ಬೆಳಗಾವಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಹಾಗೂ ಇತರೆ ರೌಡಿಶೀಟರ್ಗಳಿಗೆ ವಿಶೇಷ ಆತಿಥ್ಯ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ ನಾಗರಾಜ್ ಸೇರಿದಂತೆ 20 ವಿಚಾರಣಾಧೀನ ಕೈದಿಗಳನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಿವಾರ ಸ್ಥಳಾಂತರಿಸಲಾಗಿದೆ. ಬಿಗಿ ಭದ್ರತೆ ಮಧ್ಯೆ ಕೈದಿಗಳನ್ನು ಕರೆದೊಯ್ಯಲಾಯಿತು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರು ಒಂದು ಕೈನಲ್ಲಿ ಕಾಫಿ ಕಪ್, ಮತ್ತೊಂದು ಕೈನಲ್ಲಿ ಸಿಗರೇಟ್ ಹಿಡಿದುಕೊಂಡಿದ್ದ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಈ ಫೋಟೊದಲ್ಲಿ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ, ದರ್ಶನ್, ದರ್ಶನ್ ವ್ಯವಸ್ಥಾಪಕ ನಾಗರಾಜ ಕಾಣಿಸಿಕೊಂಡಿದ್ದರು. ವಿಶೇಷ ಆತಿಥ್ಯ ನೀಡಿದ್ದ ಪ್ರಕರಣದಲ್ಲಿ ಮೂರು ಎಫ್ಐಆರ್ಗಳು ದಾಖಲಾಗಿದ್ದವು. ಅದಾದ ಮೇಲೆ, ನ್ಯಾಯಾಲಯದ
ಅನುಮತಿ ಪಡೆದು ದರ್ಶನ್ ಅವರನ್ನು ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಈಗ ನಾಗನನ್ನು ಸ್ಥಳಾಂತರ ಮಾಡಲಾಗಿದೆ. ಈ ಮೊದಲು ಹಿಂಡಲಗಾ ಜೈಲಿಗೆ ಪ್ರದೋಷ್ ನನ್ನು ಸಹಾ ಕರೆ ತರಲಾಗಿತ್ತು.
ಬೆಂಗಳೂರು ಭೂಗತ ಜಗತ್ತಿನ ಮೋಸ್ಟ್ ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಈ ಮೊದಲು ಜೈಲು ಸೇರಿ ರಿಲೀಸ್ ಆಗಿದ್ದ. ಒಂದೂವರೆ ವರ್ಷದಿಂದ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಾಗ ಮತ್ತೆ ಬೆಂಗಳೂರು ಜೈಲು ಪಾಲಾಗಿ ಇದೀಗ ಹಿಂಡಲಗಾ ಜೈಲು ವಾಸಿಯಾಗುತ್ತಿದ್ದಾನೆ.
ವಿಲ್ಸನ್ ಗಾರ್ಡನ್ ನಾಗ ಯಾರು ಗೊತ್ತಾ?
ವಿಲ್ಸನ್ ಗಾರ್ಡನ್ ನಾಗ 18 ವರ್ಷಗಳಿಂದ ರೌಡಿಸಂನಲ್ಲಿ ಸಕ್ರೀಯವಾಗಿದ್ದು, ಈತ ಕಳ್ಳ ವೃತ್ತಿಯನ್ನು ಮಾಡುತ್ತಿದ್ದನು. ಒಂದು ಕಾಲದಲ್ಲಿ ಸೈಲೆಂಟ್ ಸುನೀಲ ಮತ್ತು ಒಂಟೆ ರೋಹಿತನ ಜೊತೆಗೆ ಇದ್ದನು. ಅವರು ಹೇಳಿದಂತೆ ಕೇಳುತ್ತಿದ್ದನು.
ಸೈಲೆಂಟ್ ಸುನೀಲ ಮತ್ತು ಒಂಟೆ ರೋಹಿತನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ವಿಲ್ಸನ್ ಗಾರ್ಡನ್ ನಾಗ ಅವರು ಹೇಳಿದ್ದವರ ಮೇಲೆ ಹಲ್ಲೆ ಮಾಡುತ್ತಿದ್ದನು. ಆದರೀಗ ಸ್ವತಂತ್ರವಾಗಿ ಡಾನ್ ಎನಿಸಿಕೊಳ್ಳುವಂತೆ ಬೆಳೆದಿದ್ದಾನೆ.
ವಿಲ್ಸನ್ ಗಾರ್ಡನ್ ನಾಗ ಮೇಲಿರುವ ಕೇಸ್ಗಳು
ವಿಲ್ಸನ್ ಗಾರ್ಡನ್ ನಾಗ ಮೇಲೆ ಹಲವು ಕೇಸ್ ಗಳಿವೆ. ಪ್ರಾರಂಭದಲ್ಲಿ 2005 ರಲ್ಲಿ ಆಡುಗೋಡಿ ಠಾಣೆಯಲ್ಲಿ ಕಳ್ಳತನ ಕೇಸ್ನಲ್ಲಿ ಈತ ಜೈಲು ಸೇರಿದ್ದ. ಬಳಿಕ ಜಾಮೀನು ಮೇಲೆ ಹೊರ ಬಂದಿದ್ದ. ಹೊರಬಂದ ನಾಗನಿಗೆ ಹಲವು ರೌಡಿಶೀಟರ್ಗಳ ಸಂಪರ್ಕ ಬೆಳೆಯಿತು.
2009ರಲ್ಲಿ ಕಲಾಸಿಪಾಳ್ಯ ದ ರೌಡಿ ಗೇಟ್ ಗಣೇಶ್ ಕೊಲೆ ಕೇಸ್ನಲ್ಲಿ ವಿಲ್ಸನ್ ಗಾರ್ಡನ್ ನಾಗ ಅರೆಸ್ಟ್ ಆಗಿದ್ದನು. ಈ ಕೇಸ್ನಲ್ಲಿ 14 ರೌಡಿಗಳು ಅರೆಸ್ಟ್ ಆಗ್ತಾರೆ.
2012ರಲ್ಲಿ ಕಿಡ್ನಾಪ್, ದರೋಡೆ, ದರೋಡೆಗೆ ಯತ್ನ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ನಂತರ ಕಾಟನ್ ಪೇಟೆ ರೌಡಿಶೀಟರ್ ಗುಪ್ಪನ ಕೊಲೆ ಪ್ರಕರಣದಲ್ಲಿ ಈತ 2 ವರ್ಷ ಜೈಲು ಸೇರಿದ್ದನು. ನಂತರ ಬೇಲ್ ಮೇಲೆ ಹೊರ ಬಂದಿದ್ದನು.
2014ರಲ್ಲಿ ಶ್ರೀನಿವಾಸ ಎಂಬುವವನ ಕೊಲೆ ಕೇಸ್
ನಲ್ಲಿ ಭಾಗಿಯಾಗಿ ವಿಲ್ಸನ್ ಗಾರ್ಡನ್ ನಾಗ ಆರೆಸ್ಟ್ ಆಗ್ತಾನೆ. ಅದೇ ವರ್ಷ ಆತ ಬೇಲ್ ಮೇಲೆ ಬರ್ತಾನೆ. ಬಳಿಕ ನಕರಾ ಬಾಬು ಎಂಬುವವನನ್ನು
ಕೊಲೆ ಮಾಡ್ತಾನೆ. ಜೈಲು ಸೇರ್ತಾನೆ.
2016ರಲ್ಲಿ ವೈಟ್ಫೀಲ್ಡ್ನಲ್ಲಿ ಸೊಹೇಲ್ ಎಂಬಾತನನ್ನು ಕೊಲೆ ಮಾಡ್ತಾನೆ. ಈ ಕೇಸ್ನಲ್ಲಿ ವಿಲ್ಸನ್ ಗಾರ್ಡನ್ ನಾಗ ಸೇರಿ 16 ಜನ ಅರೆಸ್ಟ್ ಆಗ್ತಾರೆ. 2018ರಲ್ಲಿ ಸೈಲೆಂಟ್ ಸುನೀಲ ಮತ್ತು ಒಂಟೆ ಸುನೀಲನ ಜೊತೆಗೆ ಆರ್ಮ್ಸ್ ಆ್ಯಕ್ಟ್ ಮತ್ತು ದರೋಡೆ ಯತ್ನ ಕೇಸ್ನಲ್ಲಿ ಅರೆಸ್ಟ್ ಆಗುತ್ತಾನೆ.
2020ರಲ್ಲಿ ಅನ್ನಪೂರ್ಣೇಶ್ವರಿ ನಗರದಲ್ಲಿ ಜಿಮ್ ಸುಬ್ರಮಣಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗುತ್ತಾನೆ. ಅದೇ ವರ್ಷ ಹಾಸನದ ಹಿರೀಸಾವೆಯಲ್ಲಿ ಶಾಂತಿನಗರ ಲಿಂಗನ ಕೊಲೆ ಮಾಡುತ್ತಾನೆ. 2021ರಲ್ಲಿ ಕೋರಮಂಗಲದಲ್ಲಿ NDPS ಆಕ್ಟ್ ನಡಿಯಲ್ಲಿ ಪ್ರಕರಣ ದಾಖಲಾಗುತ್ತದೆ.
ಸದ್ಯ ಸಿದ್ದಾಪುರ ಮಹೇಶ್ ಕೊಲೆ ಮಾಡಿಸಿ ವಿಲ್ಸನ್ ಗಾರ್ಡನ್ ನಾಗ ಜೈಲು ಸೇರಿದ್ದಾನೆ. ಕೋಕಾ ಕಾಯ್ದೆಯಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಅಚ್ಚರಿ ಸಂಗತಿ ಎಂದರೆ ಸಾಲು ಸಾಲು ಕೊಲೆ ಪ್ರಕರಣದಲ್ಲಿ ತವರು ಮನೆಗೆ ಹೋದಂತೆ ಜೈಲು ಸೇರಿದ್ದ ವಿಲ್ಸನ್ ಗಾರ್ಡನ್ ನಾಗ ಇಷ್ಟು ಆರಾಮಾಗಿ ಅಲ್ಲಿ ಇದ್ದಾನೆ ಎಂಬುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮಾತ್ರವಲ್ಲದೆ ಆತ ಜೈಲಲ್ಲಿ ಇದ್ದಾನೋ ಅಥವಾ ಅರಮನೆಯಲ್ಲಿ ಇದ್ದಾನೋ ಎಂಬ ಸಂಗತಿ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.