ಬೆಳಗಾವಿ: ಬೆಳಗಾವಿಯ ಪ್ರಮುಖ ಶ್ರೀ ಜಗಜ್ಯೋತಿ ಬಸವಣ್ಣರ ವೃತ್ತಕ್ಕೆ ಬಣ್ಣ ಇರಲಿ, ಕನಿಷ್ಠ ಪಕ್ಷ ಸುಣ್ಣ ಬಳಿಯುವ ಕೆಲಸವೂ ಆಗಿಲ್ಲ. ನಾಡಿನ ಸಾಂಸ್ಕೃತಿಕ ನಾಯಕನಿಗೆ ಬೆಳಗಾವಿಯಲ್ಲಿ ಘೋರ ಅವಮಾನ ಮಾಡಲಾಗಿದೆ.
ಬೆಳಗಾವಿ ಮಹಾನಗರ 10 ವರ್ಷಗಳ ಹಿಂದೆ ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆಗೊಂಡಿದೆ. ಆದರೆ, ಈ ಅವಧಿಯಲ್ಲಿ ಬೆಳಗಾವಿ ಎಷ್ಟರಮಟ್ಟಿಗೆ ಸ್ಮಾರ್ಟ್ ಆಗಿದೆ ಎನ್ನುವುದು ಬೆಳಗಾವಿ ಜನತೆಯನ್ನು ಸದಾ ಕಾಡುತ್ತಿರುವ ಪ್ರಶ್ನೆಯಾಗಿದೆ. ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ಎಂದು ಜಗಜ್ಯೋತಿ ಬಸವೇಶ್ವರ ಹೆಸರನ್ನು ಕರ್ನಾಟಕ ಸರ್ಕಾರ ಅತ್ಯಂತ ಹುರುಪಿನಿಂದ ಘೋಷಣೆ ಮಾಡಿದೆ. ಆದರೆ, ಇದೇ ಕರುನಾಡಿನಲ್ಲಿ ಬಸವೇಶ್ವರರ ಹೆಸರಿನಲ್ಲಿರುವ ಪ್ರಮುಖ ವೃತ್ತಕ್ಕೆ ಸೌಂದರ್ಯ ನೀಡಬೇಕು ಎಂಬ ಕನಿಷ್ಠ ಪ್ರಜ್ಞೆಯು ಬೆಳಗಾವಿ ಮಹಾನಗರ ಪಾಲಿಕೆಗೆ ಇಲ್ಲ ಎನ್ನುವುದು ಅತ್ಯಂತ ದುರ್ದೈವದ
ಸಂಗತಿಯಾಗಿದೆ. ಬೆಳಗಾವಿಯ ಬಸವೇಶ್ವರ ವೃತ್ತ ಈಗ ನೈಜ ಸೌಂದರ್ಯ ಕಳೆದುಕೊಂಡಿದ್ದು, ಇದಕ್ಕೆ ನೇರ ಹೊಣೆಯಾಗಿರುವ ಮಹಾನಗರ ಪಾಲಿಕೆಗೆ ಬಸವಾಭಿಮಾನಿಗಳು ಹಿಡಿ ಶಾಪ ಹಾಕುತ್ತಿದ್ದಾರೆ.
ಬಸವೇಶ್ವರ ವೃತ್ತ ಎಂದು ಹೆಮ್ಮೆಯಿಂದ ಕರೆಸಿಕೊಳ್ಳಬೇಕಾಗಿದ್ದ ಈ ವೃತ್ತ ಬೇರೆ ಬೇರೆ ಹೆಸರುಗಳಿಂದ ಕರೆದುಕೊಳ್ಳುತ್ತಿದೆ. ಇದಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಗಳ ನೇರ ಹೊಣೆಯಾಗಿದೆ. ಯಾಕೆಂದರೆ ಈ ಪ್ರಮುಖ ಪ್ರದೇಶವನ್ನು ಸೂಚಿಸುವ ಹಾಗೂ ಗುರುತಿಸಲು ಇಲ್ಲಿ ಯಾವುದೇ ನಾಮಫಲಕಗಳನ್ನು ಹಾಕಿಲ್ಲ. ಹಾಕಿದ್ದರೂ ಸಹ ಅತ್ಯಂತ ಶಿಥಿಲಾವಸ್ಥೆಗೆ ತಲುಪಿವೆ
ಬಸವೇಶ್ವರ ವೃತ್ತ ಬೆಳಗಾವಿಯ ಪ್ರಮುಖವಾದ ವೃತ್ತ ಎಂದು ಗುರುತಿಸಿಕೊಂಡಿದ್ದರೂ ಅದರ ಸೊಬಗಿಗೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಸಕ್ತಿ ತಾಳದೆ ಇರುವುದು ಬಸವ ಅಭಿಮಾನಿಗಳ ತೀವ್ರ ನಿರಾಶೆಗೆ ಕಾರಣವಾಗಿದೆ.
ಜಗಜ್ಯೋತಿ ಬಸವೇಶ್ವರರು ಕಾಯಕವೇ ಕೈಲಾಸ ಎಂದು ಜಗತ್ತಿಗೆ ಸಾರಿದರು. ಆದರೆ, ಅವರ ಶ್ರೇಷ್ಠ ವಚನಗಳು ಹಾಗೂ ಯಾವುದೇ ಸಂದೇಶಗಳು ಈ ಪ್ರದೇಶದಲ್ಲಿರುವ ಉದ್ಯಾನ ಸಹ ಸಹಿತ ಇಲ್ಲೆಲ್ಲೂ ಬರೆಯದೇ ಇರುವುದು ಸೋಜಿಗ. ಬೆಳಗಾವಿ ನಗರದ ವಿವಿಧ ಪ್ರದೇಶಗಳಿಗೆ ಸಂಧಿಸುವ ಅತ್ಯಂತ ಮಹತ್ವದ ಪ್ರದೇಶ ಇದಾಗಿ ಗುರುತಿಸಿಕೊಂಡಿದೆ. ಆದರೆ, ಈ ವೃತ್ತಕ್ಕೆ ಸುಣ್ಣ ಬಣ್ಣ ಬಳಿಯಲು ಸಹ ಮಹಾನಗರ ಪಾಲಿಕೆಗೆ ವರ್ಷಕ್ಕೆ ಒಂದು ಸಲ ಸಹ ಸಮಯ ಸಿಗದೇ ಇರುವುದು ದುರಂತ ಎನ್ನಬಹುದು.
ಇದೇ ವರ್ಷ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಮಹಾ ಅಧಿವೇಶನದಲ್ಲಿ ಭಾಗವಹಿಸಿ ನೂರು ವರ್ಷ ಆಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಈ ಕಾರ್ಯಕ್ರಮವನ್ನು ಐತಿಹಾಸಿಕ ರೀತಿಯಲ್ಲಿ ನಡೆಸಲು ಸರಕಾರ ಅಗತ್ಯ ಸಿದ್ಧತೆಗಳನ್ನು ಮಾಡಿದೆ. ಆದರೆ, ಇದೇ ಪ್ರದೇಶದಲ್ಲಿ ಇರುವ ಬಸವೇಶ್ವರ ವೃತ್ತವನ್ನು ಮಾತ್ರ ಮರೆತಿರುವುದು ಘೋರ ದುರಂತ ಎನ್ನಬಹುದು. ಇನ್ನು ಒಂದೂವರೆ ತಿಂಗಳಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನ ನಡೆಯುತ್ತಿದೆ. ಆ ಸಂದರ್ಭದಲ್ಲಿ ಪ್ರತಿ ವರ್ಷ ಅತ್ಯಂತ ಗಡಿಬಿಡಿಯಲ್ಲಿ ರಸ್ತೆಗಳಿಗೆ ಪ್ಯಾಚ್ ವರ್ಕ್ ಹಾಗೂ ಪ್ರಮುಖ ವೃತ್ತಗಳಿಗೆ ಸುಣ್ಣಬಣ್ಣ ಬಳಿಯಲಾಗುತ್ತದೆ. ಆದರೆ, ಅದು ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಮರೆಯಾಗುತ್ತದೆ. ಈ ನಿಟ್ಟಿನಲ್ಲಿ ಬೆಳಗಾವಿ ಬಸವೇಶ್ವರ ವೃತ್ತಕ್ಕೆ ಶಾಶ್ವತವಾದ ನಾಮಫಲಕ ಹಾಗೂ ಈ ವೃತ್ತವನ್ನು ಇನ್ನಷ್ಟು ವೈಭವಯುತವಾಗಿ ಜನರ ಮುಂದೆ ಇಡಲು ಜಿಲ್ಲಾಡಳಿತ ಅಗತ್ಯ ಗಮನ ಹರಿಸಬೇಕು ಎನ್ನುವುದು ಬೆಳಗಾವಿ ಜನತೆಯ ಆಗ್ರಹವಾಗಿದೆ.
—
ಪ್ರಧಾನಿ ನರೇಂದ್ರ ಮೋದಿಯವರೇ ವಿಶ್ವನಾಯಕ ಬಸವೇಶ್ವರರನ್ನು ನೆನೆಯುತ್ತಿರುವಾಗ ಇಲ್ಲಿನ ಜನಪ್ರತಿನಿಧಿಗಳು, ಆಡಳಿತ ಸಾಂಸ್ಕೃತಿಕ ರಾಯಭಾರಿ ಹೆಸರಿನ ಫಲಕವನ್ನಾದರೂ ನಿರ್ವಹಿಸಲು ಆಗದಿರುವುದು ಘೋರ ಅನ್ಯಾಯವೆಂದು ಸ್ಥಳೀಯರು ಜನ ಜೀವಾಳಕ್ಕೆ ಪ್ರತಿಕ್ರಿಯಿಸಿದ್ದಾರೆ.