಡವನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಹಲವು ಸವಾಲು ಎದುರಾಗಿದ್ದರೂ ಅವುಗಳನ್ನು ಎದುರಿಸಿ ಭಾಷೆಯನ್ನು ಪ್ರಬಲವಾಗಿ ಕಟ್ಟುವ ಕೆಲಸಕ್ಕೆ ನಾವೆಲ್ಲ ಮುಂದಾಗಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಎ.ಎಚ್. ಹವಾಲ್ದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಶಿಲ್ಪಾ ರಾಯ್ಕರ್ ಕಾರ್ಯಕ್ರಮ ಆಯೋಜಿಸಿದ್ದರು. ಸ್ನೇಹಾ ಕುಲಕರ್ಣಿ ಪ್ರಾರ್ಥಿಸಿದರು. ಪ್ರೊ.ಅಶ್ವಿನಿ ಪರಬ್ ಸ್ವಾಗತ ಹಾಗೂ ಪರಿಚಯಿಸಿದರು. ಪ್ರೊ. ಎಸ್. ಎಸ್. ಹೆಗ್ಡೆ, ಪ್ರೊ.ಎಂ. ಎಸ್. ಕುಲಕರ್ಣಿ ಕನ್ನಡ ಗೀತೆ ಹಾಡಿದರು. ಪ್ರೊ. ಚೇತನ ಕುಮಾರ್ ವಂದಿಸಿದರು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.