ಬೆಳಗಾವಿ : ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಶನಿವಾರ ಬೆಳಗಾವಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಕೈಗೊಳ್ಳಲಾಗುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಈಗಾಗಲೇ “ಪ್ರಸಾದ” ಯೋಜನೆಯಡಿಯಲ್ಲಿ ರೂ. 11 ಕೋಟಿ ಅನುದಾನ ಮಂಜೂರು ಆಗಿದ್ದು, ಜಿಲ್ಲೆಯಿಂದ ಕೇಂದ್ರ ಸರ್ಕಾರಕ್ಕೆ DPR ಸಲ್ಲಿಸಲಾಗಿರುವ ಬಗ್ಗೆ ತಿಳಿದು ಬಂದಿದ್ದು, ಈ ಕುರಿತು ಮುಂಬರುವ ದಿನಗಳಲ್ಲಿ ಖುದ್ದಾಗಿ ಕೇಂದ್ರ ಸಚಿವರನ್ನು ಭೇಟಿಯಾಗಿ ಅನುಮೋದನೆಗೆ ವಿನಂತಿಸಲಾಗುವುದು ಎಂದು ತಿಳಿಸಿದರು.
ಇನ್ನೊಂದು ಮಹತ್ವದ ಯೋಜನೆ ಕೇಂದ್ರ ಸರ್ಕಾರ ಯೋಜನೆಯಲ್ಲಿ ಈ ಪುಣ್ಯಕ್ಷೇತ್ರಕ್ಕೆ ಅಂದಾಜು ರೂ.110 ಕೋಟಿ ಅನುದಾನದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಜಿಲ್ಲಾ ಸಮಗ್ರ ವರದಿ (DPR) ತಯಾರಿಸಿದ್ದು ಸಹ ಪ್ರವಾಸೋದ್ಯಮ ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದು ಇದು ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯುವ ವಿಶ್ವಾಸವಿದೆ ಎಂದು ಸಂಸದರು ತಿಳಿಸಿದರು.
ಈ ಪ್ರಸ್ತಾಪಿತ ಯೋಜನೆ ಅಡಿ ಶ್ರೀ ಪುಣ್ಯಕ್ಷೇತ್ರದಲ್ಲಿ ಎಲ್ಲ ಮೂಲಭೂತ ಸೌಕರ್ಯಗಳು ಎಲ್ಲ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಗ್ರ ವರದಿಯನ್ನು ತಯಾರಿಸಿದ್ದು ತಮಗೆ ಅತ್ಯಂತ ಸಂತಸ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ, ಶ್ರೀ ಕ್ಷೇತ್ರ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಆಯುಕ್ತೆ ಗೀತಾ ಕೌವಲಗಿ ಹಾಜರಿದ್ದರು.