ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನಗದು ರೂಪದಲ್ಲಿ ನೀಡಲಾಗುತ್ತಿದ್ದ 170 ರುಪಾಯಿ ಬದಲು ದಿನಸಿ ಕಿಟ್ (ಅಡುಗೆ ಎಣ್ಣೆ, ಬೇಳೆ, ಸಕ್ಕರೆ, ಉಪ್ಪು) ನೀಡುವ ಯೋಜನೆಯನ್ನು ರಾಜ್ಯ ಸರಕಾರ ರೂಪಿಸುತ್ತಿದೆ. ಅಕ್ಟೋಬರ್ ನಲ್ಲಿ ಈ ಯೋಜನೆ ಜಾರಿಗೊಳಿಸುವ ಸಾಧ್ಯತೆ ಇದೆ.
ಅನ್ನಭಾಗ್ಯದ ಗ್ಯಾರಂಟಿಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಘೋಷಿಸಿತ್ತು. ಅಷ್ಟು ಪ್ರಮಾಣದ ಅಕ್ಕಿ ಲಭ್ಯವಾಗದೇ ಇದ್ದಾಗ, ಐದು ಕೆ.ಜಿ ಅಕ್ಕಿ ಜತೆಗೆ, ಉಳಿದ ಐದು ಕೆ.ಜಿ ಲೆಕ್ಕದಲ್ಲಿ ನಗದು ನೀಡುವ ಯೋಜನೆ ಜಾರಿಗೊಳಿಸಿತ್ತು. ನಗದು ಬದಲು ದಿನಸಿ ನೀಡುವ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆದಿದೆ. ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಪ್ರತಿ ಸದಸ್ಯನಿಗೆ ಕೆಜಿಗೆ 34 ರು. ನಂತೆ 5 ಕೆಜಿ ಅಕ್ಕಿಗೆ 170 ರು. ನಗದನ್ನು ನೀಡುತ್ತಿದೆ.
ಅಕ್ಕಿ, ಹಣ ಬದಲು ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರರಿಗೆ ದಿನಸಿ ಕಿಟ್ ವಿತರಿಸಲು ಸರಕಾರಕ್ಕೆ 443 ಕೋಟಿ ರು. ಅಗತ್ಯವಿದೆ. ಒಂದು ಕೆಜಿ ಗುಣಮಟ್ಟದ ಎಣ್ಣೆಗೆ 140 ರು., 1 ಕೆಜಿ ತೊಗರಿ ಬೇಳೆಗೆ 170 ರು., ಸಕ್ಕರೆ ಕೆಜಿಗೆ 40 ರು. ಹಾಗೂ ಪ್ಯಾಕೇಜ್ ಉಪ್ಪು 5 ರು. ಸೇರಿ 355 ರು. ಅಗತ್ಯವಿದೆ. ಪ್ರತಿ ತಿಂಗಳು 1.25 ಕೋಟಿ ಕಾರ್ಡ್ 355 ರು. ವೆಚ್ಚದ ದಿನಸಿ ಕಿಟ್ ವಿತರಿಸಬೇಕೆಂದರೆ ಸರಕಾರಕ್ಕೆ ತಿಂಗಳಿಗೆ 443 ಕೋಟಿ ರು. ವ್ಯಯಿಸಬೇಕಾಗುತ್ತದೆ. ವರ್ಷಕ್ಕೆ ಅಂದಾಜು 5,316 ಕೋಟಿ ರು. ಬೇಕಾಗುತ್ತದೆ. ಅಂತ್ಯೋದಯ ಕಾರ್ಡ್ನಲ್ಲಿ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರು., ಐದು ಸದಸ್ಯರಿದ್ದರೆ 510 ರು.. ಆರು ಸದಸ್ಯರಿದ್ದರೆ 850 ರು. ಹಾಕಲಾಗುತ್ತಿದೆ. ಯೋಜನೆಯಡಿ ಪ್ರತಿ ತಿಂಗಳು ಬಿಪಿಎಲ್, ಅಂತ್ಯೋದಯ, ಎಪಿಎಲ್ ಸೇರಿ ಒಟ್ಟು ಒಂದು ಕೋಟಿ ಕಾರ್ಡ್ಗಳಿಗೆ 4,50,500 ಕೋಟಿ ರು. ಜಮೆ ಮಾಡಲಾಗುತ್ತಿದೆ.