ಜನಜೀವಾಳ ಸರ್ಚ್ ಲೈಟ್ : ಬೆಳಗಾವಿ- ಬೆಳಗಾವಿಯ ಖ್ಯಾತ ಗುತ್ತಿಗೆದಾರ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮಣ್ಣವರ ಅವರ ಅಕಾಲಿಕ ಸಾವು ಇದೀಗ ಬೆಳಗಾವಿಯನ್ನೇ ಬೆಚ್ಚಿ ಬೀಳಿಸಿದೆ. ಇಷ್ಟಕ್ಕೂ ಅವರ ಧರ್ಮಪತ್ನಿ ನೇರವಾಗಿ ಕೊಲೆಯಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ಇದು ಅಸಹಜ ಸಾವಲ್ಲ, ಕೊಲೆ ಎಂದು ನಿರ್ಧರಿಸುವ ಹಂತಕ್ಕೆ ಬಂದಿದ್ದಾರೆ. ಇದಕ್ಕೆ ಪೂರಕವಾಗುವ ಸಾಕ್ಷಿಗಳು ಇದೀಗ ಲಭಿಸುತ್ತಿವೆ.
ತನ್ನ ಪತಿ ದೇವರನ್ನೇ ಕೊಲೆಗೈದಿರುವ ಉಮಾ ಪದ್ಮಣ್ಣವರ ಅಲಿಯಾಸ್ ಸರಿತಾ ಎಮ್ಮಿ ಮೂಲತಃ ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದವಳು. 2001 ರಿಂದ 2004 ರವರೆಗೆ ಬೆಳಗಾವಿಯ ಪ್ರತಿಷ್ಠಿತ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡಿದವಳು. ಕಾಲೇಜು ಓದುತ್ತಿರುವಾಗಲೇ ಬಿ.ಎ ಅಂತಿಮದಲ್ಲಿ ಸಂತೋಷ ಪದ್ಮಣ್ಣವರ ಅವರ ಜೊತೆ ಮನೆಯವರು ಮದುವೆ ಮಾಡಲು ನಿರ್ಧರಿಸಿದ್ದರು. ಸ್ನೇಹ ಕುದುರಿದೆ. ನಂತರ ಕಾಲೇಜು ಜೀವನ ಮುಗಿಸಿ 2004 ರಲ್ಲಿ ಕೇವಲ ಎರಡು ತಿಂಗಳಲ್ಲೇ ಮದುವೆ ಆಗುವ ಮೂಲಕ ಇವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಹಿನ್ನೆಲೆ ದೊರೆಯುತ್ತದೆ.
ಕಾಲೇಜಿನಲ್ಲಿ ಸರಿತಾ (ಉಮಾ)ಓದುತ್ತಿದ್ದಾಗಲೇ ಸಂತೋಷ ಆಕೆಯನ್ನು ಭೇಟಿಯಾಗಲು ಆಕೆ ಉಳಿದುಕೊಳ್ಳುತ್ತಿದ್ದ ಪಿಜಿ ವಸತಿಗೃಹದ ಸನಿಹ ಬರುತ್ತಿದ್ದ ಎನ್ನಲಾಗಿದೆ.
ಕಾಲೇಜು ದಿನಗಳಲ್ಲಿ ಸರಿತಾ ಎಮ್ಮಿ ಆಲಿಯಾಸ್ ಉಮಾ ಬಹಳ ಸಂಭಾವಿತೆಯಾಗಿ ಗುರುತಿಸಿ ಕೊಂಡಿದ್ದಳು. ಯಾರ ಜೊತೆಯೂ ಅನಾವಶ್ಯಕ ಮಾತನಾಡುತ್ತಿರಲಿಲ್ಲ. ಅಷ್ಟೊಂದು ಸಭ್ಯ ಸ್ವಭಾವದ ಹುಡುಗಿಯಾಗಿ ಗುರುತಿಸಿಕೊಂಡಿದ್ದಳು. ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಆಕೆ ಬಯಸಿದಂತೆ, ಕೋಟ್ಯಾಧಿಪತಿಯನ್ನು ಮದುವೆಯಾದರೂ ಇವಳ ಜೀವನ ‘ಸಂತೋಷ’ದಾಯಕವಾಗಿರಲಿಲ್ಲ.
ಮೃತಪಟ್ಟಿರುವ ಸಂತೋಷನ ಅತಿಯಾದ ಕಾಟ ತಾಳಲಾರದೆ ಕೊನೆಗೂ ಇದಕ್ಕೊಂದು ಗತಿ ಕಾಣಿಸಬೇಕು ಎಂಬ ನಿರ್ಧಾರಕ್ಕೆ ಬಂದು ಕೊಲೆ ಮಾಡಿರಬಹುದು ಎಂಬ ವದಂತಿ ಈಗ ಹರಡಿದೆ. ಸಾರ್ವಜನಿಕ ವಲಯದಲ್ಲಿ ಸಂತೋಷನ ಬಗ್ಗೆ ಉತ್ತಮ ಅಭಿಪ್ರಾಯವಿರಲಿಲ್ಲ. ಸಾಕಷ್ಟು ಕೆಟ್ಟ ಚಟಗಳಿಗೆ ಅಂಟಿಕೊಂಡಿದ್ದ. ಈತನ ವರ್ತನೆಗಳಿಂದ ನೊಂದಿದ್ದ ಪತ್ನಿ ಕೊನೆಗೂ ಗಂಡನಿಗೆ ಅಂತ್ಯ ಕಾಣಿಸಲು ಮುಂದಾಗಿರಬಹುದೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಸಂತೋಷ ಹಾಗೂ ಉಮಾ ಅವರ ಪುತ್ರಿ ಸಂಜನಾ ಬೆಳಗಾವಿಯ ಸೇಂಟ್ ಫಾಲ್ಸ್ ನಲ್ಲಿ ಎಸ್ ಎಸ್ ಎಲ್ ಸಿ, ಕಾರ್ಕಳದಲ್ಲಿ ಪಿಯುಸಿ ಮತ್ತು ಬೆಂಗಳೂರು ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾಳೆ.
ಸಂತೋಷ ಪದ್ಮಣ್ಣವರ ಬೆಳಗಾವಿಯಲ್ಲಿ ಅತ್ಯಂತ ಚಿರಪರಿಚಿತ ವ್ಯಕ್ತಿ. ವಾಟರ್ ಟ್ಯಾಂಕ್ ಮೂಲಕ ನೀರು ಪೂರೈಸುತಿದ್ದರು. ಜೊತೆಗೆ ಹತ್ತು ಹಲವು ಗುತ್ತಿಗೆ ನಡೆಸುವ ಮೂಲಕ ಖ್ಯಾತ ಗುತ್ತಿಗೆದಾರರಾಗಿ ಹೊರಹೊಮ್ಮಿದ್ದರು. ಇವರ ಸಮಾಜಸೇವೆಯ ಬ್ಯಾನರ್ ಗಳು ಆಗಾಗ ಬೆಳಗಾವಿಯಲ್ಲಿ ರಾರಾಜಿಸುತ್ತಿತ್ತು. ಈ ಮೂಲಕ ಸಾಕಷ್ಟು ಹಣ ಗಳಿಸಿ ಅಗರ್ಭ ಶ್ರೀಮಂತರಾಗಿ ಹೊರಹೊಮ್ಮಿದ್ದರು. ಆದರೆ ಕಾಲನ ಹೊಡೆತಕ್ಕೆ ಸಿಕ್ಕು ಅವರ ಜೀವನ ಇದೀಗ ಅಂತ್ಯವಾಗಿದೆ. ಎಲ್ಲದಕ್ಕೂ ಕೊನೆ ಎಂಬುದಿದೆ ಅದರಂತೆ ಇದೀಗ ಸಂತೋಷ ಪದ್ಮಣ್ಣವರ ಅವರ ಜೀವನಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ.