ಬೆಳಗಾವಿ: ರೋಗಿ ಕೊಳಲು ಊದುತ್ತಿರುವಾಗಲೇ ಮೆದುಳು ಶಸ್ತ್ರಚಿಕಿತ್ಸೆ ನಡೆಸಿರುವ ಅಪರೂಪದ ದಾಖಲೆಯನ್ನು ಕೊಲ್ಲಾಪುರ ಜಿಲ್ಲೆ ಕನೇರಿ ಸಿದ್ದಗಿರಿ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ ಎಂದು ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಬೆಳಗಾವಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ರೋಗಿಯ ಕೈಗೆ ಕೊಳಲು ಕೊಟ್ಟು ರೋಗಿ ಕೊಳಲು ಊದುತ್ತಾ ಇರುತ್ತಾನೆ. ಅಂತ ಸಂದರ್ಭದಲ್ಲಿ ಆತ ಎಚ್ಚರ ಇರುವಾಗಲೇ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿ ಟ್ಯೂಮರ್ ಗಡ್ಡೆ ತೆಗೆಯಲಾಗಿದೆ. ಸಿದ್ದಗಿರಿ ಆಸ್ಪತ್ರೆಯ ನರ ಶಸ್ತ್ರ ಚಿಕಿತ್ಸಕರಾದ ಡಾ.ಶಿವಶಂಕರ ಮಜರಕೆ ಮತ್ತು ಅರವಳಿಕೆ ತಜ್ಞ ಪ್ರಕಾಶ ಭರಮ ಗೌಡ ಈ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ ಎಂದು ವಿವರಿಸಿದರು.
ಕೊಳಲು ಊದುತ್ತ ಇಲ್ಲವೇ ಐಸ್ ಕ್ರೀಮ್ ತಿನ್ನುತ್ತಿರುವಾಗಲೇ ವ್ಯಕ್ತಿಯ ಮೆದುಳು ಶಸ್ತ್ರಚಿಕಿತ್ಸೆ ನಡೆಸಿರುವುದು ನಮ್ಮ ವೈದ್ಯರ ಸಾಧನೆ. ಈ ಮೂಲಕ ಅಪರೂಪದ ದಾಖಲೆ ಸೃಷ್ಟಿಸಿದ್ದಾರೆ. ಇಂತಹ ಮೆದುಳು ಚಿಕಿತ್ಸೆಗೆ ಬೇರೆ ಕಡೆಗಳಲ್ಲಿ 10-15 ಲಕ್ಷ ₹ ಇದ್ದರೆ ನಮ್ಮ ಆಸ್ಪತ್ರೆಯ ವೈದ್ಯರು ಕೇವಲ 1,25,000₹ ಗಳಲ್ಲೇ ಮಾಡುತ್ತಾರೆ. ಅದರಲ್ಲೂ ಮಹಾರಾಷ್ಟ್ರದ ರೋಗಿಗಳಿಗೆ ಅಲ್ಲಿನ ಸರಕಾರಿ ಯೋಜನೆಗಳ ಮೂಲಕ ಶೇ.ಐವತ್ತರಷ್ಟು ಹಣ ಕಡಿಮೆ ಮಾಡಲಾಗುತ್ತಿದೆ. ದಾನಿಗಳಿಂದ ಸಹಾಯ ಪಡೆದು ಇಂತಹ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಜೊತೆಗೆ ನಮ್ಮ ಆಸ್ಪತ್ರೆ ವೈದ್ಯರು ಕಂಪನಿಗಳಿಂದ ನೇರವಾಗಿ ಔಷಧಿ ಪಡೆದು ಅತ್ಯಂತ ಕಡಿಮೆ ದರಕ್ಕೆ ಶಸ್ತ್ರಚಿಕಿತ್ಸೆ ನೆರವೇರಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಸುಮಾರು 103 ಕ್ಕೂ ಅಧಿಕ ಇಂತಹ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿದೆ. ಕರ್ನಾಟಕದ ಹಾವೇರಿ, ದಾವಣಗೆರೆ, ಬೀದರ್, ರಾಯಚೂರು ಮುಂತಾದ ಭಾಗಗಳ ರೋಗಿಗಳು ಇದೀಗ ಕೊಲ್ಲಾಪುರ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದಾರೆ. ಯಾರೊಬ್ಬ ರೋಗಿಯು ಹಣ ಇಲ್ಲದೆ ತನ್ನ ಕಾಯಿಲೆ ಸಲುವಾಗಿ ಆಸ್ಪತ್ರೆಗೆ ಹೋಗುವುದನ್ನು ನಿಲ್ಲಿಸಬಾರದು. ಕೂಲಿ ಮಾಡಿ ಬದುಕುವ ಅತ್ಯಂತ ಬಡವರು ಹಣ ಇಲ್ಲ ಎಂದು ಆಸ್ಪತ್ರೆಗೆ ಬಾರದೇ ಇರಬಾರದು. ಅಂತವರಿಗೆ ಸಹ ಶಸ್ತ್ರಚಿಕಿತ್ಸೆಯನ್ನು ದಾನಿಗಳ ಸಹಕಾರ ಪಡೆದು ಮಾಡಲಾಗುತ್ತಿದೆ. ಆದಷ್ಟು ಕಡಿಮೆ ಹಣದಲ್ಲಿ ಅತ್ಯಂತ ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಿದ್ದಗಿರಿ ಆಸ್ಪತ್ರೆ ಇದುವರೆಗೆ ಸುಮಾರು 103 ಮೆದುಳು ಶಸ್ತ್ರಚಿಕಿತ್ಸೆ ಮಾಡಿದೆ. ವೈದ್ಯರ ತಂಡ ಕೊಳಲು ಊದುತ್ತಿದ್ದ ವ್ಯಕ್ತಿಗೆ 1,25,000 ₹ ದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಿ ಯಶಸ್ವಿಯಾಗಿ ಮೆದುಳಿನಲ್ಲಿದ್ದ ಗಡ್ಡೆಯನ್ನು ಹೊರತೆಗೆದಿದೆ. ರೋಗಿ ಎಚ್ಚರ ಇರುವಾಗ ಶಸ್ತ್ರ ಚಿಕಿತ್ಸೆ ನೆರವೇರಿಸಿರುವುದು ಯಾರು ಮಾಡದ ಸಾಧನೆ. ಅದನ್ನು ನಮ್ಮ ಕನೇರಿ ಮಠದ ಸಿದ್ದಗಿರಿ ಆಸ್ಪತ್ರೆ ಮಾಡಿದೆ. ರೋಗಿಯಲ್ಲಿ ಆತ್ಮವಿಶ್ವಾಸ ವೃದ್ಧಿಗೊಳಿಸುವ ಕಾರಣಕ್ಕೆ ಕೊಳಲು ಓದುವಾಗ ಮತ್ತು ಐಸ್ ಕ್ರೀಮ್ ತಿನ್ನುವಾಗ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಮ್ಮ ವೈದ್ಯರು ಔಷಧೀಯ ಕಂಪನಿಯೊಂದಿಗೆ ನೇರವಾಗಿ ಮಾತನಾಡಿ ಕಡಿಮೆ ಬೆಲೆಯಲ್ಲಿ ಔಷಧ ಪಡೆಯುತ್ತಾರೆ. ಆಸ್ಪತ್ರೆ ಶುಲ್ಕವನ್ನು ಸಹ ಜಾಸ್ತಿ ತೆಗೆದುಕೊಳ್ಳುವುದಿಲ್ಲ. ದಾನಿಗಳಿಂದ ಬಂದ ಹಣದಿಂದ ಯಂತ್ರೋಪಕರಣ ಖರೀದಿ ಮಾಡುತ್ತೇವೆ. ಆಸ್ಪತ್ರೆಗೆ ಯಾವುದೇ ಬ್ಯಾಂಕ್ ಲೋನ್ ಇಲ್ಲ. ತಿಂಗಳು ತಿಂಗಳು ಕಂತು ಕಟ್ಟಬೇಕು ಎಂಬ ಚಿಂತೆ ಇಲ್ಲ. ಯಾರೂ ಹಣ ಇಲ್ಲದೇ ಶಸ್ತ್ರಚಿಕಿತ್ಸೆ ಪಡೆಯದೆ ಮರಳಿ ಹೋಗಬಾರದು ಎನ್ನುವುದು ವೈದ್ಯರ ಯೋಚನೆ. ಇದರಿಂದಾಗಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಆಪರೇಷನ್ ಮಾಡಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
ಡಾ. ಶಿವಶಂಕರ ಮಜರಕೆ ಮಾತನಾಡಿ, ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ನಡೆಸುವಾಗ ರೋಗಿಗೆ ಅರವಳಿಕೆ ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸುತ್ತಿವೆ ಆಗ ರೋಗಿಗೆ ಯಾವುದೇ ಅರಿವು ಇರುವುದಿಲ್ಲ. ತಲೆಯ ಮೇಲಿನ ಭಾಗಕ್ಕೆ ಮಾತ್ರ ಅರವಳಿಕೆ ನೀಡಿರುತ್ತೇವೆ. ಕಣ್ಣು, ಕೈ, ಕಾಲು ಎಲ್ಲಾ ಕಾರ್ಯನಿರ್ವಹಿಸುತ್ತವೆ. ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿಗೆ ಕೊಳಲು ನುಡಿಸುವ ಹವ್ಯಾಸ ಇರುವ ಕಾರಣ ತಿಳಿದು ಅವರಿಗೆ ಕೊಳಲು ನುಡಿಸಲು ಹೇಳಿದೆವು. ಈ ಮೂಲಕ ನಾವು ಅತ್ಯಂತ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಿ ಮೆದುಳಿನಲ್ಲಿನ ಗಡ್ಡೆಯನ್ನು ಹೊರತೆಗೆದಿದ್ದೇವೆ ಎಂದು ಅವರು ಹೇಳಿದರು.
ಬಡ ರೋಗಿಗಳ ಮೇಲೆ ಕನೇರಿ ಮಠದ ಸ್ವಾಮೀಜಿಗಳಿಗೆ ಅಪಾರ ಕಾಳಜಿ ಹಾಗೂ ಕಳಕಳಿ. ಹೀಗಾಗಿ ಆಸ್ಪತ್ರೆ ಅಪರೂಪದ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿದೆ. ದೇಶದ ಕೆಲವೇ ಭಾಗಗಳಲ್ಲಿ ಮಾತ್ರ ಮೆದುಳು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಅಲ್ಲಿ ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಬಿಲ್ ತೆಗೆದುಕೊಳ್ಳುತ್ತಾರೆ. ಆದರೆ, ಕೊಲ್ಲಾಪುರ ಕನೇರಿ ಸಿದ್ದಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕೇವಲ 1,25,000 ಚಿಕಿತ್ಸೆಯನ್ನು ನಡೆಸುತ್ತಿದ್ದೇವೆ. ಕರ್ನಾಟಕದ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.