ಬೆಳಗಾವಿ: ಸೋಮವಾರದೊಳಗೆ ಬೆಳಗಾವಿ ಮಹಾನಗರ ಪಾಲಿಕೆ ಭೂಮಾಲಿಕರಿಗೆ 20 ಕೋಟಿ ₹ ಬದಲು ವಶಪಡಿಸಿಕೊಂಡಿರುವ ಜಾಗವನ್ನು ಹಸ್ತಾಂತರ ಮಾಡುವ, ಇಲ್ಲವೇ ದಂಡ ಭರಿಸುವ ಎಚ್ಚರಿಕೆಯನ್ನು ಹೈಕೋರ್ಟ್ ನೀಡಿರುವ ಬೆನ್ನಲ್ಲೇ, ಇದೀಗ ಜಾಗವನ್ನು ಮತ್ತೆ ಭೂಮಾಲಿಕರಿಗೆ ಮರಳಿಸುವ ಪ್ರಕ್ರಿಯೆ ಆರಂಭವಾಗಿದೆ.
ಬೆಳಗಾವಿ ಶಹಾಪುರ ಎಸ್ ಪಿಎಂ ರಸ್ತೆಯಲ್ಲಿ ದ್ವಿಪಥ ರಸ್ತೆ ನಿರ್ಮಾಣ ಸಂಬಂಧ ಮಹಾನಗರ ಪಾಲಿಕೆ ಬಾಳಾಸಾಹೇಬ ಪಾಟೀಲ ಅವರ ಜಾಗ ವಶಪಡಿಸಿಕೊಂಡಿತ್ತು. ಕೊನೆಗೆ ಪ್ರಕರಣ ನ್ಯಾಯಾಲಯದ ಕಟ್ಟೆ ಹತ್ತಿತ್ತು ಮಾತ್ರವಲ್ಲ. ಪರಿಹಾರ ನೀಡುವ ಕುರಿತು ಬೆಳಗಾವಿ ಮಹಾನಗರ ಪಾಲಿಕೆಯಲ್ಲೂ ವಿಶೇಷ ಸಭೆ ಕರೆದು ಚರ್ಚೆ ನಡೆಸಲಾಗಿತ್ತು. ಸೋಮವಾರ ಸೆಪ್ಟೆಂಬರ್ 23ರ ಒಳಗೆ ಜಾಗವನ್ನು ಹಸ್ತಾಂತರ ಮಾಡುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಂತೆ ತಪರಾಕಿ ಹಾಕಿದ್ದರಿಂದ ಕೊನೆಗೂ ಮಹಾನಗರ ಪಾಲಿಕೆ ಇದೀಗ ಭೂ ಮಾಲೀಕರಿಗೆ ಮರಳಿ ಜಾಗ ಹಸ್ತಾಂತರ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದೆ.
ಬೆಳಗಾವಿ ಮಹಾನಗರದ ಎಸ್ಪಿಎಮ್ ರಸ್ತೆಯಲ್ಲಿ ದ್ವಿಮುಖ ರಸ್ತೆ ನಿರ್ಮಾಣಕ್ಕೆ 2021 ರಲ್ಲಿ 23 ಗುಂಟೆ ಜಾಗ ಬಳಸಿಕೊಳ್ಳಲಾಗಿತ್ತು. ಅದನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ಮೊದಲೇ ಕಾಮಗಾರಿ ನಡೆಸಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಯಾಕೆಂದರೆ ಮೊದಲು ಕಾಮಗಾರಿ ಮಾಡಿ ನಂತರ ದರ ನಿಗದಿಪಡಿಸಲಾಗಿತ್ತು. ಅದರ ಪ್ರಕಾರ ಭೂಮಾಲಿಕರಿಗೆ 20 ಕೋಟಿ ರೂ.ನೀಡಬೇಕು ಎಂದು ಆಗ ಅಧಿಕಾರಿಗಳು ದರವನ್ನು ನಿಗದಿಪಡಿಸಿದ್ದರು. ಇದು ಸಾಕಷ್ಟು ದುಬಾರಿಯಾಗಿದೆ ಎಂದು ಮಹಾನಗರ ಪಾಲಿಕೆಯ ಸಭೆಯಲ್ಲಿ ಚರ್ಚೆಯೂ ನಡೆದಿತ್ತು. ಈ ನಡುವೆ ಭೂ ಮಾಲೀಕರಾಗಿದ್ದ ಬಾಳಾ ಸಾಹೇಬ ಪಾಟೀಲ ಅವರು ಧಾರವಾಡದ ಹೈಕೋರ್ಟ್ ಮೆಟ್ಟಿಲೇರಿದ್ದರು. ಮುಂಚಿತವಾಗಿ ಅಧಿಕಾರಿಗಳ ಒಪ್ಪಿಕೊಂಡ ಕಾರಣ 20 ಕೋಟಿ ರೂ. ಪರಿಹಾರವಾಗಿ ನೀಡಬೇಕಾಗುತ್ತದೆ ಎಂದು ಧಾರವಾಡದ ಹೈಕೋರ್ಟ್ ಪೀಠ ಸ್ಪಷ್ಟ ಆದೇಶ ನೀಡಿತ್ತು. ಇದಕ್ಕೆ ಉತ್ತರ ನೀಡಿದ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಭೂಸ್ವಾಧೀನ ಮಾಡಿಕೊಂಡಿರುವುದು ನಿಜ. ಆದರೆ, ಪರಿಹಾರ ಕೊಡಲು ನಮ್ಮ ಬಳಿ ಅಷ್ಟು ಹಣವಿಲ್ಲ ಭೂಮಿಯನ್ನು ಮರಳಿ ವಾಪಸ್ ನೀಡುವುದಾಗಿ ಹೇಳಿದ್ದರು. ಇದಕ್ಕೆ ಭೂ ಮಾಲೀಕರು ಸಹ ಒಪ್ಪಿಕೊಂಡಿದ್ದರು. ಮತ್ತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಹೈಕೋರ್ಟ್ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಸೆಪ್ಟೆಂಬರ್ 23ರ ಕೊನೆಯ ಗಡುವು ನೀಡಿ ಎಚ್ಚರಿಕೆ ರವಾನಿಸಿದ್ದರು. ಸೋಮವಾರದೊಳಗೆ ಭೂಮಿ ಮರಳಿಸಿದರೆ ದಂಡ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತೀರಿ. ಇಲ್ಲದಿದ್ದರೆ ಆಜ್ಞೆ ಪ್ರತಿಯನ್ನು ಸಿದ್ಧವಾಗಿರಿಸಿಕೊಳ್ಳುತ್ತೇನೆ ಅಂದು ಸಹಿ ಮಾಡುತ್ತೇನೆ ಎಂದು ಹೇಳಿದ್ದರು. ಕೊನೆಗೂ ಮಹಾನಗರ ಪಾಲಿಕೆ ಶನಿವಾರದಿಂದ ಬಹು ಮಾಲೀಕರಿಗೆ ತಾನು ವಶಪಡಿಸಿಕೊಂಡಿರುವ ಜಾಗವನ್ನು ಮರಳಿ ಒಪಿಸುವ ಮೂಲಕ ತೀವ್ರ ವಿವಾದಕ್ಕೆ ಗುರಿಯಾಗಿದ್ದ ಪ್ರಕರಣದ ತಾರ್ಕಿಕ ಅಂತ್ಯ ಕಾಣುವತ್ತ ಗಮನಹರಿಸಿರುವುದು ಸ್ಪಷ್ಟವಾಗಿದೆ.