ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದರ ಹಿಂದಿನ ರೂವಾರಿ ಆರ್ ಎಸ್ ಎಸ್ ಎನ್ನುವುದು ಇದೀಗ ಬಹಿರಂಗವಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆರ್ ಎಸ್ ಎಸ್ ಈ ಬಾರಿ ಬಿಜೆಪಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಲಿಲ್ಲ. ಜೊತೆಗೆ ಚುನಾವಣೆಯಲ್ಲೂ ಬಿಜೆಪಿ ಜೊತೆಗೆ ಹೆಜ್ಜೆ ಹಾಕಿರಲಿಲ್ಲ. ಇದರಿಂದ ಬಿಜೆಪಿ ಒಂದೇ ಬಹುಮತ ಸಾಧಿಸಲು ಸಾಧ್ಯವಾಗದೆ ಮೈತ್ರಿಕೂಟದ ನೆರವಿನಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಂತಾಯಿತು. ಆದರೆ, ಆರು ತಿಂಗಳ ಅವಧಿಯಲ್ಲೇ ಮತ್ತೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಹಿಂದಿನ ವೈಮನಸ್ಸು ಮರೆತು ಒಂದಾಗಿರುವುದು ಸ್ಪಷ್ಟವಾಗಿದೆ. ಅದರಲ್ಲೂ ವಿಧಾನ ಸಭಾ ಚುನಾವಣೆ ಮುಗಿಯುತ್ತಿದ್ದಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಡಿಸಿಎಂ ಆಗಿರುವ ದೇವೇಂದ್ರ ಫಡ್ನವಿಸ್ ಅವರು ಆರ್ ಎಸ್ ಎಸ್ ಪರಮೋಚ್ಚ ನಾಯಕ ಮೋಹನ ಭಾಗವತ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಅವರಿಗೆ ಅಭಿನಂದನೆ ಸಲ್ಲಿಸಿರುವುದು ಇಡೀ ಚುನಾವಣೆ ಹಿಂದೆ ಆರೆಸ್ಸೆಸ್ ಇದೆ ಎನ್ನುವುದು ಸಾಬೀತಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವನ್ನು ಧ್ವಂಸ ಮಾಡಿದೆ. ಈ ಗೆಲುವಿನ ಹಿಂದೆ ಆರ್ ಎಸ್ ಎಸ್ ರಣತಂತ್ರ ಈಗ ಮುನ್ನೆಲೆಗೆ ಬಂದಿದೆ. ಹರ್ ಘರ್ ಸಂವಿಧಾನ ಅಭಿಯಾನ, ಸಣ್ಣ ಪುಟ್ಟ ಜಾತಿಗಳ ಒಗ್ಗೂಡಿಸುವಿಕೆ , 60 ಸಾವಿರಕ್ಕೂ ಹೆಚ್ಚು ಸಭೆ, ದಲಿತರ ಮನೆ ಮನೆ ಭೇಟಿ ಜೊತೆಗೆ ಲವ್ ಜಿಹಾದ್ನಿಂದ ಏನಾಗುತ್ತಿದೆ? ವಕ್ಸ್ ಬೋರ್ಡ್ ಹೇಗೆ ಜಾಗ ಕಬಳಿಸುತ್ತಿದೆ ಎಂಬುದರ ಕುರಿತು ಆರ್ ಎಸ್ ಎಸ್ ಕರಪತ್ರ ಹಂಚಿತ್ತು. ಇವೆಲ್ಲದರ ಫಲವಾಗಿ ಎನ್ ಡಿಎ ಭರ್ಜರಿಯಾಗಿ ಗೆದ್ದು ಬೀಗಿದೆ.
ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರ 48 ಕ್ಷೇತ್ರಗಳ ಪೈಕಿ ಮಹಾಯುತಿ ಕೇವಲ 17 ಸ್ಥಾನ ಪಡೆದು ಕಳಪೆ ಪ್ರದರ್ಶನ ತೋರಿತ್ತು. ಆದರೆ ಇದಾದ ಆರೇ ತಿಂಗಳಲ್ಲಿ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಆ ಸೋಲನ್ನು ಮಹಾಯುತಿ ಹಿಮ್ಮೆಟ್ಟಿಸಿದೆ. ಇದಕ್ಕೆ ಆರೆಸ್ಸೆಸ್ ಕೊಡುಗೆ ಪ್ರಧಾನವಾಗಿದೆ. ನಗರಗಳಲ್ಲಿ ಹೆಚ್ಚಾಗಿ ಬಿಜೆಪಿ ಪರ ಒಲವಿದ್ದರೂ ಮತದಾರರು ಮತಗಟ್ಟೆಗೆ ಹೋಗುವುದು ಅಪರೂಪ. ಹೀಗಾಗಿ ನಗರಗಳಲ್ಲಿ ಮತದಾನ ಕಡಿಮೆ ಆಗುತ್ತಿದೆ ಎಂಬುದನ್ನು ಮನಗಂಡ ಆರೆಸ್ಸೆಸ್ ಅನೇಕ ನಗರಗಳಲ್ಲಿ ಮನೆ-ಮನೆಗೆ ತೆರಳಿ ಮತದಾರರ ಪ್ರೇರೇಪಿಸುವ ಕೆಲಸ ಮಾಡಿತು. ಇದು ಫಲ ನೀಡಿದ್ದು ಬಿಜೆಪಿಗೆ ಉತ್ತಮ ಸ್ಥಾನ ಬರಲು ನಾಂದಿ ಹಾಡಿದೆ. ಇದೇ ವೇಳೆ ಲಡ್ಕಿ ಬಹಿನ್ನಂಥ ಉಚಿತ ಯೋಜನೆ, ಮರಾಠಾ ಕೋಟಾ ವಿವಾದದ ಸೂಕ್ಷ್ಮ ನಿರ್ವಹಣೆ, ಬಹುಸಂಖ್ಯಾತರು ಒಗ್ಗಟ್ಟಿನಿಂದ ಇರಬೇಕು ಎಂಬ ಆಂದೋಲನಗಳು ಲೋಕಸಭೆ ಚುನಾವಣೆಯಲ್ಲಿನ ಮಹಾಯುತಿ ಹಿನ್ನಡೆಯನ್ನು ಹಿಮ್ಮೆಟ್ಟಿಸಿವೆ. ಒಟ್ಟಾರೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಿಜೆಪಿಗೆ ಇನ್ನಿಲ್ಲದ ಬಲವನ್ನು ತಂದು ಕೊಟ್ಟಿದೆ. ಜೊತೆಗೆ ಕೇಂದ್ರದಲ್ಲಿ ಸರಕಾರ ಮುನ್ನೆಡೆಸುತ್ತಿರುವ ನರೇಂದ್ರ ಮೋದಿ ಅವರ ಪಾಲಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬಲು ಕಾರಣವಾಗಿದೆ. ಬಿಜೆಪಿ ಈಗ ಮಹಾರಾಷ್ಟ್ರ ಗೆದ್ದಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯಸಭೆಯಲ್ಲೂ ಬಿಜೆಪಿ ಸ್ಥಾನಗಳು ಹೆಚ್ಚಾಗಲಿವೆ.
ಒಟ್ಟಾರೆ ದೇಶದ ಎರಡನೇ ಅತಿ ದೊಡ್ಡ ರಾಜ್ಯವಾಗಿರುವ ಮಹಾರಾಷ್ಟ್ರ ಚುನಾವಣೆ ಗೆಲುವು ಬಿಜೆಪಿಗೆ ಬಹುದೊಡ್ಡ ದಿಗ್ವಿಜಯ ಎಂದೇ ಬಣ್ಣಿಸಲಾಗುತ್ತಿದೆ.