ಬೆಳಗಾವಿ: ಹೆಚ್ಚಿನ ಜನದಟ್ಟಣೆಯ ಎರಡು ನಗರಗಳ ನಡುವೆ ಸಂಪರ್ಕ ಸಾಧಿಸುವ ಉದ್ದೇಶ ಹೊಂದಿರುವ ವಂದೇ ಮೆಟ್ರೋ ರೈಲ್ವೆ ಸೇವೆ ಇದೀಗ ದೇಶದಲ್ಲಿ ಆರಂಭವಾಗಿದೆ.
ಗುಜರಾತಿನ ಅಹಮದಾಬಾದ್ ಮತ್ತು ಕಛ್ ಜಿಲ್ಲೆಯ ಭೂಜ್ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ದೇಶದ ಮೊಟ್ಟಮೊದಲ ಒಂದೇ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು ಇದು ಅಂತರ್ ನಗರಗಳ ನಡುವೆ ಸಂಚರಿಸುವ ರೈಲಾಗಿದೆ. ಸಾಮಾನ್ಯ ಮೆಟ್ರೋ ರೈಲುಗಳು ನಗರ ವ್ಯಾಪ್ತಿ ಒಳಗೆ ಮತ್ತು ನಗರದ ಹೊರವಲಯದ ಪ್ರದೇಶಗಳನ್ನು ಕೇಂದ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿವೆ, ಆದರೆ 100 ರಿಂದ 250 ಕಿಲೋಮೀಟರ್ ವ್ಯಾಪ್ತಿಯ ನಗರಗಳ ನಡುವೆ ಸಂಪರ್ಕಕ್ಕಾಗಿ ಒಂದೇ ಮೆಟ್ರೋ ರೈಲ್ವೆ ಈಗ ದೇಶದಲ್ಲಿ ಆರಂಭವಾಗಿರುವುದು ಮುಂದಿನ ದಿನಗಳಲ್ಲಿ ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಲಭ್ಯವಾಗುತ್ತದೆ ಕಾದು ನೋಡಬೇಕಾಗಿದೆ.
ಭವಿಷ್ಯದಲ್ಲಿ ಕರ್ನಾಟಕದಲ್ಲಿ ಈ ಯೋಜನೆ ಸಾಕಾರಗೊಂಡರೆ ಹುಬ್ಬಳ್ಳಿ- ಧಾರವಾಡ-ಬೆಳಗಾವಿ ನಡುವೆ ವಂದೇ ಮೆಟ್ರೋ ರೈಲು ಸಂಚರಿಸುವುದರಲ್ಲಿ ಯಾವ ಸಂದೇಹವು ಇಲ್ಲ. ಈಗಾಗಲೇ ತ್ರಿವಳಿ ನಗರಗಳಾಗಿ ಗುರುತಿಸಿಕೊಂಡಿರುವ ಬೆಳಗಾವಿ-ಹುಬ್ಬಳ್ಳಿ- ಧಾರವಾಡಗಳ ಜನದಟ್ಟಣೆ ನಿಭಾಯಿಸುವ ನಿಟ್ಟಿನಲ್ಲಿ ವಂದೇ ಮೆಟ್ರೋ ಅತ್ಯಂತ ಪೂರಕವಾಗಿದೆ. ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕರ್ನಾಟಕದ ಬೆಂಗಳೂರು ಹೊರತುಪಡಿಸಿದ ದ್ವಿತೀಯ ಸ್ತರದ ನಗರಗಳಿಗೆ ಮೆಟ್ರೋ ಯೋಜನೆಯನ್ನು ಕಲ್ಪಿಸುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದರ ಉಪಯೋಗ ಏನು?
* ವಂದೇ ಮೆಟ್ರೋ ಸೇವೆಯು ಭುಜ್ (ಕಚ್ ಜಿಲ್ಲೆಯಲ್ಲಿದೆ) ನಿಂದ ಅಹಮದಾಬಾದ್ನೊಂದಿಗೆ ಸಂಪರ್ಕಿಸುತ್ತದೆ.
* 360 ಕಿಮೀ ದೂರವನ್ನು 5 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಲಿದೆ.
* ಈ ರೈಲು ಗರಿಷ್ಠ 110 ಕಿಮೀ ವೇಗದಲ್ಲಿ ಚಲಿಸುತ್ತದೆ. ಅಂಜಾರ್, ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧ್ರಂಗಾಧ್ರಾ, ವಿರಾಮ್ಗಮ್, ಚಂದ್ಲೋಡಿಯಾ, ಸಬರಮತಿ ಮತ್ತು ಕಲುಪುರ್ (ಅಹಮದಾಬಾದ್ ನಿಲ್ದಾಣ) ನಿಲ್ದಾಣಗಳಲ್ಲಿ ಸ್ಟಾಪ್ ಇರಲಿದೆ.
* ಈ ರೈಲು ವಾರದಲ್ಲಿ 6 ದಿನಗಳು ಕಾರ್ಯನಿರ್ವಹಿಸುತ್ತದೆ. ಶನಿವಾರ ಭುಜ್ ನಿಂದ ಭಾನುವಾರ ಅಹಮದಾಬಾದ್ನಿಂದ ಸೇವೆ ಸ್ಥಗಿತಗೊಳಿಸಲಾಗುತ್ತದೆ.
ವಂದೇ ಮೆಟ್ರೋ ಸಮಯ ಹೇಗಿದೆ?
* ಭುಜ್ನಿಂದ ನಿರ್ಗಮನ: ಬೆಳಗ್ಗೆ 5:05 ಗಂಟೆ, ಅಹಮದಾಬಾದ್ಗೆ ಆಗಮನ: ಬೆಳಗ್ಗೆ 10:50 ಗಂಟೆ
* ಅಹಮದಾಬಾದ್ನಿಂದ ನಿರ್ಗಮನ: ಸಂಜೆ 5:30, ಭುಜ್ಗೆ ಆಗಮನ: ರಾತ್ರಿ 11:20 ಗಂಟೆ
ವಂದೇ ಮೆಟ್ರೋ ವಿಶೇಷತೆಗಳೇನು?
* 1,150 ಆಸನಗಳನ್ನು ಹೊಂದಿರುವುದಲ್ಲದೇ 2,058 ನಿಂತು ಪ್ರಯಾಣಿಸಬಹುದಾಗಿದೆ. ಕುಳಿತುಕೊಳ್ಳಲು ಮೃದು ಸೋಫಾಗಳನ್ನು ಅಳವಡಿಸಲಾಗಿದೆ.
* ಮೆಟ್ರೋ ಸಂಪೂರ್ಣ ಹವಾನಿಯಂತ್ರಿತವಾಗಿದೆ (ಎ.ಸಿ.)
* ಇದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನೇ ಹೋಲುತ್ತದೆಯಾದರೂ, ಉಪನಗರದ ಮೆಟ್ರೋ ವ್ಯವಸ್ಥೆಗಳ ವೈಶಿಷ್ಟ್ಯತೆಯನ್ನು ಒಳಗೊಂಡಿದೆ.
* ಎರಡೂ ತುದಿಗಳಲ್ಲಿ ಎಂಜಿನ್ ಮತ್ತು ಎರಡೂ ಬದಿಗಳಲ್ಲಿ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳನ್ನು ಒಳಗೊಂಡಿದೆ
* ಸಂಪೂರ್ಣ ಬುಕ್ಕಿಂಗ್ ಇಲ್ಲ, ಟಿಕೆಟ್ ಖರೀದಿಸಲು ಅವಕಾಶವಿದೆ.
* ವಂದೇ ಮೆಟ್ರೋ ಟಿಕೆಟ್ ದರ ಹೇಗೆ?
* ಕನಿಷ್ಠ ಟಿಕೆಟ್ ದರವು 30 ರೂ. ನಿಂದ ಪ್ರಾರಂಭವಾಗುತ್ತದೆ, GST ಸೇರಿದಂತೆ, ನಿಖರವಾದ ದರಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.
* ಭುಜ್ನಿಂದ ಅಹಮದಾಬಾದ್ಗೆ ಏಕಮುಖ ಪ್ರಯಾಣಕ್ಕೆ ಜಿಎಸ್ಟಿ ಹೊರತುಪಡಿಸಿ 430 ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.