ಬೆಳಗಾವಿಯ ಜಿ ಎಸ್ ಟಿ ಇ ಇಲಾಖೆಯ ಲಂಚಾವತಾರದ ಕರ್ಮಕಾಂಡದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಬೆಳಗಾವಿ ಜಿಎಸ್ ಟಿ ಇಲಾಖೆ ಎಲ್ಲಿ ಸಕ್ಕರೆ ಮೆಯ್ಯುತ್ತಿದ್ದ ಅಧಿಕಾರಿ ಗಳು ಆಫೀಸಿಗೆ ಬರ ಬರುತ್ತಿದ್ದಂತೆಯೇ ತಮ್ಮ ಕೋಣೆಯಲ್ಲಿದ್ದ ಬ್ಯಾಗಿನಲ್ಲಿ ತುಂಬಿದ ಹಣವನ್ನು ಸಹಿ ಮಾಡದೆ ಕೆಳಗೆ ಓಡೋಡಿ ಒಯ್ಯುತ್ತಿದ್ದ ನೋಟವು “ಜನಜೀವಾಳ”ದ ಪ್ರತಿನಿಧಿಯ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಇನ್ನೂ ಪ್ರತಿದಿನವೂ ಇಲಾಖೆಯಲ್ಲಿ ಕುಡಿತದ ನೋಟವು ಈ ಹಿಂದೆಯೇ ಜನಜೀವಾಳದ ಕ್ಯಾಮೆರಾ ಕಣ್ಣಿಗೆ ಬಿದ್ದು ಉಂಟು ! ಹಿಂದಿನ ಜಂಟಿ ಆಯುಕ್ತರಾದ ಆರ್. ಡಿ. ಮೇಘಣ್ಣವರ ಹಾಗೂ ಡಿಸಿ ಶ್ರೀಶೈಲ ಬಿದರಕುಂದಿ ಅವರು ಕೆಲ ಡೀಲಿಂಗ್ ಅಧಿಕಾರಿಗಳನ್ನು ಕರೆಯಿಸಿ ಎಚ್ಚರಿಕೆ ಕೊಟ್ಟರೂ ಅವರ ಹಾದಿ ಹಾಗೆಯೇ ಸಾಗಿದೆ.
ಜನಜೀವಾಳ ಸರ್ಚ್ ಲೈಟ್ ಬೆಳಗಾವಿ :
ಆದಾಯ ತೆರಿಗೆ ಇಲಾಖೆಯ (ಜಿಎಸ್ ಟಿ) ಕಚೇರಿಯ ಬ್ರಹ್ಮಾಂಡ ಭ್ರಷ್ಟಾಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದು ಭ್ರಷ್ಟಾಚಾರದ ತವರು ಮನೆಯಂತಾಗಿದೆ ಎಂಬ ಮಾತು ಇದೀಗ ಸಾರ್ವಜನಿಕ ವಲಯದಲ್ಲಿ ಹಬ್ಬಿದೆ.
ಕಬ್ಬಿಣ, ಗುಟ್ಕಾ ತೆರಿಗೆ ಕಳ್ಳರ ಜತೆ ಬೆಳಗಾವಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ರಾಜಾರೋಷವಾಗಿ ಡೀಲ್ ಕುದುರಿಸಿರುವುದು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸರ್ಕಾರದ ಬೊಕ್ಕಸಕ್ಕೆ ನೇರವಾಗಿ ಹೋಗಬೇಕಾದ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟದೇ ಮೋಸ ಎಸಗುತ್ತಿರುವುದರ ಹಿಂದೆ ಇಲ್ಲಿ ದೊಡ್ಡ ದೊಡ್ಡ ಮಿಕಗಳಿವೆ.
ಇದೀಗ ಸಿ.ಎನ್.ಪಾಟೀಲರು ನಡೆಸಿದ ಲಂಚಾವತಾರ ಮಾತಿಗೆ ಇಡೀ ಕರುನಾಡು ಬೆಚ್ಚಿ ಬಿದ್ದಿದೆ. 3-4 ಲಕ್ಷಗಳ ಡೀಲ್ ಮಾತಿನ ವರಸೆ ಎಂಥವರನ್ನೂ ಅಚ್ಚರಿಗೊಳಗಾಗುವಂತೆ ಮಾಡಿದೆ.
ಒಂದೇ ಎರಡೇ….:
ಕೆಲವೇ ತಿಂಗಳ ಹಿಂದೆ ಕುಡಿದು ವಾಹನ ಅಪಘಾತಪಡಿಸಿದ್ದು ಇನ್ನೂ ಹಚ್ಚ ಹಸಿರಾಗಿದೆ. ಅದನ್ನು “ಜನಜೀವಾಳ” ಬೆಳಕಿಗೆ ತಂದಿತ್ತು. ಶಾಸಕರಿಗೂ ಕ್ಯಾರೇ ಎನ್ನುತ್ತಿಲ್ಲ. ಆದಾಯ ತೆರಿಗೆ ಇಲಾಖೆ ಹಿಟ್ಲರ್ ಶಾಹಿ ನೀತಿ ಅನುಸರಿಸುತ್ತಿದೆ. ಇಲ್ಲಿ ಜನರ ಪ್ರತಿನಿಧಿಗಳ ಮಾತಿಗೂ ಬೆಲೆ ಇಲ್ಲ. ಶಾಸಕರ ಪತ್ರಕ್ಕೆ ಇಲಾಖೆಯ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ.
ಎಲ್ಲದಕ್ಕೂ ಇಲ್ಲಿ ಲಂಚವೇ ದೊಡ್ಡ ರಹದಾರಿ. ಲಂಚ ಇದ್ದರೆ ಮಾತ್ರ ಕೆಲಸ ಸಲೀಸು. ದೊಡ್ಡ ಅಧಿಕಾರಿಯಿಂದ ಹಿಡಿದ ತಳಮಟ್ಟದವರೆಗೂ ಇಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತಿಯೊಬ್ಬರೂ ಲಂಚಕ್ಕೆ ಕೈಯೊಡ್ಡುತ್ತಿರುವುದು ಇಲ್ಲಿ ನಿತ್ಯ ನೂತನ.
ಈ ಬಗ್ಗೆ ಸಮಗ್ರ ಮಾಹಿತಿ ಪಡೆಯಲು “ಜನಜೀವಾಳ” ಜಾರಿ ವಿಭಾಗದ ಜಂಟಿ ಆಯುಕ್ತ ರಮೇಶ್ ಬಾಬು (ಜಾರಿ )ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾದರೂ ಅವರು ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ. ಅವರು ಬಂದ ೧೫ ದಿನದಲ್ಲಿಯೇ ಅಧಿಕಾರಿಗಳ ವಾಹನ ಚಾಲನೆ ನಿಟ್ಟಿನಲ್ಲಿ ಬಾರಿ ಬದಲಾವಣೆ, ತೆರಿಗೆ ಸಂಗ್ರಹದಲ್ಲಿ ಸಭೆ ಮಾಡಿದ್ದಾರೆ ಎಂಬ ಸುದ್ದಿ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದ ಬಾಯಿಂದ ಬಾಯಿಗೆ ಹರಿದಾಡುತ್ತಿವೆ.
ಈ ಲಂಚಾವತಾರಕ್ಕೆ ಬ್ರೇಕ್ ಹಾಕಲು ಕರ್ನಾಟಕ ಲೋಕಾಯುಕ್ತ ಮುಂದಾಗಲಿದೆಯೇ ಕಾದು ನೋಡಬೇಕು. ಜತೆಗೆ ನೂತನವಾಗಿ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾಗಿ ಬಂದಿರುವವರು ತಮ್ಮ ಇಲಾಖೆಯ ಭ್ರಷ್ಟಾಚಾರಕ್ಕೆ ಇನ್ನಾದರೂ ಇತಿಶ್ರೀ ಹಾಡುವರೇ ಕಾದು ನೋಡಬೇಕು.