ಬೆಳಗಾವಿ : ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲಿ ಸಂತೋಷ ಪದ್ಮಣ್ಣವರ ಅವರ ಸಾವು ಕೋಲಾಹಲವನ್ನೇ ಸೃಷ್ಟಿಸಿದೆ. ಕೊನೆಗೂ ಸಂತೋಷ ಪದ್ಮಣ್ಣವರ ಸಾವು ಸಹಜ ಸಾವು ಅಲ್ಲ. ಅದೊಂದು ಕೊಲೆ ಎಂಬಲ್ಲಿಗೆ ಇಡೀ ಪ್ರಕರಣಕ್ಕೆ ತೆರೆ ಬಿದ್ದಿದೆ.
ಆದರೆ ಈತನ ಸಾವಿನ ಹಿಂದಿನ ಘಟನೆಗಳು ಹಲವಾರು ತೆರೆಮರೆಯ ಘಟನೆಗಳಿಗೆ ಸಾಕ್ಷಿ ಒದಗಿಸಿಕೊಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಇದರಲ್ಲಿ ಯಾರ ತಪ್ಪು ಎನ್ನುವುದು ಮೇಲ್ನೋಟಕ್ಕೆ ತರ್ಕ ಮಾಡಲು ಅಸಾಧ್ಯ ಎನಿಸಿದೆ. ಒಂದು ವಿಧದಲ್ಲಿ ಸಂತೋಷ ಪದ್ಮಣ್ಣವರ ತಪ್ಪು ಮಾಡಿದ್ದಾನೆ ಎನಿಸಿದರೆ, ಮತ್ತೊಂದು ದೃಷ್ಟಿಯಲ್ಲಿ ಆತನ ಪತ್ನಿ ಕೊಲೆಗೈದು ಘೋರ ಅಪರಾಧ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ ಸಂತೋಷ ಪದ್ಮಣ್ಣವರ ಇತ್ತೀಚಿನ ವರ್ಷಗಳಲ್ಲಿ ತನ್ನ ಸಿರಿವಂತಿಕೆಯ ವೈಭವದಿಂದ ಅತ್ಯಂತ ವೈಭೋಗದ ಜೀವನವನ್ನು ನಡೆಸುತ್ತಿದ್ದ ಎನ್ನುವ ರೋಚಕ ಸಂಗತಿ ಆತನ ಕೊಲೆಯಿಂದ ಬಹಿರಂಗವಾಗಿದೆ.
ಸಂತೋಷ ಪದ್ಮಣ್ಣವರ ರಾಜ ವೈಭೋಗದಿಂದ ಜೀವನ ನಡೆಸುತ್ತಿದ್ದ. ಮೈತುಂಬ ಚಿನ್ನಾಭರಣಗಳ ಒಡವೆ ತೊಟ್ಟಿರುವುದು ಆತನ ಸಿರಿವಂತಿಕೆಗೆ ಹಿಡಿದ ಕೈಗಡಿಯನ್ನಬಹುದು. ಜೊತೆಗೆ ಆತ ಹತ್ತು ಹಲವು ವಹಿವಾಟು ನಡೆಸುತ್ತಿದ್ದ. ಅವುಗಳಿಂದ ಕೈತುಂಬ ಸಂಪಾದನೆ ಮಾಡುತ್ತಿದ್ದ.
ಜೊತೆಗೆ ಹಲವಾರು ವ್ಯಸನಗಳಿಗೂ ಆತ ಅಂಟಿಕೊಂಡಿದ್ದ. ಇದರಿಂದ ಆತ ಹೊರಬರುವುದು ಕಷ್ಟ ಎಂಬ ಸತ್ಯ ಕೊನೆಗೂ ಬಯಲಾಗಿದೆ.
ಸಂತೋಷ ಪದ್ಮಣ್ಣವರ ಸಾವಿನ ನಂತರ ಈಗ ಒಂದೊಂದೇ ಘಟನೆಗಳು ಹೊರಗೆ ಬರಲು ಆರಂಭಿಸಿವೆ. ನಾಗರಿಕರು ಒಂದೊಂದು ವಿಧವಾಗಿ ಆತನ ಕೊಲೆಯನ್ನು ತರ್ಕಿಸಲು ಮುಂದಾಗುತ್ತಿದ್ದಾರೆ.
ಕೋಟ್ಯಾಧೀಶ, ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಸಂತೋಷ ಪದ್ಮಣ್ಣವರ ಕೊಲೆಗೆ ಕಾರಣಗಳೇನು ಎನ್ನುವುದು ಸ್ಪಷ್ಟವಾಗಿ ಎಲ್ಲರಿಂದಲೂ ಗೊತ್ತಾಗಿ ಬಿಟ್ಟಿದೆ. ಅಷ್ಟೇ ಏಕೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರ ಕೈಗೆ ಸಂತೋಷನ ಆ ಆಟದ ಹಳೆಯ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿಬಿಟ್ಟಿವೆ,
ಇಲ್ಲಿ ಪತ್ನಿ ಉಮಾ ಮಾಡಿದ್ದನ್ನು ಯಾರೂ ಸಮರ್ಥಿಸಿಕೊಳ್ಳುವ ಕೆಲಸ ಮಾಡುವುದಿಲ್ಲ. ಆದರೆ ಜೀವಿತಾವಧಿಯಲ್ಲಿ ತನ್ನ ಪತ್ನಿಯ ಸಮ್ಮುಖದಲ್ಲಿಯೇ ಸಂತೋಷ ಮಾಡಬಾರದ್ದನ್ನು ಮಾಡಿದ್ದರಿಂದ ಮಕ್ಕಳ ಮುಂದಿನ ಭವಿಷ್ಯದ ಚಿಂತೆ ಮಾಡಿ ಈ ನಿರ್ಧಾರ ಮಾಡಿರಬಹುದು ಎನ್ನುವ ಮಾತಿದೆ.
ಉಮಾ ಪದ್ಮಣ್ಣವರ ಮೂರು ಮಕ್ಕಳ ತಾಯಿ. ಮೊದಲ ಮಗಳು ಬೆಂಗಳೂರಿನಲ್ಲಿ ಬಿಇ ಓದುತ್ತಿದ್ದರೆ; ಚಿಕ್ಕವರಿಬ್ಬರು ಇಲ್ಲಿಯೇ ಓದುತ್ತಿದ್ದರು.
ಮದುವೆಯಾದ ಹೊಸದರಲ್ಲಿ ಸಂಭಾವಿತನಾಗಿದ್ದ ಸಂತೋಷ ಹಣ ಹೆಚ್ಚಿದಂತೆ ಶೋಕಿಯೂ ಹೆಚ್ಚಿಸಿಕೊಂಡಿದ್ದ. ಇತ್ತೀಚೆಗೆ ಹೆಣ್ಣಿನ ಹುಚ್ಚು ಏರಿಸಿಕೊಂಡಿದ್ದ ಎನ್ನಲಾಗಿದೆ.
ಮೊದಲ ಪತ್ನಿಗೆ ಗೊತ್ತಿಲ್ಲದಂತೆ ಎರಡನೆ ಹೆಂಡತಿಯ ಜತೆಯಲ್ಲಿ ಜಾಸ್ತಿ ಸಮಯ ಕಳೆಯುತ್ತಿದ್ದನು ಎನ್ನುವ ಮಾತಿದೆ. ಅಷ್ಟೇ ಅಲ್ಲ ಅವಳಿಗಾಗಿ ಹಣವನ್ನು ನೀರಿನಂತೆ ವ್ಯಯಿಸುತ್ತಿದ್ದನಂತೆ. ಸಹಜವಾಗಿಯೇ ಆತನ ಈ ಎಲ್ಲ ವರ್ತನೆ ಉಮಾಳನ್ನು ಕಂಗೆಡಿಸಿತ್ತು. ಇದೇ ರೀತಿ ಮುಂದುವರೆದರೆ ತನ್ನ ಮಕ್ಕಳ ಭವಿಷ್ಯದ ಕತೆ ಏನು ಎಂಬ ಆತಂಕ ಹೆಚ್ಚಾಯಿತು. ಇದೇ ಕಾರಣಕ್ಕೆ ತನ್ನ ಗೆಳೆಯನ ಜತೆ ಸೇರಿ ಪತಿಯನ್ನೆ ಪರಂಧಾಮಕ್ಕೆ ಸೇರಿಸಿಬಿಟ್ಟಳು ಎನ್ನುವ ಮಾತು ಕೇಳಿಬರುತ್ತಿದೆ.
ಆದರೆ ವಿಪರ್ಯಾಸವೆಂದರೆ ಯಾರ ಭವಿಷ್ಯದ ಗುಂಗಿನಲ್ಲಿ ಉಮಾ ಈ ಕೊಲೆ ಕೃತ್ಯ ಎಸಗಿದಳೋ? ಅದೇ ಮಗಳು ಈಗ ಅಮ್ಮನನ್ನು ಕಂಬಿಯ ಹಿಂದೆ ಕಳುಹಿಸಿದ್ದಾಳೆ.
ಈ ಪ್ರಶ್ನೆ ಪೊಲೀಸ್ ಇಲಾಖೆ ಅಷ್ಟೇ ಅಲ್ಲ ಬಹುತೇಕರನ್ನು ಕಾಡುತ್ತಿದೆ. ಯಾವ ಹೆಣ್ಣೂ ಸಹಿಸಿಕೊಳ್ಳದ ಅಂತಹ ಚೆಲ್ಲಾಟ ಮತ್ತು ಆತ ಕೊಡುತ್ತಿದ್ದ ಎನ್ನಲಾದ ಕಿರುಕುಳವನ್ನು ತಡೆಯದೇ ಸಂತೋಷನ ಸಂತೋಷವನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಉಮಾ ಬಂದಿರಬಹುದು ಎನ್ನಲಾಗುತ್ತಿದೆ.
ಒಂದು ರೀತಿಯಲ್ಲಿ ಶೋಕಿಲಾಲ್ ಎಂದು ಕರೆಯಿಸಿಕೊಳ್ಳುವ ಸಂತೋಷನಿಗೆ ಹಣದ ಮದವೂ ಇತ್ತು,
ಕಾರಿನಲ್ಲಿ ಹೋಗುವಾಗ ಕೈಯ್ಯಲ್ಲಿ ಸಿಗರೇಟ್ ಹಿಡಿದುಕೊಂಡು ಇದರ ಬೆಲೆ ಕನಿಷ್ಟ 1500 ರೂ, ಇಂತಹವನ್ನು ನಾನು ದಿನಕ್ಕೆ ಹತ್ತು ಸೇದುತ್ತೇನೆ ಎನ್ನುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಕೆಲಸವನ್ನು ಈತ ಮಾಡಿದ್ದನು.
ಕಳೆದ ಕೆಲ ವರ್ಷಗಳ ಹಿಂದೆ ಈತನ ಮನೆಯ ಕಳ್ಳತನ ಪ್ರಕರಣದಲ್ಲಿ ಕಳೆದುಹೋಗಿದ್ದ ಚಿನ್ನಾಭರಣವನ್ನು ವಸೂಲಿ ಮಾಡಿಕೊಡಲಿಲ್ಲ ಎನ್ನುವ ಕಾರಣದಿಂದ ಪೊಲೀಸ್ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೆಟ್ಟದಾಗಿ ಪೋಸ್ಟ್ ಮಾಡುತ್ತಿದ್ದನು.
ಅಕ್ಟೋಬರ್ 9 ರಂದು ಮನೆಯಲ್ಲಿಯೇ ಸಂತೋಷನ ಕೊಲೆಯಾಗಿದೆ, ಆದರೆ ಇದೆಲ್ಲ ಹೊರಗಿನವರಿಗೆ ಗೊತ್ತಾಗಬಾರದು ಎನ್ನುವ ಉದ್ದೇಶದಿಂದ ಆತನ ಕಣ್ಣುಗಳನ್ನು ದಾನ ಮಾಡಿದ್ದರು.
ಆದರೆ ಬೆಂಗಳೂರಿನಿಂದ ಬಂದ ಮಗಳು ಸಂಜನಾ ತನ್ನ ತಂದೆಯ ಕೊನೆಯ ಕ್ಷಣವನ್ನು ನೋಡಲು ಸಿಸಿಟಿವಿ ನೋಡಲು ಮುಂದಾಗಾಗ ಸಾವಿನ ಅಸಲಿಯತ್ತು ತೆರೆದುಕೊಂಡಿತು. ಈಗ ಉಮಾ ತನ್ನಮಕ್ಕಳನ್ನು ಅನಾಥರನ್ನಾಗಿ ಮಾಡಿ ಜೈಲು ಕಂಬಿ ಎಣಿಸಬೇಕಾದ ಪರಿಸ್ಥಿತಿ ಬಂದಿದೆ. ಒಟ್ಟಾರೆ ಸಂತೋಷ ಪದ್ಮಣ್ಣವರ ದಶಕಗಳ ಕಾಲ ಅತ್ಯಂತ ವಿಲಾಸಿ ಜೀವನ ನಡೆಸುತ್ತಿದ್ದ. ಕೊನೆಗೂ ಅದೇ ಅವನಿಗೆ ಎರವಾಗಿರುವುದು ಮಾತ್ರ ದುರಂತ.