ಬೆಳಗಾವಿ : ಬೆಳಗಾವಿಯ ಹಿರಿಯ ಪತ್ರಕರ್ತ, ಸಾಹಿತಿ, ಕವಿ ಡಾ.ಸರಜೂ ಕಾಟ್ಕರ್ ಅವರಿಗೆ ಕರ್ನಾಟಕ ಸರಕಾರದ ಪ್ರತಿಷ್ಠಿತ ಟಿಎಸ್ಆರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಘೋಷಣೆಯಾಗಿದೆ. ಕಳೆದ ನಾಲ್ಕೂವರೆ ದಶಕಗಳಿಂದ ಪತ್ರಿಕೋದ್ಯಮ, ಸಾಹಿತ್ಯ ಸೇರಿದಂತೆ ಬಹುಮುಖಿ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅಪಾರ ಸೇವೆ ಪರಿಗಣಿಸಿ ಕರ್ನಾಟಕ ಸರಕಾರ ಅವರಿಗೆ ಈ ಸಲದ ಟಿ ಎಸ್ ಆರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, ದಿ ನ್ಯೂ ಇಂಡಿಯನ್ಎಕ್ಸ್ ಪ್ರೆಸ್ ಮುಂತಾದ ಪತ್ರಿಕೆಗಳಲ್ಲಿ ಮುಖ್ಯ ವರದಿಗಾರರಾಗಿ, ಬ್ಯುರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಡಾ.ಸರಜೂ ಕಾಟ್ಕರ್ ಅವರು ಬರವಣಿಗೆಯಲ್ಲಿ ಅಪಾರವಾಗಿ ತೊಡಗಿಸಿಕೊಂಡವರು. ನೂರಾರು ಪುಸ್ತಕಗಳನ್ನು ಬರೆದಿರುವ ಅವರಿಗೆ ರಾಜ್ಯ ಹಾಗೂ ದೇಶದ ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿವೆ.
ಪತ್ರಿಕೆಗಳಲ್ಲಿ 45 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 15 ಕವನ ಸಂಕಲನಗಳು, 4 ಅನುವಾದಿತ ಕೃತಿಗಳು ಸೇರಿದಂತೆ ಪಾಟೀಲ್ ಪುಟ್ಟನವರ ಆತ್ಮಕಥೆ ನಿರೂಪಣೆ, ಹಲವು ವ್ಯಕ್ತಿಚಿತ್ರಗಳನ್ನು ಪ್ರಕಟಿಸಿದ್ದಾರೆ. ಇವರ ಕವನ,ಲೇಖನ,ಕಥೆ-ಕಾದಂಬರಿಗಳು ಕರ್ನಾಟಕ,ಮಹಾರಾಷ್ಟ್ರ ಹಾಗೂ ನೇಪಾಳದ ಹಲವಾರು ವಿಶ್ವವಿದ್ಯಾಲಯಗಳು,ಶಾಲಾ-ಕಾಲೇಜುಗಳಿಗೆ ಪಠ್ಯಗಳಾಗಿರುವುದು ವಿಶೇಷ. ಕನ್ನಡ, ಇಂಗ್ಲಿಷ್ ಸಾಹಿತ್ಯ- ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಡಾ. ಸರಜೂ ಕಾಟ್ಕರ್ ಬಹುದೊಡ್ಡ ಹೆಸರು ಗಳಿಸಿದ್ದಾರೆ.
ಬಂಡಾಯ ಸಾಹಿತ್ಯ ಚಳವಳಿ ಕನ್ನಡಕ್ಕೆ ನೀಡಿದ ಅನೇಕ ಪ್ರತಿಭೆಗಳಲ್ಲಿ ಡಾ| ಸರಜೂ ಕಾಟ್ಕರ್ ಅವರೂ ಒಬ್ಬರು. 1953 ಆಗಸ್ಟ್ 14ರಂದು ಹುಬ್ಬಳ್ಳಿಯಲ್ಲಿ ಹುಟ್ಟಿದ ಡಾ| ಸರಜೂ ಕಾಟ್ಕರ್ ಈಗಾಗಲೇ ಪ್ರತಿಭಾವಂತ ಕವಿಯೆಂದು ಹೆಸರು ಮಾಡಿದ್ದಾರೆ. ಹುಬ್ಬಳ್ಳಿ, ದಾಂಡೇಲಿ, ಧಾರವಾಡಗಳಲ್ಲಿ ವಿದ್ಯಾಭ್ಯಾಸ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. `ಕನ್ನಡ-ಮರಾಠಿ ದಲಿತ ಸಾಹಿತ್ಯ ‘ಎಂಬ ಸಂಶೋಧನಾತ್ಮಕ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ, ದೂರದರ್ಶನ, ಆಕಾಶವಾಣಿ ಮುಂತಾದ ಅನೇಕ ವೇದಿಕೆಗಳ ಮೂಲಕ ಕಾವ್ಯ, ಪ್ರಬಂಧಗಳನ್ನು ಮಂಡಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸತತ ಮೂರು ಅವಧಿಗೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ಇಂಗ್ಲೆಂಡ್ ಮತ್ತು ಅಮೇರಿಕೆಯಲ್ಲಿ ನಡೆದ ‘ವಿಶ್ವಕನ್ನಡ ಸಮ್ಮೇಳನ’ ದಲ್ಲಿ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಡಾ| ಸರಜೂ ಕಾಟ್ಕರ್ ತಮ್ಮ ವೃತ್ತಿಯಲ್ಲಿಯೂ ಜನಪರ ನಿಲುವಿಗೆ ಅಂಟಿಕೊಂಡವರು.
ವಿಶೇಷ ವರದಿಗಳಿಗಾಗಿ ಹಲವಾರು ಪ್ರಶಸ್ತಿಗಳನ್ನೂ
ಇವರು ಪಡೆದಿದ್ದಾರೆ.