ಬೆಂಗಳೂರು :
ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸರಕಾರ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಾಧ್ಯತೆ ಹೆಚ್ಚಿದೆ.
ಇದೀಗ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಅಲ್ಲಿನ ಬಿಜೆಪಿ ಸರಕಾರ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಮುಂದಾಗಿದೆ. ಆ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿಜೆಪಿ ಸರಕಾರ ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಬಹುತೇಕ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ ಸಾಧ್ಯತೆ ಹೆಚ್ಚಿದೆ.
ಹಿಂದುಗಳ ಮತ ಬ್ಯಾಂಕ್ ಭದ್ರ ಪಡಿಸುವ ನಿಟ್ಟಿನಲ್ಲಿ ಈ ಪ್ರಬಲ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸುವ ಸಾಧ್ಯತೆ ಹೆಚ್ಚಾಗಿದೆ.
ತೀವ್ರ ಚರ್ಚೆಯಲ್ಲಿರುವ ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಎಲ್ಲಾ ಧರ್ಮದವರು ಒಂದೇ ಕಾನೂನು ಅನುಸರಿಸಬೇಕಾಗುತ್ತದೆ. ವೈಯಕ್ತಿಕ ಕಾನೂನುಗಳ ಪಾಲನೆಗೆ ಅವಕಾಶ ಸಿಗದು. ಸದ್ಯ ಹಿಂದು, ಮುಸ್ಲಿಂ, ಕ್ರೈಸ್ತ ಸೇರಿದಂತೆ ದೇಶದ ವಿವಿಧ ಧರ್ಮಗಳ ಜನ ವಿವಾಹ ವಿಚ್ಛೇದನ, ಆಸ್ತಿ ಹಂಚಿಕೆ, ದತ್ತು ಸೇರಿದಂತೆ ವಿವಿಧ ಉದ್ದೇಶಗಳಿಗೆ ವೈಯಕ್ತಿಕ ಕಾನೂನು ಪಾಲಿಸುತ್ತಿದ್ದಾರೆ. ರಾಜ್ಯದ ಹಿಂದೂ ವಿವಾಹ ಕಾನೂನು ಬೇರೆಯಾಗಿದೆ. ಆಸ್ತಿ ಹಂಚಿಕೆ ಸಂಬಂಧಿಸಿ ವೈಯಕ್ತಿಕ ಕಾನೂನು ಪಾಲನೆ
ವ್ಯಾಜ್ಯಗಳಿಗೆ ಕಾರಣವಾಗುತ್ತಿದೆ. ಮಹಿಳೆಯರಿಗೆ ಪತಿ ಅಥವಾ ತಂದೆ ಆಸ್ತಿಯಲ್ಲಿ ಸಮಪಾಲು ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಈ ಎಲ್ಲವಕ್ಕೂ ಮುಕ್ತಿ ಹಾಡಲು ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಸಾಧ್ಯತೆ ಹೆಚ್ಚಿದೆ. ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸುವ ಬಗ್ಗೆ ಇದೀಗ ಕರ್ನಾಟಕ ಬಿಜೆಪಿ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಜಾರಿಗೆ ಬರುವ ಸಾಧ್ಯತೆಯಿದೆ.