ಬೆಳಗಾವಿ: ಒಂದು ಕಾಲದಲ್ಲಿ ಬೆಳಗಾವಿಯ ಖ್ಯಾತ ಉದ್ಯಮಿಯಾಗಿದ್ದ ಆನಂದ ಅಪ್ಪುಗೌಡ ಅವರು ಬಿಗ್ ಬಜೆಟ್ ನಲ್ಲಿ ಅದ್ದೂರಿಯಾಗಿ ನಿರ್ಮಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಬರಲಿದೆ. 18 ನೇ ಶತಮಾನದಲ್ಲಿ ಕಿತ್ತೂರು ರಾಣಿ ಚನ್ನಮ್ಮಳ ಬಲಗೈ ಬಂಟನಾಗಿದ್ದ ವೀರಸೇನಾನಿ ಸಂಗೊಳ್ಳಿ ರಾಯಣ್ಣ ಅವರ ಸಾಹಸಗಾಥೆಯನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸಲಾಗಿದ್ದ ಚಿತ್ರವೇ ಸಂಗೋಳ್ಳಿ ರಾಯಣ್ಣ.
ಇದು 2012 ರಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿತ್ತು. ಕಿಚ್ಚ ಸುದೀಪ್ ನಿರೂಪಣೆ ಮಾಡಿದ್ದ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಬ್ರಿಟಿಷರ ವಿರುದ್ಧ ತೊಡೆತಟ್ಟಿ ನಿಂತು ಕೆಚ್ಚೆದೆಯ ವೀರಯೋಧ ಸಂಗೊಳ್ಳಿ ರಾಯಣ್ಣ ಆಗಿ ಅಬ್ಬರಿಸಿದ್ದರು. ಜಯಪ್ರದಾ ರಾಣಿ ಚನ್ನಮ್ಮ ಅವರ ಪಾತ್ರದಲ್ಲಿ ಅಭಿನಯಿಸಿದ್ದರು. ಫಿಲಂ ಫೇರ್ ಸೇರಿ ಹಲವಾರು ಪ್ರಶಸ್ತಿಗಳನ್ನು ಈ ಚಿತ್ರ ತನ್ನದಾಗಿಸಿಕೊಂಡಿತ್ತು. ಇದೀಗ ಅದೇ ಚಿತ್ರ ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ನವೆಂಬರ್ 22ರಂದು ಮರು ಬಿಡುಗಡೆಯಾಗುತ್ತಿದೆ.
ಎಸ್ ಜಿಕೆ ಫಿಲಂಸ್ ಮೂಲಕ ಕೆ.ಬಸವರಾಜ್ ಅವರು ಚಿತ್ರವನ್ನು ರಾಜ್ಯಾದ್ಯಂತ ಮರು ಬಿಡುಗಡೆ ಮಾಡುತ್ತಿದ್ದಾರೆ. ಸ್ವಾಭಿಮಾನದ ಕಿಚ್ಚು ಹೆಚ್ಚಿಸುವ ಸಂಗೊಳ್ಳಿ ರಾಯಣ್ಣನ ಕಥೆಯನ್ನು ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ದರ್ಶನ್ ಅಭಿಮಾನಿಗಳು ಮತ್ತೊಮ್ಮೆ ಕಣ್ತುಂಬಿಸಿಕೊಳ್ಳುವ ಅವಕಾಶ ಲಭಿಸಿದೆ.
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಮಂದಿರದ ಪ್ರವೇಶ ದರದಲ್ಲಿ ಶೇ.50 ರಷ್ಟು ರಿಯಾಯಿತಿ ಇದೆ.
ನಿಕಿತಾ ತುಕ್ರಾಲ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದು, ಶಶಿಕುಮಾರ್, ಮಾಳವಿಕಾ ಅವಿನಾಶ್, ರಮೇಶ ಭಟ್, ದೊಡ್ಡಣ್ಣ, ಶ್ರೀನಿವಾಸ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೇಶವಾದಿತ್ಯ ಚಿತ್ರಕಥೆ ಮತ್ತು ಸಂಭಾಷಣೆ, ರಮೇಶ ಬಾಬು ಛಾಯಾಗ್ರಹಣ, ಹರಿಕೃಷ್ಣ ಅವರ ಸಂಗೀತ ಸಂಯೋಜನೆ, ದೀಪು ಅವರ ಸಂಕಲನ, ರವಿವರ್ಮ, ಪಳನಿರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕೆ ಇದೆ.