ಬೆಳಗಾವಿ: ಬೆಳಗಾವಿ ಪ್ರೌಢಶಾಲಾ ವಿದ್ಯಾರ್ಥಿನಿ ಈಗ ಎಲ್ಲರ ಸ್ಪೂರ್ತಿಯ ಸೆಲೆಯಾಗಿದ್ದಾಳೆ. ಸ್ಪೂರ್ತಿ ಎಂಬ ಬೆಳಗಾವಿಯ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದ ತಾಯಿ- ಮಕ್ಕಳನ್ನು ಸಾವಿನಿಂದ ಪಾರು ಮಾಡಿದ ಘಟನೆ ಇದಾಗಿದೆ.
ಆಗಸ್ಟ್ 22ರ ರಾತ್ರಿ 8.30 ರ ಸುಮಾರಿಗೆ ಸ್ಪೂರ್ತಿ ತಂದೆ- ತಾಯಿ ಜೊತೆ ವಸಹನದಲ್ಲಿ ತೆರಳುತ್ತಿದ್ದಳು. ಈ ಸಂದರ್ಭದಲ್ಲಿ ಬೆಳಗಾವಿ ಕಾಂಗ್ರೆಸ್ ರಸ್ತೆಯ ರೈಲ್ವೆ ಮೊದಲ ಗೇಟ್ ಬಳಿ ಅಪರಿಚಿತೆ ತನ್ನಿಬ್ಬರು ಮಕ್ಕಳ ಜೊತೆ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಬಾಲಕಿಯ ಅನುಮಾನಕ್ಕೆ ಕಾರಣವಾಯಿತು. ತಕ್ಷಣ ವಾಹನದಿಂದ ಇಳಿದು ಸ್ಥಳೀಯರನ್ನು ಸೇರಿಸಿ ಅವರ ಸಹಾಯದಿಂದ ಮೂವರನ್ನು ಸುರಕ್ಷಿತವಾಗಿ ರೈಲ್ವೆ ಹಳಿಯಿಂದ ಹೊರಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾಳೆ. ಕೊನೆಗೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದ ಈ ಮೂವರನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾಳೆ. ಬೆಳಗಾವಿ ಬಾಲಿಕಾ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಸ್ಪೂರ್ತಿ ಸವ್ವಾಸೇರಿ ಅವರಿಗೆ ಕರ್ನಾಟಕ ಸರ್ಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಬೇಕು ಎಂಬ ಅಗ್ರಹ ಇದೀಗ ವ್ಯಕ್ತವಾಗಿದೆ ಭವಿಷ್ಯದಲ್ಲಿ ಬಾಲಕಿಗೆ ಸಮಾಜ ಸೇವೆಯಲ್ಲಿ ಮುಂದುವರಿಯಬೇಕೆಂಬ ತುಡಿತ ಇರುವುದು ವಿಶೇಷ.