ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ. ಆಸ್ತಿಗಳ ಹಕ್ಕು, ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ಖಾತಾ ತಂತ್ರಾಂಶ ವ್ಯವಸ್ಥೆ ಜಾರಿಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಕೃಷಿ ಜಮೀನಿನ ನೋಂದಣಿಗೆ ಭೂಮಿ ತಂತ್ರಾಂಶದೊಂದಿಗೆ 2006 ರಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲಾಗಿರುತ್ತದೆ. ಹಾಗೂ ಜಮೀನಿನ ಸರ್ವೆ ನಕ್ಷೆ (ಸ್ಕೆಚ್) ನಮೂನೆ 11 ಇ ಇರುವ ಮೋಜಿಣಿ ತಂತ್ರಾಂಶದೊಂದಿಗೆ ಹಾಗೂ ಕಾವೇರಿ ತಂತ್ರಾಂಶವನ್ನು ದಿನಾಂಕ: 05/10/2016 ರಿಂದ ಸಂಯೋಜನೆ ಮಾಡಲಾಗಿದೆ ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯ ಕೃಷಿಯೇತರ ಸ್ವತ್ತುಗಳ ದಸ್ತಾವೇಜುಗಳ ನೋಂದಣಿಗಾಗಿ ಇ-ಸ್ವತ್ತು ತಂತ್ರಾಂಶವನ್ನು ದಿನಾಂಕ: 18/07/2024 ರ ಸುತ್ತೋಲೆಯಂತೆ ಸಂಯೋಜನೆಗೊಳಿಸಲಾಗಿದೆ.
ಈ ಮೇಲೆ ಕಾಣಿಸಿದ ಆಸ್ತಿಗಳನ್ನು ಹೊರತು ಪಡಿಸಿ ಅಂದರೆ ನಗರ ಪ್ರದೇಶಗಳಲ್ಲಿನ ಕೃಷಿಯೇತರ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶವನ್ನು ರೂಪಿಸಿದ್ದು. ಇ-ಆಸ್ತಿ ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದೊಂದಿಗೆ ಪ್ರಾಯೋಗಿಕವಾಗಿ ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಸಂಬಂಧಿಸಿದಂತೆ ಕಾವೇರಿ 2.0 ತಂತ್ರಾಂಶದೊಂದಿಗೆ ಸಂಯೋಜನೆ ಮಾಡಿ ದಿನಾಂಕ: 29/01/2020 ರಿಂದ ನೋಂದಣಿ ಮಾಡುತ್ತಿರುವುದು ಯಶಸ್ವಿಯಾಗಿರುತ್ತದೆ.
ನಗರಾಭಿವೃದ್ಧಿ ಇಲಾಖೆಯ ಬೆಳಗಾವಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲು ಸಮ್ಮತಿ ನೀಡಿರುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2.0 ತಂತ್ರಾಂಶದೊಂದಿಗೆ ದಿನಾಂಕ: 07-10-2024 ರಿಂದ ಜಾರಿಗೆ ಬರುವಂತೆ ಸರ್ಕಾರದ ಆದೇಶ ಸಂಖ್ಯೆ: ಕಂಇ/20/ಎಂಎನ್ ಎಂಯು/2023, ಬೆಂಗಳೂರು ದಿನಾಂಕ 23-09-2024ರ ಆದೇಶದ ಮೂಲಕ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಆದ ಕಾರಣ ದಿನಾಂಕ: 07-10-2024 ರಿಂದ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಉಪನೋಂದಣಿ ಕಛೇರಿಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ತಂತ್ರಾಂಶದಿಂದಲೇ ಇ-ಖಾತಾ ಪಡೆದು ನೋಂದಣಿ ಮಾಡಲಾಗಿರುತ್ತದೆ.
ಇ-ಖಾತಾ ಸಂಯೋಜನೆಯಿಂದ ಸಾರ್ವಜನಿಕರಿಗೆ ಈ ಕೆಳಕಂಡ ಉಪಯೋಗಗಳಾಗುತ್ತವೆ.
a) ಇ-ಆಸ್ತಿ ತಂತ್ರಾಂಶದಿಂದಾಗಿ ಸ್ವತ್ತುಗಳ ನೋಂದಣಿ ವೇಳೆ ಸಾರ್ವಜನಿಕರು ಮೋಸ ಹೋಗುವುದನ್ನು ತಡೆಯುವುದು.
b) ಇ-ಖಾತಾದಿಂದ ಮಾತ್ರ ಸ್ವತ್ತಿನ ಸ್ವರೂಪ ಮತ್ತು ನೈಜ ಮಾಲೀಕರನ್ನು ಗುರುತಿಸಲು ಸಾಧ್ಯ.
c) ನೈಜ ಮಾಲೀಕರಿಗೆ ವಂಚಿಸಿ ಬೇರೆಯವರಿಂದ ಸ್ವತ್ತುಗಳ ನೋಂದಣಿಯನ್ನು ತಪ್ಪಿಸುವುದು.
d) ಸ್ವತ್ತುಗಳ ಖರೀದಿದಾರರಿಗೆ ಸ್ವತ್ತಿನ ನೈಜ ಮಾಲೀಕರನ್ನು ಗುರುತಿಸುವುದು.
e) ಭವಿಷ್ಯದಲ್ಲಿ ಉಂಟಾಗಬಹುದಾದ ವ್ಯಾಜ್ಯ ಕಾನೂನು ತೊಂದರೆಗಳನ್ನು ತಪ್ಪಿಸುವುದು.