ಬೆಳಗಾವಿ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ತನ್ನ ಸಮಯಪ್ರಜ್ಞೆಯಿಂದ ಪ್ರಯಾಣಿಕರನ್ನು ಅಪಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದ ಘಟನೆ ನಡೆದಿದೆ. ಒಂದು ವೇಳೆ ಅಪಘಾತ ಸಂಭವಿಸಿದ್ದರೆ ಜನ ಗಂಭೀರವಾಗಿ ಗಾಯಗೊಳ್ಳುವುದರ ಜೊತೆ ಪ್ರಾಣಹಾನಿಯೂ ಸಂಭವಿಸುತ್ತಿತ್ತು. ಆದರೆ, ಚಾಲಕ ಇದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಸೋಯಾಬಿನ್ ರಾಶಿ ಮಶೀನ್ ವಾಹನ ಅಡ್ಡ ಬಂದ ಪರಿಣಾಮ ಎದುರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 6ಕ್ಕಿಂತ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಬೈಲಹೊಂಗಲ ತಾಲೂಕಿನ ನಯಾನಗರದ ಮಲಪ್ರಭಾ ನದಿಯ ಹತ್ತಿರ ಬುಧವಾರ ಮಧ್ಯಾಹ್ನ ನಡೆದಿದೆ.
ಸಾರಿಗೆ ಬಸ್ ಧಾರವಾಡದಿಂದ ಬೈಲಹೊಂಗಲಕ್ಕೆ ಬರುವ ಮಾರ್ಗ ಮಧ್ಯೆ ನಯಾನಗರದ ಮಲಪ್ರಭಾ ನದಿ ಹತ್ತಿರದ ಸೋಯಾಬಿನ್ ರಾಶಿ ಮುಗಿಸಿ ಬರುತ್ತಿದ್ದ ಯಂತ್ರದ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿ, ಬಸ್ ಕಬ್ಬಿನ ಗದ್ದೆಗೆ ನುಗ್ಗಿಸಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗಾಯಗೊಂಡ ನಿರ್ವಾಹಕ ಹಾಗೂ ಪ್ರಯಾಣಿಕರನ್ನು ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಜಾಲಿಕೊಪ್ಪ ಗ್ರಾಮಸ್ಥರು 108 ಅಂಬುಲೆನ್ಸ್ ಮೂಲಕ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದಾರೆ. ಸುನಂದಾ ಮಡಿವಾಳರ, ಸುನೀತಾ ದೊಡಮನಿ, ಪ್ರಶಾಂತ ಕಂಚಿ, ಗಂಗವ್ವಾ ನಾಡಗೌಡರ, ಸರೋಜಿನಿ ಉಡಕೇರಿ, ಕಸ್ತೂರಿ ಹುಡೇದ ಗಾಯಗೊಂಡವರು ಎಂದು ತಿಳಿದು ಬಂದಿದೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.