ಜನ ಜೀವಾಳ ಜಾಲ :ಬೆಳಗಾವಿ: ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಹಾಗೂ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಎಂ.ಇ. ಶಿವಲಿಂಗ ಮೂರ್ತಿ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಒಂದೂವರೆ ದಶಕದ ಹಿಂದೆ ಅಂದರೆ 2007 ರ ಅವಧಿಯಿಂದ ಬೆಳಗಾವಿಯಲ್ಲಿ ಎಂ.ಇ.ಶಿವಲಿಂಗ ಮೂರ್ತಿ ಅವರು ಸಿಇಒ,ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಚಿರಪರಿಚಿತರಾಗಿದ್ದರು.
ಕೇಂದ್ರ ಸರ್ಕಾರವು ಬೆಳಗಾವಿ ಜಿಪಂ ಸಿಇಒ ಎಂ.ಈ.ಶಿವಲಿಂಗಮೂರ್ತಿಯವರಿಗೆ ಪದೋನ್ನತಿ ನೀಡಿ 1-2-2007 ರಂದು ಆದೇಶ ಆದೇಶ ಹೊರಡಿಸಿತು. ಅಚ್ಚರಿಯ ಸಂಗತಿ ಎಂದರೆ ಬೆಳಗಾವಿಯಲ್ಲಿ ಅವರು 1983 ರಲ್ಲಿ ಪ್ರೊಬೇಷನರಿ ಉಪ ವಿಭಾಗಾಧಿಕಾರಿಯೆಂದು ಅಧಿಕಾರ ಸ್ವೀಕರಿಸಿದ್ದರು. ನಂತರ ಅವರು ಬೆಳಗಾವಿ ಜಿಲ್ಲಾಧಿಕಾರಿಯಾಗಿ ಮೊದಲ ಅಧಿಕಾರ ಸ್ವೀಕರಿಸಿದ್ದು ಯೋಗಾಯೋಗವೇ ಸರಿ.
ಅಂದು ಜನಜೀವಾಳ ಅವರನ್ನು ಮಾತನಾಡಿಸಿದ್ದಾಗ ನನಗೆ ಬಹಳ ದಿನಗಳ ಹಿಂದೆಯೇ ಈ ಹುದ್ದೆ ದೊರಕಬೇಕಾಗಿತ್ತು. ಕಷ್ಟಪಟ್ಟು ಕೆಲಸ ಮಾಡಿದ್ದರ ಪ್ರತಿಫಲ ಸಿಕ್ಕಿದೆ. ನನ್ನ ಕರ್ತವ್ಯವನ್ನು ಇನ್ನೂ ಹೆಚ್ಚು ನಿಷ್ಠೆ, ಉತ್ಸಾಹದಿಂದ ಮುಂದುವರೆಸಲು ಸಿಕ್ಕ ಅರ್ಹ ಪ್ರಶಸ್ತಿ ಇದಾಗಿದೆ. ಇಲಾಖೆಗಳಿರುವುದೇ ಜನರಿಗೋಸ್ಕರ. ಅಂತೆಯೇ ನಾನು ಈ ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವ ಬದಲು ಅವರಿದ್ದಲ್ಲಿಗೆ ಹೋಗಿ ಕೆಲಸ ಮಾಡುವುದು ನನ್ನ ವೈಖರಿ. ಗ್ರಾಮೀಣರ ಸಮಸ್ಯೆ ಅರಿತು ಪರಿಹಾರ ಕೈಗೊಳ್ಳಲು ಜಿಲ್ಲೆಯ ಎಲ್ಲ ಹತ್ತು ತಾಲೂಕು ಪಂಚಾಯ್ತಿಗಳ ಸಭೆಗಳನ್ನು ಗ್ರಾಮಗಳಲ್ಲಿ ಕರೆದು ಹಳ್ಳಿಗಾಡಿನವರ – ಮೂಲಭೂತ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬಯಸುತ್ತೇನೆ ಎಂದು ಅವರು ಅಂದು ಸಂತಸವನ್ನು ‘ಜನಜೀವಾಳ’ದೊಂದಿಗೆ ಹಂಚಿಕೊಂಡಿದ್ದರು.
ಯಾರೀ ಶಿವಲಿಂಗಮೂರ್ತಿ? ಶಿವಮೊಗ್ಗ ಹುಟ್ಟೂರಿನ ಶಿವಲಿಂಗಮೂರ್ತಿಯವರು ಬೆಳಗಾವಿ, ಹುಣಸೂರು, ಬೆಂಗಳೂರುಗಳಲ್ಲಿ ಕಾರ್ಯ ನಿರ್ವಹಿಸಿದವರು. 20-9-2004 ರಿಂದ ಬೆಳಗಾವಿ ಜಿಲ್ಲೆ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಿಮ್ಹಾನ್ಸ ಆಸ್ಪತ್ರೆಯಲ್ಲಿ ನಿಬಂಧಕರಾಗಿ, ಹುಣಸೂರಿನ ವಿಭಾಗಾಧಿಕಾರಿ, ವಿಶೇಷ ಆಯುಕ್ತ ವಿವಿಧ ಶಾಸಕೀಯ ಸಂಚಾಲಕರಾಗಿ ಮಹತ್ವಪೂರ್ಣ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿ ಸಿದ್ದಾರೆ. ಜಂಗಲ್ ಲಾಜ್ಗಳ ವ್ಯವಸ್ಥಾಪಕ ನಿರ್ದೇಶಕ, ಬೆಂಗಳೂರಿನ ವಿಶೇಷ ಜಿಲ್ಲಾಧಿಕಾರಿ, ಗಣೆ ಇಲಾಖೆಯ ಉಪಕಾವ್ಯದರ್ಶಿ, ಆರೋಗ್ಯ ಇಲಾಖೆಯ ಮುಖ್ಯ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿರುವ ಅವರು ಬೆಳಗಾವಿ ಜಿಲ್ಲಾಧಿಕಾರಿ ಗಳಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು.
ಜನಜೀವಾಳದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡುತ್ತಿದ್ದರು. ಅವರ ಸಂದರ್ಶನ ಇಲ್ಲಿದೆ.
ಜನಸಾಮಾನ್ಯರ ಕುಂದುಕೊರತೆ ನಿವಾರಣೆಗೆ ಜಿಲ್ಲಾಡಳಿತದ ತ್ವರಿತ ಕ್ರಮ
ಪ್ರೀಪೇಯ್ಡ್ ಅಟೋ ಸೇವೆ: ಬೆಳಗಾವಿ ಮಹಾನಗರದ ಅಟೋ ರಿಕ್ಷಾ ಪ್ರಯಾಣಿಕರಿಗೆ ಚಾಲಕರಿಂದಾಗುವ ಕಿರುಕುಳ ಇಂದು ನಿನ್ನೆಯದಲ್ಲ. ಅವರು ಮನಬಲ್ಲಂತೆ ಬೇಡುವ ದರವನ್ನು ನೀಡದಿದ್ದರೆ ಕೈ-ಬಾಯಿ ಕಾಳಗಕ್ಕೆ ಸಿದ್ಧರಾಗುತ್ತಾರೆ. ಅಟೋಗಳಿಗೆ ಮೀಟರ್ ಅಳವಡಿಸುವದಂತೂ ದೂರೇ ಉಳಿಯಿತು. ಗ್ರಾಹಕರೊಂದಿಗೆ ಜಗಳಕ್ಕೆ ಸಿದ್ಧರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತವು ನಿರ್ದಿಷ್ಟ ಸ್ಥಳಗಳಿಗೆ ಮೊದಲೇ ನಿಗದಿತ ದರ (ಪ್ರೀಪೇಯ್ಡ್) ಗೊತ್ತುಪಡಿಸಿ ಅಟೋ ಹತ್ತುವಾಗಲೇ ಅದನ್ನು ಕೊಡುವ ಹೊಸ ವ್ಯವಸ್ಥೆಯನ್ನು ಇತ್ತೀಚೆಗೆ ಬಳಕೆಗೆ ತಂದಿದೆ. ಬೆಳಗಾವಿಯ ಉಗಿಬಂಡಿ ನಿಲ್ದಾಣದಿಂದ ಆಟೋದಲ್ಲಿ ಪ್ರಯಾಣಿಸುವವರಿಗೆ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ವ್ಯವಸ್ಥೆಯನ್ನು ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಿಂದಲೂ ಜಾರಿಗೊಳಿಸುವದಕ್ಕಾಗಿ ರಾಜ್ಯ ಸರಕಾರದಿಂದ ಒಪ್ಪಿಗೆ ಪಡೆಯಬೇಕಾಗಿದೆ. ಅದು ದೊರೆತ ಕೂಡಲೇ ಜಾರಿಗೆ ತರಲಾಗುವುದು.
ಬೆಳಗಾವಿಯ ಸಾರ್ವಜನಿಕರಿಗೆ ಕಾಡಿಸಿ, ಪೀಡಿಸುತ್ತಿರುವ ರಿಕ್ಷಾ ದರ, ಕಬ್ಬಿನ ದರ, ಗ್ಯಾಸ್ ಸಮಸ್ಯೆ, ರೇಶನ್ ಕಾರ್ಡ್ಗಳ ಬಗ್ಗೆ ಜನಜೀವಾಳವು ಜಿಲ್ಲಾಧಿಕಾರಿ ಎಂ.ಈ. ಶಿವಲಿಂಗಮೂರ್ತಿಯವರ ಗಮನ ಸೆಳೆದಾಗ ಅವರು ಈ ರೀತಿ ವಿವರ ನೀಡಿದರು.
ಪೂರೈಕೆ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಬಳಕೆಗೆ ತರಲು ಆಹಾರ ಮತ್ತು ನಾಗರಿಕ ಇಲಾಖೆಗೆ ಎಚ್ಚರಿಸಲಾಗಿದೆ. ಅಂತೆಯೇ ಚಿಕ್ಕೋಡಿಯ ಉಗ್ರಾಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗ್ಯಾಸ್ಗಳನ್ನು ಹೊರತೆಗದು ನಿಯಮಪ್ರಕಾರ ಹಂಚಲು ವ್ಯವಸ್ಥೆ ಮಾಡಲಾಯಿತು.
ಬಿ.ಪಿ.ಎಲ್. ಕಾರ್ಡ್ ಹಂಚಿಕೆ: ಬೆಳಗಾವಿ ನಗರದ ಕೆಲವೊಂದು ನಾಗರಿಕರು ಹುಸಿ ಹೆಸರುಗಳನ್ನು ಕಾರ್ಡುಗಳಲ್ಲಿ ನಮೂದಿಸಿ ಇಲಾಖೆಗೆ ವಂಚಿಸುತ್ತಿರುವುದು ಗೊತ್ತಾಗಿದೆ. ಅಂಥವರ ಕಾರ್ಡುಗಳನ್ನು ಮುಟ್ಟುಗೋಲು ಹಾಕಿ ಅವರ ಮೇಲೆ ತೀವ್ರ ಕಾರ್ಯಾಚರಣೆಯ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಪಿಎಲ್ ಕಾರ್ಡುಗಳನ್ನು ಅರ್ಹರಿಗೆ ತಕ್ಷಣ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ರಾಜ್ಯಪಾಲರ ಆದೇಶದಂತೆ ಕೇಂದ್ರ ಸರಕಾರವು ಗೊತ್ತುಪಡಿಸಿದ ದರದಲ್ಲಿ ಕಬ್ಬಿಗೆ ದರ ನೀಡಬೇಕೆಂದು ಎಲ್ಲ ಸಕ್ಕರೆ ಕಾರಖಾನೆಗಳಿಗೆ ಆದೇಶಿಸಲಾಗಿದೆ. ಇದರಿಂದಾಗಿ ತೊಂದರೆ ಅನುಭವಿಸುತ್ತಿದ್ದ ರೈತರಿಗೆ ಸಮಾಧಾನವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳ ಸಭೆ:
ನೀವು ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿದ್ದಾಗ ಬಳಕೆಗೆ ತಂದಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸುವುದನ್ನು ಮುಂದುವರಿಸುತ್ತೀರಾ ಎಂದು ಜನಜೀವಾಳವು ಕೇಳಿದ ಪ್ರಶ್ನೆಗೆ ಅವರು ಇಂತೆಂದರು: ತಾಲೂಕು ಮಟ್ಟದಲ್ಲಿ ಆಡಳಿತ ಚುರುಕುಗೊಳಿಸಲು ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಈಗಾಗಲೇ ಚಿಕ್ಕೋಡಿ, ಅಥಣಿ, ರಾಯಬಾಗ, ಬೆಳಗಾವಿ ಸವದತ್ತಿಗಳಲ್ಲಿ ಸಭೆ ನಡೆಸಿ ಜನರ ಬೇಡಿಕೆಗಳನ್ನು ಅವಲೋಕಿಸಿ ಸರಕಾರದ ಶಾಸನದ ವ್ಯಾಪ್ತಿಯಲ್ಲಿ ಪರಿಹಾರ ನೀಡಲು ಸೂಚಿಸಲಾಗಿದೆ ಎಂದರು.
ಜನತಾದರ್ಶನ: ಕರ್ನಾಟಕದ ರಾಜ್ಯಪಾಲರು ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಜನತಾದರ್ಶನ ಪ್ರತಿ ತಿಂಗಳ ೨ನೆಯ ಶನಿವಾರ ಜಿಲ್ಲಾ ಕೇಂದ್ರದಲ್ಲಿ ನಡೆಸಲು ಈಗಾಗಲೇ ಸೂಚಿಸಿದ್ದಾರೆ. ಸರಕಾರದ ಅಧಿಕೃತ ಆದೇಶ ಕೈಸೇರಿದ ಕೂಡಲೇ ಅದನ್ನು ಕಾರ್ಯಗತ ಗೊಳಿಸಲಾಗುವುದು ಎಂದು ನುಡಿದರು.
ಗ್ಯಾಸ್ ಸಿಲಿಂಡರ್ ಪೂರೈಕೆ: ಬೆಳಗಾವಿ ಜಿಲ್ಲೆ ಮತ್ತು ಮಹಾನಗರದ ಗ್ರಾಹಕರಿಗೆ ಗ್ಯಾಸ್ ಪೂರೈಸುವ ಏಜೆನ್ಸಿಗಳು ವಿನಾಕಾರಣ ಕಿರುಕುಳ ನೀಡಿ ಹೈರಾಣ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅವರ ವಿರುದ್ಧ ಕ್ರಮ ಜರುಗಿಸಲಾಗುವುದು.
ವಿದೇಶ ಪ್ರವಾಸ : ಮೂಲಭೂತ ಸೌಕಯ್ಯಗಳನ್ನು ಪೂರೈಸಿದ ನಂತರವೇ ಕಾವ್ಯರೂಪದಲ್ಲಿ ತರುವದು ಕಟ್ಟುನಿಟ್ಟಿನ ನಿಯಮ ಎಂಬುದು ಮನವರಿಕೆಯಾಯಿತು. ೨೦೨೦ ರ ವರೆಗೂ ಎಲ್ಲವೂ ಪೂರ್ವಯೋಜನೆಯಡಿ ವಿನ್ಯಾಸಗೊಳಿಸಿ ತಯಾರಿಸಿದ ಯೋಜನೆಗಳು ಎಂಬುದು ನಮಗೆ ವಿಸ್ಮಯಕಾರಿಯಾಗಿತ್ತು, ಡ್ಯೂಕ್ ವಿ.ವಿ.ಯು ಮೂರು ವಿ.ವಿ.ಗಳ ಸಂಲಗ್ನ ಕೇಂದ್ರ ವಿವಿಧ ಅಭಿವೃದ್ಧಿ ಸಂಶೋಧನೆಗಳಿಗೆ ಈ ವಿಶ್ವವಿದ್ಯಾಲಯಗಳಿಗೆ ಪ್ರತ್ಯೇಕ ಸರಕಾರಿ ನೆರವು ದೊರೆಯುತ್ತದೆ.
ಬಯೋ ಡಿಜೇಲ ಕಾರಖಾನೆ, ಸೌರಶಕ್ತಿ ಘಟಕಗಳನ್ನು ಕಣ್ಣಾರೆ ಕಾಣುವ ಅವಕಾಶ ಒದಗಿತ್ತು. ನ್ಯೂಯಾರ್ಕ, ವಾಷಿಂಗ್ಟನ್ಗಳಿಗೂ ಬೆಟ್ಟಿ ನೀಡಿದೆ. ಆ ಕಾಲಕ್ಕೆ ಕರ್ನಾಟಕದ ನನ್ನ ಕೆಲ ಸಂಶೋಧನಾ ವಿದ್ಯಾರ್ಥಿಗಳು, ಭಾರತೀಯ ಸೆಂಜಾತರು ಬೆಟ್ಟಿಯಾಗಿದ್ದರು. ಅವರ ಜೊತೆಗೆ ಕೆಲಹೊತ್ತು ಕಾಲ ಕಳೆಯುವ ಸಂದರ್ಭ ಖುಷಿ ನೀಡಿತ್ತು. ಅಲ್ಲಿಯ ರಹದಾರಿಗಳು ಸಂಚಾರ ವ್ಯವಸ್ಥೆಯಂತೂ ಅತ್ಯದ್ಭುತ. ದಾರಿಯಲ್ಲೆಲ್ಲೂ ದ್ವಿಚಕ್ರ ವಾಹನ, ಸೈಕಲ್ಗಳ ಸುಳಿವೇ ಇರುತ್ತಿರಲಿಲ್ಲ. ಕಾರುಗಳು ಉದ್ಯಾನದಲ್ಲಿ ಸಾಗಿದಂತೆ ಸರಾಗವಾಗಿ ಸಂಚರಿಸುತ್ತಿದ್ದವು. ಹೊಸ ಗ್ರಾಮಗಳು ಜನ್ಮತಾಳುವ ಮೊದಲೇ ಅವುಗಳ ಕಟ್ಟುನಿಟ್ಟಾದ ಪೂರ್ವ ಪ್ರಾಥಮಿಕ ಯೋಜನೆಗಳು ರೂಪುಗೊಳ್ಳುವದು ಕಡ್ಡಾಯ. ಗಟ್ಟಿ ಕಸ ವಿಲೇವಾರಿ, ನಗರ ಜೀವನ ಕ್ರಮ, ಶೈಕ್ಷಣಿಕ ಯೋಜನಾ ವರದಿಗಳೆಲ್ಲವೂ ಮಂಜೂರಾದ ಮೇಲೆಯೇ ಅವು ಕಾರರೂಪದಲ್ಲಿ ಬರುವದರಿಂದ ನಮ್ಮಲ್ಲಿಯಂತೆ ಇಕ್ಕಟ್ಟಿನ ಬಿಕ್ಕಟ್ಟನ್ನು ಬಗೆಹರಿಸುವ ಸಮಸ್ಯೆಗೆ ಆಸ್ಪದವೇ ಇಲ್ಲ ಎಂಬುದು ಗಮನಾರ್ಹ ಅಂಶವಾಗಿತ್ತು.
‘ನಮಸ್ಕಾರ’ ಎಂದೊಬ್ಬ ತರಬೇತಿ ನೀಡುವ ಮಹಿಳೆಯ ಉದ್ಧಾರ ಆಕೆಯ ಭಾರತದೊಂದಿಗಿನ ಸಂಬಂಧ, ನಯಾಗರ ಜಲಪಾತದ ಸಾಮಿಪ್ಯಗಳೆಲ್ಲವೂ ನನ್ನ ಆಡಳಿತಾತ್ಮಕ ಸೇವೆಯ ಜೀವನದುದ್ದಕ್ಕೂ ಮಾರ್ಗದರ್ಶಿ ನೇತ್ರ ಸೂತ್ರಗಳಾಗಿ, ಆಡಳಿತದಲ್ಲಿ ಹೊಸ ಜನಪರ ಯೋಜನೆಗಳನ್ನು ತರುವಲ್ಲಿ ಪರಿಣಾಮಕಾರಿಯಾಗಿ ಬೋಧನಾ ಸಾಮಗ್ರಿ ನೀಡಿದ್ದುಂಟು.
ದಿನಾಲು ಲ್ಯಾಪ್ ಟಾಪನ್ನು ಬಗಲಿಗೇರಿಸಿಕೊಂಡು ತರಬೇತಿ ಸ್ಥಳಕ್ಕೆ ಧಾವಿಸುತ್ತಿದ್ದೆ. ಅಲ್ಲಿಯ ಸ್ಮರಣೀಯ ಸ್ಥಳಗಳನ್ನು ಡಿಜಿಟಲ್ ಕ್ಯಾಮರಾಗಳಲ್ಲಿ ಸೆರೆಹಿಡಿದು, ಚಿತ್ರಗಳನ್ನು ಲ್ಯಾಪಟಾಪ್ನಲ್ಲಿ ಸಂಗ್ರಹಿಸಿ ತಂದಿದ್ದೇನೆ. ‘ಜನಜೀವಾಳ’ದ ಓದುಗರಿಗೂ ಕೆಲವೊಂದು ಚಿತ್ರಗಳನ್ನು ಪರಿಚಯಿಸುವೆ ಎಂದು ಹೇಳಿದಾಗ ಅವರ ನಿರಂತರ ಒಂದು ತಾಸಿನ ವರೆಗೆ ಹರಿದ ಅನುಭವದ ಹಿರಿಹೊಳೆ ನಿಜಕ್ಕೂ ನನ್ನನ್ನು ವಿಭಿನ್ನ ಜಗತ್ತಿಗೆ ಕರೆದೊಯ್ದಂತಿತ್ತು.