ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ರಮೇಶ ಕತ್ತಿ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಬ್ಯಾಂಕಿನ 14 ನಿರ್ದೇಶಕರು ರಮೇಶ ಕತ್ತಿ ವಿರುದ್ಧ ಸಿಡಿದೆದ್ದಿದ್ದರು. ಅವರು ಕರೆದ ಸಭೆಗೆ ಗೈರಾಗಿ ಪ್ರತ್ಯೇಕವಾಗಿ ಸಭೆ ನಡೆಸಿ ರಮೇಶ ಕತ್ತಿ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ರಮೇಶ ಕತ್ತಿ ಅವರು ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಹಿಂದಿದ್ದ ಕಾರಣ : ಗುರುವಾರ ನಡೆದ ಬೆಳವಣಿಗೆಗಳ ಮಧ್ಯೆಯೇ ರಮೇಶ ರಾಜೀನಾಮೆ ನೀಡಿದ್ದು ಅಚ್ಚರಿಗೆ ಕಾರಣ.
ಶುಕ್ರವಾರ ಮಧ್ಯಾಹ್ನ ಬ್ಯಾಂಕ್ ವ್ಯವಸ್ಥಾಪಕರಿಗೆ ಅವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ಏಕಾಏಕಿ ರಾಜೀನಾಮೆ ನೀಡಿರುವ ಹಿಂದೆ ಲೋಕಸಭಾ ಚುನಾವಣೆಯ ಕಾವಿದೆ. ಚಿಕ್ಕೋಡಿಯಲ್ಲಿ ತಮ್ಮ ವಿರುದ್ಧ ರಮೇಶ ಕತ್ತಿ ಕೆಲಸ ಮಾಡಿದ್ದರೂ ಎಂಬ ಅಸಮಾಧಾನ ಅಣ್ಣಾ ಸಾಹೇಬ್ ಜೊಲ್ಲೆಗೆ ಇದೆ.
41 ವರ್ಷಗಳಿಂದ ರಮೇಶ ಕತ್ತಿ ನಿರ್ದೇಶಕರಾಗಿ, ಆರನೇ ಬಾರಿ ಅಧ್ಯಕ್ಷರಾಗಿದ್ದರು. ಡಿಸಿಸಿ
ಬ್ಯಾಂಕಿಗೆ ಚಿಕ್ಕೋಡಿ ಮತ್ತು ನಿಪ್ಪಾಣಿ ಭಾಗದಲ್ಲಿ ಹೊಸ ಸದಸ್ಯರ ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಎಲ್ಲ 14 ನಿರ್ದೇಶಕರು ಅಧ್ಯಕ್ಷ ಉಮೇಶ ಕತ್ತಿ ವಿರುದ್ಧ ನಿಂತಿದ್ದರು. ನಿರ್ದೇಶಕ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ರಮೇಶ ಅವರ ಮಧ್ಯೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಗುರುವಾರ ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಇದು ಬಲವಾದ ರೀತಿಯಲ್ಲಿ ಸ್ಫೋಟಗೊಂಡಿದೆ. ಅಧ್ಯಕ್ಷರನ್ನು ಹೊರಗಿಟ್ಟೇ ಎಲ್ಲ ನಿರ್ದೇಶಕರೂ ಪ್ರತ್ಯೇಕ ಸಭೆ ನಡೆಸಿದ್ದರು. ರಮೇಶ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅರಿತ ರಮೇಶ ಕತ್ತಿ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಡಿಸಿಸಿ ಬ್ಯಾಂಕ್ ನಲ್ಲಿದ್ದ ಅವರ ಬಲವಾದ ಹಿಡಿತ ಇದೇ ಮೊದಲ ಬಾರಿಗೆ ಸಡಿಲಗೊಂಡಂತಾಗಿದೆ.