ನವದೆಹಲಿ: ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರವು ತನ್ನ ಒಂದು ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ಒಟ್ಟು ತುಟ್ಟಿ ಭತ್ಯೆ ಮೂಲವೇತನದ ಶೇ. 53%ರಷ್ಟು ಹೆಚ್ಚಿದಂತಾಗಿದೆ.
ಬುಧವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿ ಭತ್ಯೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಹೊಸ ದರವು ಜುಲೈ 1, 2024 ರಿಂದ ಜಾರಿಗೆ ಬರಲಿದೆ. ದೀಪಾವಳಿಯ ವಾರಗಳ ಮುಂಚೆಯೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಇದು ಹಬ್ಬದ ಋತುವಿನ ಮಧ್ಯೆ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯಾಗಿದೆ.
“ಈ ಹೆಚ್ಚಳವು 7 ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿದೆ” ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಡಿಎ ಮತ್ತು ಡಿಆರ್ ಹೆಚ್ಚಳದಿಂದ ಬೊಕ್ಕಸಕ್ಕೆ ಪ್ರತಿ ವರ್ಷ 9,448.35 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಮತ್ತು ಇದರಿಂದ ಸುಮಾರು 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 64.89 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ ಎಂದು ಸರ್ಕಾರ ಹೇಳಿದೆ.
ಹೆಚ್ಚುತ್ತಿರುವ ಬೆಲೆಗಳನ್ನು ಸರಿದೂಗಿಸಲು ಸರ್ಕಾರಿ ನೌಕರರಿಗೆ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ವರ್ಷಕ್ಕೆ ಎರಡು ಬಾರಿ ನಿಯತಕಾಲಿಕವಾಗಿ ಪರಿಷ್ಕರಿಸಲಾಗುತ್ತದೆ, ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಈ ಭತ್ಯೆಯನ್ನು ಲೆಕ್ಕಹಾಕಲಾಗುತ್ತದೆ.